ಅನಗತ್ಯ ಮಾತುಗಳಿಗೆ ಕಿವಿಯಾಗದಿರಿ

CTD BOVI SRI
Published on

ಚಿತ್ರದುರ್ಗ: ಸಮಾಜದ ಸಂಘಟನೆ ಸಂದರ್ಭದಲ್ಲಿ ಎದುರಾಗುವ ಅನಗತ್ಯ ಮಾತುಗಳಿಗೆ ಕಿವಿ ಕೂಡದೆ ಮುನ್ನಡೆಯುವಂತೆ ಭೋವಿ ಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಸಮುದಾಯದ ಮುಖಂಡರಿಗೆ ಕಿವಿಮಾತು ಹೇಳಿದರು.
ಶ್ರೀಗಳ ದೀಕ್ಷಾ ರಜತ ಮಹೋತ್ಸವ ಯಶಸ್ಸಿನ ಹಿನ್ನೆಲೆಯಲ್ಲಿ ಭೋವಿ ಗುರುಪೀಠದಲ್ಲಿ ಭಾನುವಾರ ಏರ್ಪಡಿಸಿದ್ದ ಅಭಿನಂದನಾ ಕಾರ‌್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಸಂಘಟನೆ ಸಂದರ್ಭದಲ್ಲಿ ಉಪಯುಕ್ತವಲ್ಲದ ವಿಷಯಗಳಿಗೆ ಗಮನ ಹರಿಸದೆ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎಂದರು.
ಕಾರ‌್ಯಕ್ರಮದ ಯಶಸ್ಸಿಗೆ ಹಲವರ ಸಹಾಯ, ಸಹಕಾರ ಅಗತ್ಯ. ರಜತ ಮಹೋತ್ಸವ ಸಮಾರಂಭ ತಮ್ಮೆಲ್ಲರ ಗರಿಷ್ಠ ಸಹಕಾರದಿಂದ ಯಶಸ್ವಿಯಾಗಿದೆ. ನಿರಂತರ ಪ್ರವಾಸದ ಮೂಲಕ ರಾಜ್ಯ, ಹೊರರಾಜ್ಯಗಳಲ್ಲಿ ಸಮಾಜದ ಸಂಘಟನೆ ಕೆಲಸ ಮುಂದುವರಿಸುತ್ತೇನೆ. ಸಮಾಜಕ್ಕೆ ಧಕ್ಕೆ ಎದುರಾದರೆ ಹೋರಾಟ ನಡೆಸುತ್ತೇನೆ ಎಂದು ಹೇಳಿದರು.
ಶಿಕ್ಷಣ, ಸಂಘಟನೆ, ಹೋರಾಟಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಶ್ರೀಮಠದಲ್ಲಿ ಬಡ ಮಕ್ಕಳಿಗೆ ಅನ್ನ, ಜ್ಞಾನ ದಾಸೋಹದ ವ್ಯವಸ್ಥೆ ಇದೆ. ಉತ್ತಮ ಶಿಕ್ಷಣದೊಂದಿಗೆ ವಿವಿಧ ಹುದ್ದೆಗಳನ್ನು ಪಡೆಯಬೇಕಿದೆ. ಇದರಿಂದ ನಮ್ಮ ಸಮಾಜಕ್ಕೂ ಅನುಕೂಲವಾಗಲಿದೆ ಎಂದರು.
ಸಮುದಾಯದ ಸಂಖ್ಯೆಯ ನಿಖರತೆ ಗೊತ್ತಾಗಲು ಜನಗಣತಿ ಮಾಡಬೇಕಿದೆ. ಜಾತಿಯನ್ನು ಗರ್ವದಿಂದ ಬಹಿರಂಗವಾಗಿ ಹೇಳುವಂತಾಗಬೇಕು. ಪರಿವರ್ತನೆಯಿಂದ ನಮ್ಮ ಘನತೆ ಗೌರವ ಹೆಚ್ಚಾಗುತ್ತದೆ, ಸವಾಲುಗಳನ್ನು ಸಮನಾಗಿ ಸ್ವೀಕರಿಸಬೇಕಿದೆ ಎಂದರು.
ರಾಜ್ಯದ ವಿವಿಧ ಜಿಲ್ಲೆಗಳ ಸಮಾಜದ ಮುಖಂಡರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದವರನ್ನು ಶ್ರೀಗಳು ಸನ್ಮಾನಿಸಿದರು.
ಮುಖಂಡರಾದ ರವಿ ಮಾಕಳಿ, ಗೌನಹಳ್ಳಿ ಗೋವಿಂದಪ್ಪ, ತಿಪ್ಪೇಸ್ವಾಮಿ, ರವಿ ಪೂಜಾರ್, ವಾಣಿಕ್‌ರಾವ್ ಒಡೆಯರ್, ಲಕ್ಷ್ಮಣ್ ಗಾಡಿವಡ್ಡರ್, ಸತ್ಯಪ್ಪ, ಕೃಷ್ಣ, ಸಿದ್ದಪ್ಪ, ದೊಡ್ಡರಾಮಣ್ಣ, ಮಹೇಶ್, ಕುಮಾರ್, ಉಮಾಶಂಕರ್, ರಾಮಾಂಜಿ, ನಾಗಪ್ಪ ವಡ್ಡರ್, ಕೃಷ್ಣಮೂರ್ತಿ, ಆಂಜನೇಯ, ಡಿ.ಸಿ.ಮೋಹನ್, ಮಂಜುನಾಥ್ ಹನುಮಂತಪ್ಪ ಮತ್ತಿತರ ಪ್ರಮುಖರು ಇದ್ದರು.

*ಕೋಟ್
ಸಮಾಜ, ಮಠ, ಗುರುಗಳನ್ನು ಗೌರವಿಸಬೇಕಿದೆ. ಎಲ್ಲಿದ್ದರೂ ನಮ್ಮತನವನ್ನು ಬಿಡಬಾರದು. ಸಮಾಜದಲ್ಲಿ ಹುಟ್ಟಿದ ನಾವು ಸಮಾಜದ ಋಣ ತೀರಿಸುವ ಕಾರ್ಯ ಮಾಡಬೇಕಿದೆ.
ಎಂ.ಸಿ.ರಘುಚಂದನ್, ಮುಖಂಡ

*ಕೋಟ್
ಗುರುಗಳಿಗೆ ಶಕ್ತಿ ತುಂಬಿದರೆ ಸಮಾಜದ ಸಂಘಟನೆಗೆ ಬಲ ಬರುತ್ತದೆ. ಸಮಾಜದ ಸಹಾಯ ಪಡೆದವರು ಮರಳಿ ಸಮಾಜಕ್ಕೆ ನೆರವು ನೀಡಬೇಕು. ಜವಾಬ್ದಾರಿಯಿಂದ ಸಮಾಜವನ್ನು ಮುನ್ನಡೆಸುವ ಕೆಲಸ ಮಾಡಬೇಕಿದೆ. ಸಮಾಜ ಪಕ್ಷಾತೀತವಾಗಿ ಇರಬೇಕು. ನಮ್ಮ ಶಕ್ತಿ ವೃದ್ಧಿಸಿದರೆ ರಾಜಕೀಯ ಪಕ್ಷಗಳು ಗುರುತಿಸುತ್ತವೆ.
ಎಸ್.ರವಿಕುಮಾರ್, ಅಧ್ಯಕ್ಷ, ಭೋವಿ ಅಭಿವೃದ್ಧಿ ನಿಗಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net