ಅಧ್ಯಾತ್ಮದಿಂದ ಮನಸ್ಸಿಗೆ ಶಾಂತಿ, ನೆಮ್ಮದಿ: ಮಳಲಿ ಮಠದ ಶ್ರೀ ಆಶೀರ್ವಚನ

RPT WEB
Published on

ರಿಪ್ಪನ್‌ಪೇಟೆ: ಸಾತ್ವಿಕ ಆಹಾರ ಮತ್ತು ಸಾತ್ವಿಕ ಗುಣಗಳಿಂದ ಆರೋಗ್ಯ ಪ್ರಾಪ್ತಿಯಾಗುತ್ತದೆ ಎಂದು ಮಳಲಿ ಮಠದ ಶ್ರೀ ಗುರು ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಗವಟೂರು ಹೊಳೆಸಿದ್ದೇಶ್ವರ ದೇವಸ್ಥಾನದಲ್ಲಿ ಎಳ್ಳಮಾವಾಸೆ ಪ್ರಯುಕ್ತ ಶುಕ್ರವಾರ ಆಯೋಜಿಸಿದ್ದ ಶ್ರೀಸ್ವಾಮಿಗೆ ವಿಶೇಷ ರುದ್ರಾಭಿಷೇಕ ಮತ್ತು ಧರ್ಮಸಭೆಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.

ಆಧ್ಯಾತ್ಮ, ಸದಾಚಾರ, ಆರೋಗ್ಯ ಮನುಷ್ಯನ ಬದುಕಿಗೆ ಬಹುಮುಖ್ಯವಾಗಿವೆ. ಅಧ್ಯಾತ್ಮದ ಬಗ್ಗೆ ಒಲವಿದ್ದರೆ ಮನಸ್ಸಿಗೆ ಶಾಂತಿ, ನೆಮ್ಮದಿ ಲಭಿಸುತ್ತದೆ. ಪೂರ್ವಜರು ಹಿಂದಿನಿಂದಲೂ ನಡೆಸಿಕೊಂಡು ಬಂದ ಸದಾಚಾರಗಳನ್ನು ಅನುಸರಿಸುತ್ತ ಬಂದರೆ ಪ್ರತಿಯೊಬ್ಬರಿಗೂ ಸಮಾಧಾನ, ಸಮೃದ್ಧಿ ದೊರೆಯುತ್ತದೆ. ಸಮಾಜದ ಗುರು-ಹಿರಿಯರು, ತಂದೆ-ತಾಯಿಗಳನ್ನು ಗೌರವಿಸುವುದು ಎಲ್ಲರ ಕರ್ತವ್ಯ. ಇಂತಹ ಉಜ್ವಲ ಪರಂಪರೆ ಉಳಿಸಿ-ಬೆಳೆಸಬೇಕಾದ ಜವಾಬ್ದಾರಿ ಭಕ್ತರ ಮೇಲಿದೆ. ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಉಳಿಸುವಲ್ಲಿ ಕೈಜೋಡಿಸಿ ಎಂದು ಮನವಿ ಮಾಡಿದರು.

ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಅನಾದಿ ಕಾಲದಿಂದ ಇಲ್ಲಿ ಆಚರಿಸಿಕೊಂಡು ಬರುತ್ತಿರುವ ಹೊಳೆಸಿದ್ದೇಶ್ವರ ಜಾತ್ರೆ ಇಂದು ಪೂಜೆಗೆ ಮಾತ್ರ ಸೀಮಿತವಾಗಿದೆ. ಪುರಾಣ ಪ್ರಸಿದ್ಧವಾದ ಈ ಕ್ಷೇತ್ರದಲ್ಲಿ ಹೊಳೆಜಾತ್ರೆಯೆಂದೇ ಖ್ಯಾತಿ ಪಡೆದು ಬೃಹತ್ ಜಾನುವಾರು ಜಾತ್ರೆ ನಡೆಯುತ್ತಿದ್ದುದು ಈಗ ನೆನಪು ಮಾತ್ರ. ತಿಂಗಳುಗಳ ಕಾಲ ರಾಜ್ಯದಲ್ಲಿರುವ ಜಾನುವಾರುಗಳ ಎಲ್ಲ ತಳಿಗಳು ಇಲ್ಲಿ ಪ್ರದರ್ಶನಗೊಂಡು ಮಾರಾಟವಾಗುತ್ತಿದ್ದವು. ಮಲೆನಾಡು ಗಿಡ್ಡ ತಳಿಯನ್ನು ಇಲ್ಲಿ ಸಂರಕ್ಷಿಸಿ ಮಾರಾಟ ಮಾಡುತ್ತಿದ್ದ ಹೆಗ್ಗಳಿಕೆ ಜಾತ್ರೆಗಿತ್ತು. ಯಾಂತ್ರಿಕ ಬದುಕಿಗೆ ಹೊಂದಿಕೊಂಡಿರುವ ರೈತರು ಇಂದು ತಮ್ಮ ಕೃಷಿ ಚಟುವಟಿಕೆಗಳಿಗಾಗಿ ಟ್ಯಾಕ್ಟರ್ ಬಳಸುತ್ತಿದ್ದು, ಉಳುವ ಎತ್ತುಗಳು, ಗಾಡಿಗಳು ಕಾಣೆಯಾಗಿವೆ. ಮಲೆನಾಡು ಭಾಗದ ಒಕ್ಕಲುತನದ ಶ್ರೇಷ್ಠ ಪರಂಪರೆ ಇಂದು ಇಲ್ಲದಾಗಿದೆ. ಹಬ್ಬ ಹರಿದಿನಗಳಲ್ಲಿ ಮೆಲುಕು ಹಾಕುವ ಮೂಲಕವಾದರೂ ನಮ್ಮ ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಿದೆ ಎಂದರು.

ಬಸವಣ್ಣನಿಗೆ ವಿಶೇಷ ಪೂಜೆ: ಕೋಡೂರು ಗ್ರಾಪಂ ವ್ಯಾಪ್ತಿಯ ಹಿಂಡ್ಲೇಮನೆ ರಾಮತೀರ್ಥ ದೇವಸ್ಥಾನದಲ್ಲಿ ತೀರ್ಥಸ್ನಾನ, ವಿಶೇಷ ಪೂಜೆ, ಹರತಾಳು ಲಿಂಗನಕೊಪ್ಪದಲ್ಲಿ ಜೋಡಿ ಬಸವಣ್ಣ, ಕೊಳವಂಕದ ಬಸವಣ್ಣನಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಭಕ್ತರು ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net