ಅಧ್ಯಾತ್ಮಿಕ ಪುಸ್ತಕಗಳಿಗೆ ದರ್ಶನ್ ಮೊರೆ

30 yerriswamy 03
Published on

ಬಳ್ಳಾರಿ : ನಗರ ಕೇಂದ್ರ ಕಾರಾಗೃಹದ ಹೈ ಸೆಕ್ಯೂರಿಟಿ ಸೆಲ್‌ನಲ್ಲಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಅಧ್ಯಾತ್ಮಿಕ ಪುಸ್ತಕಗಳ ಮೊರೆ ಹೋಗಿದ್ದಾರೆ. ಸೆಲ್‌ನಲ್ಲಿ ಒಂಟಿಯಾಗಿರುವ ದರ್ಶನ್ ಲಲಿತ ಸಹಸ್ರನಾಮ ಶ್ಲೋಕ ಹಾಗೂ ಆಧ್ಯಾತ್ಮಿಕ ಪುಸ್ತಕ ಓದಿ ಬೇಸರದ ಒಂಟಿತನ ಕಳೆದುಕೊಂಡಿದ್ದಾರೆ.
ಇಲ್ಲಿನ ಕೇಂದ್ರ ಕಾರಾಗೃಹವು ಹೊಸ ಸ್ಥಳ ಹಿನ್ನಲೆ ಸರಿಯಾಗಿ ನಿದ್ದೆ ಬಾರದೆ ಇರುವುದರಿಂದ, ಪರಪ್ಪನ ಆಗ್ರಹಾರದಿಂದ ತಂದಿದ್ದ ಎರಡು ಬ್ಯಾಗ್‌ನಲ್ಲಿನ ಅಧ್ಯಾತ್ಮಿಕ ಪುಸ್ತಕಗಳನ್ನು ತಡರಾತ್ರಿಯವರೆಗೆ ಓದಿ ನಿದ್ದೆಗೆ ಜಾರಿದ್ದಾರೆ. ಅಲ್ಲದೆ, ವಿಪರೀತ ಸೊಳ್ಳೆಗಳ ಕಾಟ ಕಾಡಿದ್ದು, ಶುಕ್ರವಾರ ಉಪಹಾರ ಬೆಳಗ್ಗೆ ಉಪ್ಪಿಟ್ಟು ಸೇವಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶಾಸ್ತ್ರಿ ಸಿನಿಮಾ ರಿಲೀಸ್ : ಬೆಂಗಳೂರಿನ ಪರಪ್ಪನ ಆಗ್ರಹಾರದಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರಗೊಂಡ ಹಿನ್ನಲೆ ಇಲ್ಲಿನ ರಾಘವೇಂದ್ರ ಚಿತ್ರಮಂದಿರದಲ್ಲಿ ದರ್ಶನ್ ಅಭಿಮಾನಿಗಳು ಶಾಸ್ತ್ರಿ ಸಿನಿಮಾವನ್ನು ಮರು ಬಿಡುಗಡೆ ಮಾಡಿದ್ದರು. ಆದರೆ, ಬೆರಣಿಕೆ ಸಂಖ್ಯೆಯಷ್ಟೆ ಮಾತ್ರ ಸಿನಿಮಾ ವೀಕ್ಷಿಸಿದ್ದರಿಂದ, ಎರಡನೇ ಷೋ ನಡೆಸಲು ಮಾಲೀಕರು ಹಿಂದೇಟು ಹಾಕಿದರು.
ಮಟನ್ ಊಟ : ಜೈಲು ನಿಯಮದ ಪ್ರಕಾರ ವಾರದ ಒಂದು ಶುಕ್ರವಾರ ಕೈದಿಗಳಿಗೆ ಮಾಂಸ ಆಹಾರ ದೊರೆಯಲಿದೆ. ನಗರದ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿರುವ ದರ್ಶನ್ ಸೇರಿ 385 ಕೈದಿಗಳಿಗೆ ರಾತ್ರಿ ಮಟನ್ ಊಟ ಸಿಗಲಿದೆ. ಒಂದು ವಾರ ಮಟನ್, ಇನ್ನೊಂದು ವಾರ ಚಿಕನ್ ಊಟ ನೀಡಲಾಗುತ್ತಿದ್ದು, 40 ಕೆಜಿ ಮಟನ್ ಬೆಳಗ್ಗೆಯೇ ಸಿಬ್ಬಂದಿ ಜೈಲಿನೊಳಗೆ ತೆಗೆದುಕೊಂಡು ಹೋಗಲಾಯಿತು. ಪ್ರತಿಯೊಬ್ಬ ಕೈದಿಗೆ 115 ಗ್ರಾಂ ಮಟನ್ ನೀಡಲಾಗುತ್ತಿದೆ. ಆದರೆ, ವಿಚಾರಣಾಧಿನ ಕೈದಿಗಳಿಗೆ ಮಾಂಸ ಆಹಾರದ ಊಟ ನೀಡುವುದಿಲ್ಲ ಎಂದು ಜೈಲಿಗೆ ಮಟನ್ ವಿತರಿಸುವ ತಿಳಿಸಿದರು.
ತೆಂಗಿನಕಾಯಿ ಒಡೆದ ಅಭಿಮಾನಿಗಳು : ಅವಳಿ ಜಿಲ್ಲೆಯ ದರ್ಶನ್ ಅಭಿಮಾನಿಗಳು ಇಲ್ಲಿನ ಕನಕದುರ್ಗಮ್ಮ ದೇವಸ್ಥಾನದಲ್ಲಿ ದೇವಿಗೆ, ದರ್ಶನ್ ಜೈಲಿನಿಂದ ಬೇಗ ಬಿಡುಗಡೆಗೊಳ್ಳಲಿ ಎಂದು ತೆಂಗಿನ ಕಾಯಿ ಒಡೆದು ವಿಶೇಷ ಪೂಜೆ ಸಲ್ಲಿಸಿದರು. ಆವರಣದಲ್ಲಿದ್ದ ಬೃಹತ್ ದೇವಿ ಮೂರ್ತಿಗೆ ಹಾರ ಹಾಕಿದರು. ಹಾರ ಹಾಕುವ ವೇಳೆ ದೇವಿಯ ತಲೆಯ ಮೇಲೆ ಕಾಲು ಇಟ್ಟು ಹಾರ ಹಾಕಿದ್ದಾರೆ ಎಂದು ಭಕ್ತರು ಅಭಿಮಾನಿಗಳ ವಿರುದ್ಧ ಅಕ್ರೋಶಗೊಂಡರು. ಬಳಿಕ, ದೇವಿಗೆ ಕುಂಕಮರ್ಚಾನೆ ಸಲ್ಲಿಸಿದ ಕುಂಕಮವನ್ನು ದರ್ಶನ್ ನೀಡಲು ಜೈಲಿನತ್ತ ಹೊರಟರು. ಆದರೆ, ಜೈಲು ಸಿಬ್ಬಂದಿ ದರ್ಶನ್ ಭೇಟಿಗೆ ಅನುಮತಿಗೆ ಅವಕಾಶವಿಲ್ಲ ಎಂದು ನಿರಾಕರಿಸಿದರು. ಜೈಲಿನಲ್ಲಿರುವ ದರ್ಶನ್‌ಗೆ ಪೊಲೀಸ್ ಭದ್ರತೆ ಮುಂದುವರೆಯಿತು. ಜೈಲು ಮುಂಭಾಗ ಹಾಗೂ ಹೊರ ಭಾಗದಲ್ಲಿ ಪೊಲೀಸ್ ನಿಯೋಜಿಸಲಾಗಿತ್ತು. ಅದರೆ, ಬೇರೆ ಕೈದಿಗಳ ಸಂಬಂಧಿಕರಿಗೆ ಭೇಟಿಗೆ ಅವಕಾಶ ಮಾಡಿಕೊಡಲಾಗಿತ್ತು. ಜೈಲಿನ ರಸ್ತೆಯ ಎರಡು ಬದಿಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net