ಅನಧಿಕೃತ ಕೆಂಪುಕಲ್ಲಿನ ಗಣಿಗಾರಿಕೆ

22bkl1 (1)
Published on

ಭಟ್ಕಳ: ತಾಲೂಕಿನ ಮುಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಯ ಮರಂಬಳ್ಳಿಯಲ್ಲಿ ಅನಧಿಕೃತವಾಗಿ ಕೆಂಪುಕಲ್ಲಿನ ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಕಾರವಾರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ತಂಡ, ಭಟ್ಕಳ ಕಂದಾಯ ಇಲಾಖೆಯ ತಂಡ ದಾಳಿ ನಡೆಸಿ ಯಂತ್ರೋಪಕರಣ ವಶಕ್ಕೆ ಪಡೆದ ಘಟನೆ ಮಂಗಳವಾರ ನಡೆದಿದೆ.

ತಾಲೂಕಿನ ಮುಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಯ ತಲಾಂದ ಗ್ರಾಮದ ಮರಂಬಳ್ಳಿಯ ಸ್ಥಳೀಯರು ಈ ಹಿಂದೆ ಜಿಲ್ಲಾಧಿಕಾರಿ ಸಹಿತ ಹಲವು ಸಂಬಂಧಿಸಿದ ಅಧಿಕಾರಿಗಳಿಗೆ ಅನಧಿಕೃತವಾಗಿ ನಡೆಸುತ್ತಿರುವ ಕೆಂಪು ಕಲ್ಲಿನ ಗಣಿಗಾರಿಕೆ ನಿಲ್ಲಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಭಟ್ಕಳ ತಾಲೂಕಿನ ಕಂದಾಯ ಇಲಾಖೆ ಅಧಿಕಾರಿಗಳು ಜೂ. 19ರಂದು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ಆದರೆ, ಇದು ತಮ್ಮ ಮಾಲ್ಕಿ ಜಮೀನು ಎಂದು ಚಂದ್ರು ನಾರಾಯಣ ನಾಯ್ಕ ಹಾಗೂ ಅಲ್ಲಿ ಕೆಲಸ ಮಾಡುತ್ತಿದ್ದವರು ವಾದಿಸಿದ್ದರಿಂದ ಅಧಿಕಾರಿಗಳು ಈ ಸ್ಥಳವನ್ನು ಸರ್ವೆ ಮಾಡುವವರೆಗೂ ಇಲ್ಲಿ ಯಾವುದೇ ಗಣಿಗಾರಿಕೆ ಮಾಡದಂತೆ ಸೂಚಿಸಿದ್ದರು.

ಅದರಂತೆ ಕಾರವಾರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಜಯರಾಮ ನಾಯ್ಕ, ಭಟ್ಕಳ ಆರ್​ಐ ಶಂಭು ಕೆ., ಚಾಂದಪಾಸಾ, ಗ್ರಾಮ ಸಹಾಯಕ ಮಂಜುನಾಥ ನಾಯ್ಕ ಅವರು ಮಂಗಳವಾರ ಸ್ಥಳಕ್ಕೆ ತೆರಳಿ ಸರ್ವೆ ಮಾಡಲು ಮುಂದಾದಾಗ ಅಲ್ಲಿ ಅಕ್ರಮವಾಗಿ ಕೆಂಪು ಕಲ್ಲಿನ ಗಣಿಗಾರಿಕೆ ಚಟುವಟಿಕೆ ನಡೆಯುತ್ತಿತ್ತು. ಅಧಿಕಾರಿಗಳನ್ನು ನೋಡುತ್ತಿದ್ದಂತೆ ಅಲ್ಲಿನ ಕಾರ್ವಿುಕರು ಓಡಿ ಹೋಗಿದ್ದಾರೆ. ಸ.ನಂ 155ರಲ್ಲಿ ಸರ್ವೆ ನಡೆಸಿದಾಗ ಅದು ಸರ್ಕಾರಿ ಜಾಗ ಎಂದು ಗೊತ್ತಾಗಿದೆ. ಗಣಿಗಾರಿಕೆಗೆ ಬಳಸುತ್ತಿದ್ದ 2 ಟಿಲ್ಲರ್ ಮಷಿನ್, ಒಂದು ಇಂಜಿನ್ ಹಾಗೂ ಇತರೆ ಸಾಮಗ್ರಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಲ್ಲಿಂದ ಪರಾರಿ ಆಗಿರುವವರನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net