ಅನಗತ್ಯ ಹೊರ ಬಂದವರಿಗೆ ಲಾಠಿ ರುಚಿ!

19-RNR-01A
Published on

ಹಾವೇರಿ/ರಾಣೆಬೆನ್ನೂರ: ಕರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಘೊಷಿಸಿದ ಸಂಡೇ ಲಾಕ್​ಡೌನ್​ಗೆ ನಗರ ಸೇರಿ ಜಿಲ್ಲೆಯಾದ್ಯಂತ ಜನರಿಂದ ಉತ್ತಮ ಸ್ಪಂದನೆ ದೊರೆತಿದ್ದು, ಸಂಪೂರ್ಣ ಜಿಲ್ಲೆ ಸ್ತಬ್ಧಗೊಂಡಿತ್ತು.

ರಾಣೆಬೆನ್ನೂರ ಸೇರಿ ಕೆಲ ನಗರ, ಪಟ್ಟಣ ಪ್ರದೇಶದಲ್ಲಿ ಬೆಳಗಿನ ಸಮಯದಲ್ಲಿ ಕೆಲವರು ವಿನಾಕಾರಣ ಹೊರಗಡೆ ಬರುವುದು ಕಂಡುಬಂತು. ಆದರೆ, ಪೊಲೀಸರು ಲಾಠಿ ರುಚಿ ತೋರಿಸಿದ ಹಿನ್ನೆಲೆಯಲ್ಲಿ ಎಲ್ಲರೂ ಮನೆ ಸೇರಿದರು.

ಜಿಲ್ಲೆಯ ನಗರ ಹಾಗೂ ಪಟ್ಟಣದ ಬಸ್ ನಿಲ್ದಾಣಗಳು, ತರಕಾರಿ ಮಾರುಕಟ್ಟೆ, ದಿನಸಿ ಮಾರುಕಟ್ಟೆ ಸೇರಿ ಇತರ ಪ್ರಮುಖ ರಸ್ತೆಗಳು, ಮಾರುಕಟ್ಟೆಗಳು ಖಾಲಿ ಖಾಲಿಯಾಗಿದ್ದವು. ನಗರ ಸಾರಿಗೆ ಸೇರಿ ಯಾವುದೇ ವಾಹನಗಳು ರಸ್ತೆಗಿಳಿದಿರಲಿಲ್ಲ. ಜನನಿಬಿಡಿ ಪ್ರದೇಶಗಳಾದ ಮಾರುಕಟ್ಟೆ, ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು.

ಅಗತ್ಯ ವಸ್ತುಗಳಾದ ಹಾಲು, ಔಷಧ, ಪೆಟ್ರೋಲ್ ಬಂಕ್, ತರಕಾರಿ, ಹೋಟೆಲ್​ನಲ್ಲಿ ಪಾರ್ಸಲ್, ಮಾಂಸ ಮಾರಾಟಕ್ಕೆ ಅವಕಾಶ ನೀಡಲಾಗಿತ್ತಾದರೂ ಜನತೆ ಹೊರ ಬರದ ಕಾರಣ ವ್ಯಾಪಾರ ನಡೆಯಲಿಲ್ಲ. ಈಗಾಗಲೇ ಕರೊನಾ ಹಾವಳಿಯಿಂದ ಜನರಲ್ಲೂ ಭಯ ಹುಟ್ಟಿದ್ದರಿಂದ ಅನಗತ್ಯ ಓಡಾಟ ನಡೆಸುವವರ ಸಂಖ್ಯೆಯಲ್ಲೂ ಇಳಿಕೆಯಾಗಿತ್ತು.

ಲಾಠಿ ಏಟು, ದಂಡದ ಬಿಸಿ: ಹಾವೇರಿ ಹಾಗೂ ರಾಣೆಬೆನ್ನೂರ ನಗರದಲ್ಲಿ ಕಳೆದ 2ನೇ ಭಾನುವಾರ ಮಾಸ್ಕ್ ಧರಿಸದೇ ಓಡಾಟ ನಡೆಸುವವರ ಹಾಗೂ ಅನಗತ್ಯವಾಗಿ ಮನೆಯಿಂದ ಹೊರ ಬಂದ ಬೈಕ್ ಸವಾರರಿಗೆ ಪೊಲೀಸರು 200 ರೂ., 500 ರೂ. ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದ್ದರು. 3ನೇ ಭಾನುವಾರ ಅನಗತ್ಯ ಓಡಾಡುವವರಿಗೆ ಲಾಠಿ ರುಚಿ ತೋರಿಸಿದರು. ರಾಣೆಬೆನ್ನೂರಿನ ಬಸ್ ನಿಲ್ದಾಣ ವೃತ್ತ, ಸಿದ್ದೇಶ್ವರ ನಗರ ವೃತ್ತ, ಪೋಸ್ಟ್ ವೃತ್ತ ಹಾಗೂ ಹಾವೇರಿಯ ಸಿದ್ದಪ್ಪ ವೃತ್ತದಲ್ಲಿ ನಾಲ್ಕೈದು ಜನ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ, ಇಲ್ಲಸಲ್ಲದ ನೆಪ ಹೇಳುವವರಿಗೆ ಗದರಿಸಿ ಮನೆಗೆ ಕಳುಹಿಸಿದರು.

ಏಟು ಬಿದ್ದ ಮೇಲೆ ಮನೆ ಸೇರಿದರು: ರಾಣೆಬೆನ್ನೂರಿನಲ್ಲಿ ಶಾಸಕ ಅರುಣಕುಮಾರ ಪೂಜಾರ ಒಂದು ವಾರದ ಹಿಂದೆಯೇ ಸ್ವಯಂ ಪ್ರೇರಣೆಯಿಂದ ಲಾಕ್​ಡೌನ್ ಮಾಡುವಂತೆ ಜನರಲ್ಲಿ ಮನವಿ ಮಾಡಿದ್ದರು. ಆದರೆ, ಶಾಸಕರ ಮನವಿಗೆ ಸ್ಪಂದಿಸದ ಜನತೆ ಎಲ್ಲೆಂದರಲ್ಲಿ ಗುಂಪು ಕಟ್ಟಿಕೊಂಡು ಓಡಾಡಿ ಸ್ವಯಂ ಪ್ರೇರಣೆ ಲಾಕ್​ಡೌನ್​ಗೆ ಡೋಂಟ್ ಕೇರ್ ಎಂದಿದ್ದರು. ಅದರಂತೆ ಸಂಡೇ ಲಾಕ್​ಡೌನ್​ನಲ್ಲೂ ಓಡಾಡಲು ಹೋಗಿ ಪೊಲೀಸರಿಂದ ಏಟು ತಿಂದರು. ಬೆಳಗ್ಗೆಯಿಂದಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ಬೈಕ್, ಕಾರು, ಟಾಟಾ ಏಸ್ ವಾಹನಗಳಿಗೆ ದಂಡ ವಿಧಿಸಿದರು. ಅನವಶ್ಯಕವಾಗಿ ಕಾಲ್ನಡಿಗೆಯಲ್ಲಿ ಹೊರಗೆ ಬಂದವರಿಗೂ ಲಾಠಿ ಏಟು ನೀಡಿದರು. ಪೊಲೀಸರು ಲಾಠಿ ರುಚಿ ತೋರಿಸುತ್ತಿರುವ ವಿಷಯ ಹಬ್ಬಿದ ಬಳಿಕ ಮಧ್ಯಾಹ್ನ 12ರ ನಂತರ ಜನರ ಓಡಾಟ ಕಡಿಮೆಯಾಯಿತು.

ಸಾರ್ವಜನಿಕರಲ್ಲಿ ಆತಂಕ: ಮದುವೆ ಸಮಾರಂಭದಲಿ ಪಾಲ್ಗೊಂಡ ಜನರಿಗೆ ಪಾಸಿಟಿವ್ ಬಂದ ನಂತರ ರಾಣೆಬೆನ್ನೂರಿನಲ್ಲಿ ಸ್ವಲ್ಪ ಭಯದ ವಾತಾವರಣ ಉಂಟಾಗಿದೆ. ಇಲ್ಲಿನ ಮಾರುತಿ ನಗರದಲ್ಲಿನ ಪರಸ್ಪರ ಬಂಧುಗಳಾಗಿರುವ 32 ಜನರಿಗೆ ಶುಕ್ರವಾರ ಕರೊನಾ ಪಾಸಿಟಿವ್ ದೃಢಗೊಂಡಿದೆ. ಸುತ್ತಲಿನ 100 ಮೀಟರ್ ಪ್ರದೇಶವನ್ನು ಕಂಟೇನ್ಮೆಂಟ್ ಜೋನ್ ಎಂದು ಘೊಷಿಸಲಾಗಿದೆ. ಈ ಪ್ರಕರಣದ ನಂತರ ಸಾರ್ವಜನಿಕರಲ್ಲಿ ಆತಂಕ ಮೂಡಿದೆ. ಇವರ ಸಂರ್ಪತರನ್ನು ಗುರುತಿಸುವ ಕಾರ್ಯ ನಡೆದಿದ್ದು, ಮತ್ತೆಷ್ಟು ಜನರಿಗೆ ಸೋಂಕು ತಗುಲಿದೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಲೇ ಇರುವುದರಿಂದ ಜನತೆ ಪರಸ್ಪರ ಅಂತರ ಕಾಪಾಡುವುದು ಅಗತ್ಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net