

ತರೀಕೆರೆ: ಪ್ರತಿಯೊಬ್ಬರೂ ಆಧ್ಯಾತ್ಮಿಕತೆ ಕಡೆ ಒಲವು ತೋರಬೇಕು ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ.ಕಲೈವಾಣಿ ಹೇಳಿದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸೇವಾಕೇಂದ್ರದಲ್ಲಿ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಹಣತೆ ಹಚ್ಚುವ ಮೂಲಕ ಉದ್ಘಾಟಿಸಿ ಮಾತನಾಡಿದರು. ದೀಪಾವಳಿ ಹಬ್ಬ ಶ್ರೀ ಲಕ್ಷ್ಮೀಯನ್ನು ಆಹ್ವಾನಿಸುವುದರ ಜತೆಗೆ ಪ್ರತಿಯೊಬ್ಬರಲ್ಲಿ ದೈವಿಗುಣ ಮೂಡಿಸುತ್ತದೆ. ಮನುಷ್ಯನ ದೇಹವೇ ಒಂದು ರಾಜ್ಯ. ಸ್ಥೂಲ ಪಂಚೇಂದ್ರಿಯಗಳ ಸೂಕ್ಷ್ಮ ಇಂದ್ರಿಯಗಳು ಪ್ರಜೆಗಳಾಗಿದ್ದು, ಆತ್ಮನು ಈ ದೇಹದ ರಾಜನಾಗಿದ್ದಾನೆ ಎಂದರು.
ಧರ್ಮವೆಂದರೆ ಸಂಪೂರ್ಣ ಸಂಕಲ್ಪ. ಮಾತು, ದೃಷ್ಟಿ ಕರ್ಮದಲ್ಲಿ ಪಾವಿತ್ರೃ ಇರಬೇಕು. ಮಾತು ಅಲ್ಪ ಕಾಲದ್ದು. ಅದರಿಂದ ಸಿಗುವ ಸುಖ, ಶಾಂತಿ ಸಹ ಅಲ್ಪಕಾಲದ್ದೇ. ನಾವು ಯಾರಿಂದಲೂ ಏನನ್ನೂ ಅಪೇಕ್ಷಿಸದೆ ಕೊಡುವ ಗುಣ ಬೆಳೆಸಿಕೊಳ್ಳಬೇಕು. ನಿಸ್ವಾರ್ಥ ಸೇವೆಯಲ್ಲಿ ದೇವರನ್ನು ಕಂಡು ಪರಮಾತ್ಮನ ಮಾರ್ಗದರ್ಶನದಲ್ಲಿ ನಮ್ಮ ಪ್ರತಿ ಹೆಜ್ಜೆ ಇಡಬೇಕು ಎಂದು ಹೇಳಿದರು.
ವಕೀಲ ಜಿ.ಸುಬ್ರಹ್ಮಣ್ಯ ಮಾತನಾಡಿ, ಭಾರತದ ಸಂಸ್ಕೃತಿ ಬೆಳೆಸುವ ಕಾರ್ಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮಾಡುತ್ತಿದೆ ಎಂದರು.
ಬಾಲಕಿಯರಾದ ಅನ್ವಿತಾ, ಸಿಂಧು, ಗಾನವಿ, ತೃಪ್ತಿ ಮತ್ತು ಕವಿತಾ ಅಷ್ಟಲಕ್ಷ್ಮೀಯರ ವೇಷ ಧರಿಸಿ ಗಮನ ಸೆಳೆದರು. ಉಪ ತಹಸೀಲ್ದಾರ್ ವಾಣಿಶ್ರೀ, ಪ್ರಮುಖರಾದ ಮಂಜುನಾಥ್, ಷಡಾಕ್ಷರಪ್ಪ, ಶಾರದಮ್ಮ, ಬಿ.ಕೆ.ಕವಿತಾ, ಬಿ.ಕೆ.ಅಮೃತಾ ಇತರರಿದ್ದರು.