ಅನಧಿಕೃತ ಗೈರಿಗೆ ಹಾಜರಿ ಕೃಪಾಕಟಾಕ್ಷ!

0102
Published on

ಬೆಳಗಾವಿ: ಶಾಲಾವಧಿಯಲ್ಲಿ ಶಿಕ್ಷಕರು ಮೇಲಧಿಕಾರಿಗಳು ಪೂರ್ವಾನುಮತಿ ಇಲ್ಲದೆ, ಇಲಾಖೆ ಕಚೇರಿ ಭೇಟಿ ಸೇರಿದಂತೆ ಇನ್ನಿತರ ಕೆಲಸದ ನೆಪದಿಂದ ಶಾಲೆಗೆ ಚಕ್ಕರ್​ ಹಾಕುತ್ತಿರುವುದಕ್ಕೆ ಅಧಿಕಾರಿಗಳಿಂದ ಶಿಸ್ತುಕ್ರಮದ ಬದಲು ಕೃಪಾಕಟಾಕ್ಷ ದೊರೆಯುತ್ತಿದೆ.!


ಹೌದು. ಶಿಕ್ಷಣ ಇಲಾಖೆಯ ತಾಲೂಕು ಮಟ್ಟದ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡದೇ, ಮೀಟಿಂಗ್​ ಮತ್ತು ವಿಡಿಯೋ ಕಾನ್ಫರನ್ಸ್​ ನೆಪದಲ್ಲಿ ಕಚೇರಿಯಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದು, ಗ್ರಾಮೀಣ ಪ್ರದೇಶಕ್ಕೆ ಬರುವುದೇ ಇಲ್ಲ. ಹೀಗಾಗಿ ಶಾಲೆಗಳಲ್ಲಿ ಎಸ್​ಡಿಎಂಸಿ ಸದಸ್ಯರೇ ಕರೆ ಮಾಡಿ, ಎಲ್ಲಿದ್ದೀರಾ ಶಿಕ್ಷಕರೇ ಎಂದು ದಿನವೂ ಕೇಳುವ ಅನಿವಾರ್ಯತೆ ಜಿಲ್ಲೆಯಲ್ಲಿ ಸೃಷ್ಟಿಯಾಗಿದೆ.

"ಸಿಆರ್​ಪಿ ಮತ್ತು ಸಮನ್ವಯ ಅಧಿಕಾರಿ ಸೇರಿ ಬಿಇಒ ಹಾಗೂ ಡಿಡಿಪಿಐ ಕಚೇರಿ ಅಧಿಕಾರಿಗಳು ಶಾಲೆಗಳತ್ತ ಸುಳಿಯುವುದೇ ಇಲ್ಲ. ಬಂದರೂ, ಬಣ್ಣ&ಸುಣ್ಣದ ಲೆಕ್ಕ ನೋಡಿ ಸುಮ್ಮನಾಗುತ್ತಾರೆ. ಮಕ್ಕಳ ಶೈಕ್ಷಣಿಕ ಪ್ರಗತಿ ಮೇಲೆ ದುಷ್ಪರಿಣಾಮ ಬೀರುವ ಶಿಕ್ಷಕಕರ ವರ್ತನೆ ವಿರುದ್ಧ ಕ್ರಮ ಜರುಗಿಸುವುದು ಅಥವಾ ಶೋಕಾಸ್​ ನೋಟಿಸ್​ ನೀಡುವುದಾಗಲಿ ಮಾಡುವುದೇ ಇಲ್ಲ' ಎಂದು ಎಸ್​ಡಿಎಂಸಿ ಸದಸ್ಯರೊಬ್ಬರು ಅಸಹಾಕಯತೆ ವ್ಯಕ್ತಪಡಿಸಿದರು.

ಜಿಲ್ಲೆಯ ಬೆಳಗಾವಿ ನಗರ, ಬೆಳಗಾವಿ ಗ್ರಾಮೀಣ, ಬೈಲಹೊಂಗಲ, ರಾಯಬಾಗ, ಕಿತ್ತೂರು, ರಾಮದುರ್ಗ ಹಾಗೂ ಸವದತ್ತಿ ತಾಲೂಕಿನ ಹಲವು ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಬೆಳಗ್ಗೆ ಸಹಿಮಾಡಿದ "ಶಿಕ್ಷಕರು ಮಧ್ಯಾಹ್ನ ಇರುವುದಿಲ್ಲ. ಬೆಳಗ್ಗೆಯಿಂದ ಶಾಲೆಯಲ್ಲಿರದ ಶಿಕ್ಷಕಕರು ಶಾಲೆಯ ಕೊನೆಯ ಬೆಲ್​ ಹೊಡೆಯಲಷ್ಟೇ ಸಂಜೆ ಬಂದು ಸಹಿ ಮಾಡುತ್ತಾರೆ ಎಂಬ ಆರೋಪಗಳು ಕೇಳಿಬರುತ್ತಿದೆ.

ಮಕ್ಕಳಿಂದಲೇ ಪಾಲಕರಗೆ ದೂರು!: ಮೊನ್ನೆ ಕೊಟ್ಟ ಹೋಮ್​ ವರ್ಕ್​ ಇನ್ನು ನೋಡಿಲ್ಲ. ಇವತ್ತ ಏನು ಹೋಮ್​ ವರ್ಕ್​ ಕೊಟ್ಟಿಲ್ಲ. ಸಂಜೆ ಬಂದವರು ಮೊಬೈಲ್​ ಗೇಮ್​ ಆಡುತ್ತಿದ್ದರು ಎಂದು ಮಕ್ಕಳೇ ಪಾಲಕರು ಮುಂದೆ ದೂರುತಿದ್ದಾರೆ. ಈ ಬಗ್ಗೆ ಪಾಲಕರು ಶಾಲೆಗೆ ಬಂದು ವಿಚಾರಿಸಿದರೆ ಇನ್ನುಳಿದ ಶಿಕ್ಷಕಕರು ತಪ್ಪಿತಸ್ಥ ಶಿಕ್ಷಕರ ದರ್ಬಾರ್​ ಹೇಳಿ, ಬೇಸರ ವ್ಯಕ್ತಪಡಿಸುತ್ತಿರುವುದು ಸರ್ಕಾರಿ ಶಾಲೆಯಿಂದ ಖಾಸಗಿ ಶಾಲೆಗೆ ಮಕ್ಕಳ ಪಲಾಯನಕ್ಕೆ ಕಾರಣವಾಗಿದೆ.

ಇಂಥವರ ಮೇಲೆ ಕ್ರಮ ಜರುಗಿಸದೇ ಪರೋಕ್ಷವಾಗಿ ಖಾಸಗಿ ಶಾಲೆಗಳ ದಾಖಲಾತಿ ಹೆಚ್ಚಳಕ್ಕೆ ಒತ್ತು ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಳೆದ ಮೂರು ತಿಂಗಳ ಹಿಂದಷ್ಟೇ ಸ್ವತ@ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಅವರು ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಸಭೆ ನಡೆಸಿ, ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದ ಅಧಿಕಾರಿಗಳ ಬೆವರಿಳಿಸಿದ್ದರು. ಆದರೂ, ಪರಿಸ್ಥಿತಿ ಇನ್ನು ಸುಧಾರಿಸದಿರುವುದು ಪಾಲಕರನ್ನು ಆತಂಕಕ್ಕೆ ತಳ್ಳಿದೆ. ಇನ್ನಾದರೂ ಸಂಬಂಧಪಟ್ಟ ಉನ್ನತ ಅಧಿಕಾರಿಗಳು ಇತ್ತ ಗಮನಹರಿಸಿ ಕಟ್ಟುನಿಟ್ಟಿನ ಮೇಲ್ವಿಚಾರಣೆ ಮಾಡಬೇಕಿದೆ.

ಇಲಾಖೆ ಅಧಿಕಾರಿಗಳು ಭೇಟಿ, ನೀಡಿ ಪರಿಶೀಲಿಸುತ್ತಲೇ ಇರುತ್ತಾರೆ. ಆದರೂ, ಅರಳೀಕಟ್ಟಿಯ ಪ್ರೌಢಶಾಲೆಯ ಶಿಕ್ಷಕರು ಕರ್ತವ್ಯಲೋಪ ಎಸಗಿರುವುದು ಪತ್ರಿಕೆ ಮೂಲಕ ಗಮನಕ್ಕೆ ಬಂದಿದೆ. ಶಾಲಾವಧಿಯಲ್ಲಿ ಕರ್ತವ್ಯದ ಮೇಲಿರದೆ ವೈಯಕ್ತಿಕ ಕೆಲಸಕ್ಕೆ ತೆರಳಿದ್ದ ಶಿಕ್ಷಕರಿಂದ ತಪ್ಪೊಪ್ಪಿಗೆ ಪತ್ರ ಬರೆಯಸಿಕೊಳ್ಳಲಾಗಿದೆ. ಜತೆಗೆ ಒಂದು ದಿನದ ಸಂಬಳ ಕಡಿತಕ್ಕೂ ಕ್ರಮ ಜರುಗಿಸಲಾಗಿದೆ. ಮುಂದೆ ಹೀಗಾಗದಂತೆ ಎಚ್ಚರ ವಹಿಸುವಂತೆ ಸೂಕ್ತ ನಿರ್ದೇಶನ ನೀಡಲಾಗಿದೆ.| ರುದ್ರಗೌಡ ಜುಟ್ಟನವರಬಿಇಒ ಬೆಳಗಾವಿ ಗ್ರಾಮೀಣ

| ಶಿವಾನಂದ ಕಲ್ಲೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net