

ಶಿರಾ: ಅನಧಿಕೃತವಾದ ನಿವೇಶನದಲ್ಲಿ ಕಟ್ಟಿರುವ ಕಟ್ಟಡವನ್ನು ಸಕ್ರಮಗೊಳಿಸುವ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಅನಧಿಕೃತ ಕಟ್ಟಡಗಳು ಇನ್ನು ಮುಂದೆ ತಲೆ ಎತ್ತಲು ಬಿಡುವುದಿಲ್ಲ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.
ನಗರಸಭೆಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ಸುಪ್ರೀಂ ಕೋರ್ಟ್ ತೀರ್ಪು ದೇಶಕ್ಕೆ ಅನ್ವಯವಾಗುತ್ತದೆ. ಈ ತೀರ್ಪಿನ ಅನುಗುಣವಾಗಿ ದಿನಾಂಕ 01&-03&2025ರಂದು ಕರ್ನಾಟಕ ಸರ್ಕಾರ ಅನಧಿಕೃತ ಕಟ್ಟಡಗಳಿಗೆ ಸಂಬಂಧಿಸಿದ ಎಂಟು ನಿರ್ದೇಶನಗಳನ್ನು ನೀಡಿ ಸುತ್ತೋಲೆ ಹೊರಡಿಸಿದೆ. ಅಂತಹ ಕಟ್ಟಡಗಳಿಗೆ ನೀರು, ವಿದ್ಯುತ್ ಸಂಪರ್ಕ, ಒಳಚರಂಡಿ ಸಂಪರ್ಕ ನೀಡಬಾರದೆಂಬ ನಿರ್ದೇಶನವಿದೆ ಎಂದು ಮಾಹಿತಿ ನೀಡಿದರು.
ಈ ವೇಳೆ ಮಾತನಾಡಿದ ನಗರಸಭೆ ಸದಸ್ಯರಾದ ಆರ್.ರಾಮ ಹಾಗೂ ಶಿವಶಂಕರ್, ಶಿರಾ ನಗರದಲ್ಲಿ ಶೇ. 80ರಷ್ಟು ಡಿಸಿ ಕನ್ವರ್ಷನ್ ನಿವೇಶನಗಳಿವೆ. ನಾವು ನಿವೇಶನ ಮಾಲೀಕರಿಂದ ಇದುವರೆಗೂ ಕಂದಾಯ ಕಟ್ಟಿಸಿಕೊಂಡು ಬಂದಿದ್ದೇವೆ. ಈಗ ನಾವು ಅನಧಿಕೃತ ಕಟ್ಟಡಕ್ಕೆ ನೀರು, ವಿದ್ಯುತ್ ನೀಡುವುದಿಲ್ಲ ಎಂದರೆ ನಮ್ಮನ್ನು ಜನ ಸುಮ್ಮನೆ ಬಿಡುತ್ತಾರ? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಶಾಸಕರು, ಎಲ್ಲದಕ್ಕೂ ಪರಿಹಾರ ಇರುತ್ತದೆ, ಇದಕ್ಕಾಗಿ ವಿಶೇಷ ಸಭೆ ಕರೆದು ಸಮಸ್ಯೆಗಳ ಬಗ್ಗೆ ಚರ್ಚಿಸಿ ರ್ನಿಣಯ ಸರ್ಕಾರಕ್ಕೆ ಕಳಿಸೋಣ ಎಂದರು.
ನಗರಸಭೆ ಸದಸ್ಯೆ ಪೂಜಾ ಮಾತನಾಡಿ, ನಕಲಿ ಇ&ಸ್ವತ್ತು ಜನರ ಕೈಯಲ್ಲಿ ಹರಿದಾಡುತ್ತಿವೆ. ಇದು ಹೇಗೆ? ಎಂದು ನಕಲಿ ಇ&ಸ್ವತ್ತಿನ ಪ್ರತಿಯನ್ನು ಸಭೆಯಲ್ಲಿ ಪ್ರದರ್ಶಿಸಿದರು. ಇದು ಅಪರಾಧ, ಇದರ ಬಗ್ಗೆ ತನಿಖೆ ನಡೆಸಿ ಯಾವ ಅಧಿಕಾರಿ ತಪ್ಪು ಮಾಡಿದ್ದಾರೋ ಅವರ ಮೇಲೆ ಕ್ರಮ ತೆಗೆದುಕೊಳ್ಳಿ ಎಂದು ಆಯುಕ್ತರಿಗೆ ಶಾಸಕರು ಸೂಚಿಸಿದರು. ಕಳೆದ ವರ್ಷ ಸುಂಕ ವಸೂಲಿಯ ಟೆಂಡರ್ 9 ತಿಂಗಳಿಗೆ ಜಿಎಸ್ಟಿ ಹೊರತುಪಡಿಸಿ 17,80,000 ರೂ.ಗಳಿಗೆ ಹರಾಜಾಗಿತ್ತು. ಆದರೆ ಈ ವರ್ಷ 12 ತಿಂಗಳಿಗೆ 13, 60000 ರೂ.ಗಳಿಗೆ ಹರಾಜು ಆಗಿದೆ. ವರ್ಷದಿಂದ ವರ್ಷಕ್ಕೆ ಹರಾಜು ಹೆಚ್ಚಿಗೆ ಆಗಬೇಕು. ಆದರೆ ಕಡಿಮೆಯಾಗಿದೆ ಏಕೆ ಎಂದು ಸದಸ್ಯೆ ಸಾನಿಯಾ ಆರ್ ಖಾದರ್ ಪ್ರಶ್ನಿಸಿದರು.
ಇದು ಬಹಿರಂಗ ಹರಾಜಾಗಿದ್ದು, ಕಡಿಮೆ ಹರಾಜಾದ ಕಾರಣ ವಿಶೇಷ ಸಭೆ ಕರೆದು ಚರ್ಚಿಸಿ ಈಗಿನ ಬಿಡ್ದಾರರಿಗೆ 2 ಲಕ್ಷ ಹೆಚ್ಚಿಗೆ ನೀಡಲು ತೀಮಾರ್ನಿಸಲಾಗಿದೆ ನಗರಸಭೆ ಆಯುಕ್ತ ರುದ್ರೇಶ್ ಹೇಳಿದಾಗ, ಶಾಸಕರು ಮಧ್ಯಪ್ರವೇಶಿಸಿ ಮರು ಟೆಂಡರ್ ಮಾಡಿ ಎಂದು ಆಯುಕ್ತರಿಗೆ ನಿರ್ದೇಶಿಸಿದರು.
ಬುಕ್ಕಾಪಟ್ಟಣ ಸರ್ಕಲ್ನಲ್ಲಿ ಸಾರ್ವಜನಿಕ ಶೌಚಗೃಹ ವಿಷಯಕ್ಕೆ ಸದಸ್ಯರಾದ ಸುಶೀಲಾ ವಿರುಪಾಕ್ಷ , ಉಮಾ ವಿಜಯರಾಜ್ ಎಸ್.ಎಲ್.ರಂಗನಾಥ್ ನಡುವೆ ಮಾತಿನ ಚಕಾಮಕಿ ನಡೆಯಿತು. ನಗರಸಭೆ ಸದಸ್ಯೆ ಉಮಾ ವಿಜಯರಾಜ್ ಮಾತನಾಡಿ, ಖಾಸಗಿ ಬಸ್ ನಿಲ್ದಾಣ ಕಾಮಗಾರಿ ವಿಳಂಬ ವಾಗುತ್ತಿದೆ ಏಕೆ? ಎಂದು ಪ್ರಶ್ನಿಸಿದಾಗ ಶುಕ್ರವಾರದಿಂದ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಆಯುಕ್ತರು ತಿಳಿಸಿದರು.
ಬಾಕಿ ಹಣ ಯಾವಾಗ ವಸೂಲಿ ಮಾಡುತ್ತೀರಾ?: ನಗರಸಭೆ ಸದಸ್ಯ ರಂಗನಾಥ್ ಮಾತಾಡಿ, ಮೂರುವರೆ ಕೋಟಿಗೂ ಅಧಿಕ ಅಂಗಡಿ ಮಳಿಗೆ ಬಾಡಿಗೆ ಹಣ ಬಾಕಿ ಇದೆ ಇದನ್ನು ಯಾವಾಗ ವಸೂಲಿ ಮಾಡುತ್ತೀರಾ ಪ್ರತಿ ಸಾರಿ ಏನಾದರೂ ಹೇಳುತ್ತೀರಾ ಎಂದಾಗ, ಈಗಾಗಲೇ 3 ಕೋಟಿ ವಸೂಲಿ ಮಾಡಿದ್ದೇವೆ. ಕ್ರಮೇಣ ಎಲ್ಲವನ್ನು ಹಂತ ಹಂತವಾಗಿ ವಸೂಲಿ ಮಾಡುತ್ತೇವೆ ಎಂದು ನಗರಸಭೆ ಆಯುಕ್ತರು ತಿಳಿಸಿದರು.