ಅನಧಿಕೃತ ಅಂಗಡಿ ತೆರವು

3 vikram 3
Published on

ಧಾರವಾಡ: ನಗರದ ಸೂಪರ್ ಮಾರುಕಟ್ಟೆಯಲ್ಲಿ ಕಳೆದ ತಿಂಗಳು ಮಹಾನಗರ ಪಾಲಿಕೆಯಿಂದ ನಡೆಸಿದ್ದ ಅನಧಿಕೃತ ಅಂಗಡಿಗಳ ತೆರವು ಕಾರ್ಯಾಚರಣೆ ಮುಂದುವರಿದಿದ್ದು, ಶನಿವಾರ ಸಹ ಕೆಲ ಅಂಗಡಿಗಳನ್ನು ತೆರವುಗೊಳಿಸಲಾಯಿತು.
ಮಾರುಕಟ್ಟೆ ರಸ್ತೆ ಅತಿಕ್ರಮಿಸಿ ಅಂಗಡಿ ನಿರ್ವಿುಸಿದ್ದರಿಂದ ಜನರ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಇದೇ ಕಾರಣಕ್ಕೆ ಅಂಗಡಿ ತೆರವಿಗೆ ಪಾಲಿಕೆ ಅಧಿಕಾರಿಗಳು ಹಲವು ಬಾರಿ ಎಚ್ಚರಿಕೆ ನೀಡಿದ್ದರು. ಆದರೆ ಅಂಗಡಿಕಾರರು ಮಾತ್ರ ಕ್ಯಾರೆ ಎಂದಿರಲಿಲ್ಲ. ಹೀಗಾಗಿ, ಕಳೆದ ತಿಂಗಳು ಕೆಲ ಅಂಗಡಿಗಳನ್ನು ತೆರವು ಮಾಡಿದ್ದರು. ಆಗ ಕೆಲ ಅಂಗಡಿಕಾರರು, ಸಾಮಗ್ರಿಗಳು ಹೆಚ್ಚಿರುವ ಕಾರಣಕ್ಕೆ ಸ್ವಯಂ ತೆರವಿಗೆ ಅವಕಾಶ ಕೋರಿದ್ದರು.
ಅಂಗಡಿಕಾರರ ಮನವಿಗೆ ಸ್ಪಂದಿಸಿದ್ದ ಅಧಿಕಾರಿಗಳು ಕೆಲ ದಿನಗಳ ಮಟ್ಟಿಗೆ ಅವಕಾಶ ನೀಡಿದ್ದರು. ಆದಾಗ್ಯೂ ಮಾಲೀಕರು ಮಾತ್ರ ತಾವು ಹೇಳಿದ ಅವಧಿಯಲ್ಲಿ ಅಂಗಡಿ ತೆರವು ಮಾಡದೆ ತಿಂಗಳು ಗಟ್ಟಲೇ ವ್ಯಾಪಾರ ವಹಿವಾಟು ನಡೆಸಿದ್ದರು. ಹೀಗಾಗಿ, ಮತ್ತೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಒಟ್ಟು 49 ಅಂಗಡಿಗಳನ್ನು ತೆರವು ಮಾಡಿದರು.
ಸಂಜೆ ಹೊತ್ತಿಗೆ ಮಳೆ ಆರಂಭವಾಗಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಭಾನುವಾರ ಮತ್ತೆ ತೆರವು ಕಾರ್ಯ ನಡೆಯಲಿದ್ದು, ಎಲ್ಲ ಅನಧಿಕೃತ ಅಂಗಡಿಗಳನ್ನು ತೆರವು ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಲಿಕೆ ವಲಯ ಕಚೇರಿ ಸಹಾಯಕ ಆಯುಕ್ತ ಎಂ.ಬಿ. ಸಬರದ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ನೀಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net