

ಹಾಸನ: ನಾನು ಚಿಕ್ಕ ವಯಸ್ಸಿನಲ್ಲಿ ಇದ್ದಾಗ ತಾಯಿ ಜತೆಗೆ ಇದೇ ಮಹಾರಾಜ ಪಾರ್ಕ್‌ಗೆ ಬಂದು ಆಟ ಆಡುತ್ತಿದ್ದೆ. ಆ ವೇಳೆ ಅನೇಕ ಸಣ್ಣ-ಪುಟ್ಟ ಪ್ರಾಣಿ- ಪಕ್ಷಿಗಳು ಕಾಣ ಸಿಗುತ್ತಿದ್ದವು ಎಂದು ಬಾಲ್ಯದ ನೆನಪುಗಳನ್ನು ಶಾಸಕ ಎಚ್.ಪಿ. ಸ್ವರೂಪ್ ಸ್ಮರಿಸಿದರು.
ಮಹಾರಾಜ ಪಾರ್ಕ್ ಹಿತರಕ್ಷಣಾ ಸಮಿತಿ, ಹಾಸನ ಜಿಲ್ಲಾ ಅಮೆಚೂರ್ ಬಾಡಿ ಬಿಲ್ಡರ್ಸ್ ಸಂಸ್ಥೆ, ಜಿಲ್ಲಾ ಕ್ರೀಡಾ ಪರಿಷತ್, ಹಾಸನ ಜಿಲ್ಲಾ ಪವರ್ ಲಿಫ್ಟಿಂಗ್ ಸಂಸ್ಥೆ, ಜಿಲ್ಲಾ ಯೋಗಸಂಸ್ಥೆ, ಜಿಲ್ಲಾ ಪಂಚಕುಸ್ತಿ ಸಂಸ್ಥೆ, ಕರ್ನಾಟಕ ರಾಜ್ಯ ಗ್ರಾಮೀಣ ಕ್ರೀಡೆಗಳ ಒಕ್ಕೂಟ ಹಾಗೂ ವಿವಿಧ ಸಂಘ - ಸಂಸ್ಥೆಗಳ ವತಿಯಿಂದ ಹಾಸನ ಕ್ಷೇತ್ರದ ಶನಿವಾರ ಸನ್ಮಾನ, ಗೌರವ ಸ್ವೀಕರಿಸಿ ಮಾತನಾಡಿದ ನೂತನ ಶಾಸಕ ಎಚ್.ಪಿ. ಸ್ವರೂಪ್, ನನ್ನ ತಂದೆಯ ಅವಧಿಯಲ್ಲಿಯೂ ಎಲ್ಲ ಸಂದರ್ಭದಲ್ಲಿಯೂ ಅವರ ಜತೆ ನಿಂತ ಎಲ್ಲ ಹಿರಿಯ ನಾಗರಿಕರು ಹಾಗೂ ಸಂಘ ಸಂಸ್ಥೆಗಳ ಮುಖಂಡರಿಗೆ ಧನ್ಯವಾದಗಳು ಎಂದು ಕೃತಜ್ಞತೆ ಅರ್ಪಿಸಿದರು.
ಈ ಹಿಂದೆ ಪಾರ್ಕ್‌ನಲ್ಲಿ ನಡೆಯುತ್ತಿದ್ದ ಕಾಂಕ್ರೀಟ್ ಕಾಮಗಾರಿಗಳನ್ನು ಖಂಡಿಸಿ ಅನೇಕ ಬಾರಿ ಪ್ರತಿಭಟನೆ ನಡೆಸಿದ್ದೆವು. ಆದರೆ ಆದಾಗ್ಯೂ ಎಲ್ಲ ಹಿರಿಯರ ಮನವಿಗಳನ್ನು ದಿಕ್ಕರಿಸಿ ಕಾಂಕ್ರೀಟ್ ಕಾಮಗಾರಿಗಳನ್ನು ಮಾಡಲು ಮುಂದಾಗಿದ್ದರು. ಆದರೆ ಈಗ ನಾನು ಶಾಸಕನಾದ ಮೇಲೆ ಅನಗತ್ಯ ಕಾಮಗಾರಿಗಳನ್ನು ನಿಲ್ಲಿಸಿ ಹಿರಿಯರ ಮಾರ್ಗದರ್ಶನದಂತೆ ಯಾವ ರೀತಿ ಅಭಿವೃದ್ಧಿಪಡಿಸಬೇಕು ಎಂಬುದರ ಬಗ್ಗೆ ಚರ್ಚಿಸಲಾಗುವುದು. ಈ ಬಗ್ಗೆ ಅಧಿಕಾರಿಗಳ ಜತೆಯೂ ಸಭೆ ನಡೆಸಿ, ಪಾರ್ಕ್ ಅಭಿವೃದ್ಧಿಗೆ ಬಿಡುಗಡೆಯಾಗಿರುವ ಹಣ ಹಾಗೂ ಅಗತ್ಯ ಇರುವ ಕಾಮಗಾರಿಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಈಗಾಗಲೇ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವಾರು ಸಲಹೆಗಳು ಬಂದಿದ್ದು ಅದಕ್ಕೆ ಅನುಗುಣವಾಗಿ ಪಾರ್ಕ್ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕ್ರೀಡಾ ಪರಿಷತ್ ಅಧ್ಯಕ್ಷ ಕೆ.ಎಸ್.ಎನ್. ಮೂರ್ತಿ ಮಾತನಾಡಿ, ಹಾಸನ ಜಿಲ್ಲಾ ಕೇಂದ್ರದಲ್ಲಿ ಹಳೆಯ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೆಲಸಗಳು ಆಗಬೇಕಿದೆ. ಅನೇಕ ಹಳೆಯ ಕಟ್ಟಡಗಳನ್ನು ಈ ಹಿಂದೆ ಒಡೆದು ಹಾಕುವ ಕೆಲಸಗಳು ಆಗಿದ್ದು, ಮುಂದಿನ ದಿನಗಳಲ್ಲಿ ಈಗಿರುವ ಶಾಲಾ ಕಟ್ಟಡಗಳು ಹಾಗೂ ಐತಿಹಾಸಿಕ ಸ್ಥಳಗಳನ್ನು ಉಳಿಸಿ ಬೆಳೆಸುವ ಕೆಲಸಗಳನ್ನು ಮಾಡುವಂತೆ ಶಾಸಕರಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಆಯುಕ್ತರಾದ ಮಹೇಶ್, ಸದಸ್ಯರಾದ ಕ್ರಾಂತಿ ಪ್ರಸಾದ್ ತ್ಯಾಗಿ, ಮಂಜುನಾಥ್, ಗಿರೀಶ್, ಅಕ್ಬರ್, ಮಹೇಶ್, ಕಮಲ್ ಕುಮಾರ್, ದಿನೇಶ್, ಚಂದ್ರೇಗೌಡ, ಇರ್ಷಾದ್ ಪಾಷ, ರಫಿಕ್, ಭಾನು ಪ್ರಕಾಶ್, ಚಂದ್ರೇಗೌಡ ಸೇರಿದಂತೆ ಅನೇಕರು ಭಾಗವಹಿಸಿದ್ದರು.