

ಕಲಘಟಗಿ: ಲಾಕ್ಡೌನ್ ಕರ್ಫ್ಯೂ ಜಾರಿಯಲ್ಲಿದ್ದಾಗ್ಯೂ ನಿಯಮ ಉಲ್ಲಂಘಿಸುತ್ತಿರುವವರ ವಿರುದ್ಧ ಜಿಲ್ಲಾದ್ಯಂತ ಪೊಲೀಸ್ ಅಧಿಕಾರಿಗಳು ಲಾಠಿ ರುಚಿ ತೋರಿಸಿಲ್ಲ. ಆದರೆ, ಲಾಠಿ ಪ್ರದರ್ಶಿಸಿ ಭಯ ಮೂಡಿಸುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಹೇಳಿದರು.
ಕಲಘಟಗಿ ಹೊರವಲಯ ರಾಷ್ಟ್ರೀಯ ಹೆದ್ದಾರಿಯ ಶೆಟ್ಟಿ ಲಂಚ್ ಹೋಂ ಬಳಿಯಲ್ಲಿ ನಿರ್ವಿುಸಿದ ಅಂತರ್ ಜಿಲ್ಲಾ ಚೆಕ್ ಪೋಸ್ಟ್ಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು. ಲಾಕ್ಡೌನ್ ಕರ್ಫ್ಯೂ ಜಾರಿ ವೇಳೆ ಅನಗತ್ಯವಾಗಿ ಬೀದಿಗೆ ಬರುತ್ತಿರುವುದು ಕಾನೂನು ಉಲ್ಲಂಘನೆಯಾಗುತ್ತದೆ. ಹೀಗಾಗಿ ಅಂಥವರ ವಿರುದ್ಧ ಕಟ್ಟು ನಿಟ್ಟಿನ ಕಾನೂನು ಕ್ರಮಕ್ಕೆ ಮಾರ್ಗದರ್ಶನ ನೀಡಲಾಗಿದೆ ಎಂದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ ಅನವಶ್ಯಕವಾಗಿ ಸಂಚರಿಸುವವರ ವಿರುದ್ಧ ಪ್ರಕರಣ ದಾಖಲಿಸಿ ವಾಹನಗಳನ್ನು ಸೀಜ್ ಮಾಡುವಂತೆ ನಿರ್ದೇಶಿಸಲಾಗಿದೆ. ಅವಶ್ಯಕ ಕೆಲಸ ಕಾರ್ಯಗಳನ್ನು ಹೊರತು ಪಡಿಸಿ ಯಾರೊಬ್ಬರೂ ಸುಖಾ ಸುಮ್ಮನೆ ಓಡಾಡಬಾರದು. ಆಸ್ಪತ್ರೆ, ಔಷಧ, ಜೀವನಾಶ್ಯಕ ವಸ್ತುಗಳ ಖರೀದಿ ಇದ್ದಲ್ಲಿ ಆ ಕುರಿತು ಪುರಾವೆಗಳು ನಿಮ್ಮ ಬಳಿ ಇರಲಿ. ಇದೀಗ ಕರೊನಾ ವೈರಸ್ ಹರಡದಂತೆ ತಡೆಗಟ್ಟುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರದ್ದಾಗಿದೆ ಎಂದರು.
ಜಿಲ್ಲೆಯಲ್ಲಿ ಈಗಾಗಲೇ ಕಾನೂನು ಪರಿಪಾಲನೆ ಮಾಡದವರ ಮೇಲೆ 49 ಪ್ರಕರಣಗಳನ್ನು ದಾಖಲಿಸಲಾಗಿದೆ. 6,000 ರೂ. ದಂಡ ವಸೂಲಿ, 110 ಸೆಕ್ಷನ್ ಅಡಿಯಲ್ಲಿ ಎರಡು, ಒಂದು ಗೆಂಬ್ಲಿಂಗ್ ಹಾಗೂ ಒಂದು ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಜಿಲ್ಲಾದ್ಯಂತ ಪೊಲೀಸ್ ಇಲಾಖೆಯ ಎಲ್ಲ ಅಧಿಕಾರಿಗಳು ಹಗಲಿರುಳು ಗಸ್ತು ತಿರುಗುತ್ತಿದ್ದೇವೆ. ತಪ್ಪಿತಸ್ತರು ಕಂಡಲ್ಲಿ ನಿರ್ದಾಕ್ಷಿಣ್ಯವಾಗಿ ಪ್ರಕರಣ ದಾಖಲಿಸುವುದು ಮತ್ತು ಬಳಸಿರುವ ವಾಹನಗಳನ್ನು ಜಪ್ತಿ ಮಾಡುವಂತೆ ಸೂಚಿಸಲಾಗಿದೆ. ಹೀಗಾಗಿ ಯಾರೂ ಮನೆಯಿಂದ ಹೊರಗಡೆ ಬಾರದೇ ಸರ್ಕಾರದ ಆದೇಶವನ್ನು ಶಿರಸಾವಹಿಸಿ ಪಾಲಿಸಬೇಕು ಎಂದು ವರ್ತಿಕಾ ಕಟಿಯಾರ್ ವಿನಂತಿಸಿದರು. ಜಿಲ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿ ರವಿ ನಾಯ್ಕ, ಸಿಪಿಐ ವಿಜಯ ಬಿರಾದಾರ, ಎಂ.ಎಫ್. ಕಟ್ಟೇಗೌಡರ, ಚೆಕ್ಪೋಸ್ಟ್ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.
ಟ್ರ್ಯಾಕ್ಸ್ನಲ್ಲಿ ಬಂದವರನ್ನು ವಾಪಸ್ ಕಳಿಸಿದ ಅಧಿಕಾರಿಗಳು: ಕಲಘಟಗಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ವಿುಸಿದ ಅಂತರ್ ಜಿಲ್ಲಾ ಚೆಕ್ ಪೋಸ್ಟ್ನಲ್ಲಿ ಶನಿವಾರ ಉತ್ತರ ಕನ್ನಡ ಜಿಲ್ಲೆಯಿಂದ ಪ್ರಯಾಣಿಕರನ್ನು ತುಂಬಿಕೊಂಡು ಆಗಮಿಸಿದ್ದ ಟೆಂಪೊ ಟ್ರ್ಯಾಕ್ಸ್ ವಾಹನವನ್ನು ಜಿಲ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿ ರವಿ ನಾಯ್ಕ ಪರಿಶೀಲಿಸಿದರು. ಬಳಿಕ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು, ತಾವು ಬಂದಿರುವ ಸ್ಥಳಕ್ಕೆ ಮರಳಿ ಹೋಗಿ ಅಲ್ಲಿಯ ಅಧಿಕಾರಿಗಳಲ್ಲಿ ತಮ್ಮ ತೊಂದರೆ ಹೇಳಿಕೊಂಡು ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿ ಹಿಂತಿರುಗಿ ಕಳುಹಿಸಲಾಯಿತು. ಚೆಕ್ಪೋಸ್ಟ್ ಅಧಿಕಾರಿ ಸಹಾಯಕ ಕೃಷಿ ನಿರ್ದೇಶಕ ಎಂ.ಎಫ್. ಕಟ್ಟೇಗೌಡರ ಇದ್ದರು.</