ಚಿತ್ರದುರ್ಗ: ಹೆಚ್ಚು ಗಳಿಕೆಯು ಮನುಷ್ಯನನ್ನು ದುಃಖಿತನನ್ನಾಗಿಸುತ್ತದೆ. ಬಹಿರಂಗದ ಸಿರಿ ಸಂಪತ್ತಿನಿಂದ ಸುಖ ದೊರಕದು. ನೆಮ್ಮದಿಗೆ ಪಾರಮಾರ್ಥಿಕ ಬದುಕಿನ ಅಗತ್ಯವಿದೆ ಎಂದು ಮುರುಘಾಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು. ಮುರುಘಾ ಮಠದಿಂದ ಆ.17-ಸೆಪ್ಟೆಂಬರ್15ರ ವರೆಗೆ ರಾಜ್ಯದ ವಿವಿಧೆಡೆ ಏರ್ಪಡಿಸಿರುವ ‘ನಿತ್ಯ ಕಲ್ಯಾಣ’ ಶ್ರಾವಣ ಮಾಸದ ವಿಶೇಷ ಚಿಂತನಾ ಕಾರ್ಯಕ್ರಮಕ್ಕೆ ನಗರದ ಶಾಸಕರ ಕಚೇರಿಯಲ್ಲಿ ಗುರುವಾರ ಚಾಲನೆ ನೀಡಿ ಮಾತನಾಡಿದರು. ನಮ್ಮ ದೃಷ್ಟಿ ಅಧ್ಯಾತ್ಮದೆಡೆ ಇರಬೇಕು. ಇದರಿಂದ ನಿಜವಾದ ಸಂತೋಷ ಸಿಗುತ್ತದೆ. ಬೇಕು ಎನ್ನುವುದಕ್ಕಿಂತ ಸಾಕು ಎನ್ನುವ ಮನೋಭಾವ ಬೆಳೆಸಿಕೊಳ್ಳಬೇಕಿದೆ ಎಂದರು. ಸಮ್ಮುಖ ವಹಿಸಿದ್ದ ಛಲವಾದಿ ಗುರುಪೀಠದ ಶ್ರೀ ಬಸವನಾಗೀದೇವ ಸ್ವಾಮೀಜಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣ ಬಂದ ಬಳಿಕ ಪುರುಷಾರ್ಥ ಹೋಗಿ ಪಾರಮಾರ್ಥ ಬಂದಿತು. ಪೂರ್ವಜರು ಆಧ್ಯಾತ್ಮಿಕ ಅನುಭವ ನೀಡಿದ್ದಾರೆ ಎಂದು ಹೇಳಿದರು. ‘ಪಾರಮಾರ್ಥ ದೃಷ್ಟಿ’ ಕುರಿತು ಉಪನ್ಯಾಸ ನೀಡಿದ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ, ವಚನ ಸಾಹಿತ್ಯದ ಪರಂಪರೆಯನ್ನು ವಿಶ್ವಕ್ಕೆ ಪರಿಚಯಿಸಬೇಕಿದೆ. ಬಸವಣ್ಣ ಸಮಾನತೆಗಾಗಿ ಹೋರಾಟ ಮಾಡಿದರು. ಆಗ ನಮ್ಮ ಸಾಹಿತ್ಯ ಅಂದರೆ., ವಚನ ಸಾಹಿತ್ಯ ಸರಳವಾಯಿತು. ಮನೆ ಮನೆಗೆ ಸಾಹಿತ್ಯ ತಲುಪಿಸಿದರು. ಅಧ್ಯಾತ್ಮ ಬಿಟ್ಟು ನಮ್ಮ ಬದುಕಿಲ್ಲ ಎಂದರು. ನಿತ್ಯ ಕಲ್ಯಾಣ ಕಾರ್ಯ್ರಮ ಉದ್ಘಾಟಿಸಿದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿ, ನಮ್ಮ ಕಾರ್ಯಾಲಯದಿಂದ ಕಾರ್ಯಕ್ರಮ ಶುರು ಆಗಿರುವುದು ಸಂತಸ ತಂದಿದೆ ಎಂದರು. ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳ ಐಸಿಯು ಘಟಕ ಪ್ರಾರಂಭಿಸಲು ಸಿದ್ಧತೆ ನಡೆದಿದೆ ಎಂದು ಇದೇ ವೇಳೆ ಹೇಳಿದರು. ಶ್ರೀ ತಿಪ್ಪೇರುದ್ರ ಸ್ವಾಮೀಜಿ, ಕೆ.ಸಿ.ನಾಗರಾಜು, ವೀಣಾ, ಸುರೇಶ ಬಾಬು, ಪರಮೇಶ್ವರಪ್ಪ, ಜಕುಮಾರ್, ಕಾರ್ತಿಕ್, ಮಂಜುನಾಥ್ ಮತ್ತಿತರರು ಇದ್ದರು. ತೋಟಪ್ಪ ಉತ್ತಂಗಿ ಸಂಗಡಿಗರು ವಚನ ಪ್ರಾರ್ಥನೆ ಮಾಡಿದರು. ವಿ.ತಿಪ್ಪೇಸ್ವಾಮಿ ಸ್ವಾಗತಿಸಿದರು. ಸ್ಮಿತಾ ವಂದಿಸಿದರು. ಜ್ಞಾನಮೂರ್ತಿ ನಿರೂಪಿಸಿದರು. (ಸಿಟಿಡಿ ಶ್ರಾವಣ ಚಿಂತನೆ) ಚಿತ್ರದುರ್ಗದ ಶಾಸಕರ ಕಚೇರಿಯಲ್ಲಿ ಗುರುವಾರ ‘ನಿತ್ಯಕಲ್ಯಾಣ’ ಶ್ರಾವಣ ಚಿಂತನಾ ಕಾರ್ಯಕ್ರಮವನ್ನು ಕೆ.ಸಿ.ವೀರೇಂದ್ರ ಪಪ್ಪಿ ಉದ್ಘಾಟಿಸಿದರು. ಶ್ರೀ ಬಸವಪ್ರಭು ಸ್ವಾಮೀಜಿ, ಶ್ರೀ ಬಸವನಾಗೀದೇವ ಸ್ವಾಮೀಜಿ, ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ ಇದ್ದರು.