

ಚಿತ್ರದುರ್ಗ: ಏರುತ್ತಿರುವ ತಾಪಮಾನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಎಚ್ಚರಿಸಿದರು.
ಮುದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಿಸಿಗಾಳಿ, ಬಿಸಿಲಾಘಾತ ನಿರ್ವಹಣೆ ಕುರಿತ ಜಾಗೃತಿ ಕಾರ‌್ಯಕ್ರಮದಲ್ಲಿ ಮಾತನಾಡಿದರು.
ಈಗಾಗಲೇ ಅಲ್ಲಲ್ಲಿ ಬಿಸಿಲಾಘಾತ ಘಟನೆಗಳಾಗಿವೆ. ಆದ್ದರಿಂದ ಸಾರ್ವಜನಿಕರು ಕಾರಣವಿಲ್ಲದೆ ಬಿಸಿಲಿನಲ್ಲಿ ಸುತ್ತಾಡಬಾರದು. ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸಬೇಕು ಎಂದರು.
ನೀರು, ಮಜ್ಜಿಗೆ, ಎಳನೀರು, ನಿಂಬೆ ರಸ, ದ್ರವರೂಪದ ಆಹಾರ ಸೇವನೆ, ನಿರ್ಜಲೀಕರಣ ಆಗದಂತೆ ಒಆರ್‌ಎಸ್ ಸೇವಿಸಬೇಕೆಂದ ಅವರು, ಹವಾಮಾನ ವೈಪರೀತ್ಯದ ಇಂಥ ಸನ್ನಿವೇಶದಲ್ಲಿ ಆರೋಗ್ಯದೆಡೆ ಕಾಳಜಿ ವಹಿಸಬೇಕು ಎಂದು ತಿಳಿಸಿದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಮಸಾಲೆ ಪದಾರ್ಥಗಳ ಸೇವನೆ ಸಲ್ಲದು. ಸಾಧ್ಯವಾದಷ್ಟು ಶುದ್ಧ ನೀರು ಕುಡಿಯಬೇಕು. ಕಾಫಿ, ಟೀ ಸೇವನೆ ನಿಯಂತ್ರಿಸಬೇಕು. ಬಿಗಿ ಇಲ್ಲದ, ತೆಳು ಕಾಟನ್ ವಸ್ತ್ರ ಧರಿಸಬೇಕು ಎಂದರು.
ವೈದ್ಯಾಧಿಕಾರಿ ಡಾ.ಸುಷ್ಮಿತಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಜಾನಕಿ ಮಾತನಾಡಿದರು.