

ಗದಗ: ಅದ್ವೈತ ಪರಂಪರೆಯ ಅಧ್ಯಾತ್ಮದ ಮೇರು ಶ್ರದ್ಧಾ ಕೇಂದ್ರ ಗದಗದ ಜಗದ್ಗುರು ಶ್ರೀ ಶಿವಾನಂದ ಮಹಾಸ್ವಾಮಿ ಮಠದ 99ನೇ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಫೆ. 21ರಿಂದ ಅದ್ದೂರಿಯಾಗಿ ಜರುಗಲಿದೆ.
ಜಾತಿ, ಪಂಥ, ವರ್ಗ, ವರ್ಣ ಎನ್ನದೇ ಸಮಾಜದಲ್ಲಿ ಸಾಮರಸ್ಯ, ಜನರಲ್ಲಿ ಭಕ್ತಿ, ಶ್ರದ್ಧೆ, ಕಾಯಕ ನಿಷ್ಠೆ ಬೆಳೆಸುವ ಮಠ ಪರಂಪರೆಯಲ್ಲಿ ಶ್ರೀ ಶಿವಾನಂದ ಮಠ ಅಗ್ರಮಾನ್ಯವಾಗಿದೆ.
ಜಗದ್ಗುರು ಶ್ರೀ ಶಿವಾನಂದ ಸ್ವಾಮೀಜಿಗಳು ಜಿಲ್ಲೆಯ ರೋಣದಲ್ಲಿ 1843ರಲ್ಲಿ ಜನಿಸಿದರು. ಶ್ರೀಗಳು ಬಾಲ್ಯಾವಸ್ಥೆಯಲ್ಲಿಯೇ ಜಗದ್ಗುರು ಶ್ರೀ ನಾಗಲಿಂಗಯತೀಶ್ವರರ ಅನುಗ್ರಹದಿಂದ ಬ್ರಹ್ಮಜ್ಞಾನಿಗಳಾಗಿದ್ದರು. ಲೋಕ ನೀತಿಯಂತೆ ಬಾಲ್ಯಾವಸ್ಥೆಯಲ್ಲಿ ಶಾಲಾ ಶಿಕ್ಷಣ ಪಡೆದರು. ಅನಂತರ ದೈವಯೋಗದಿಂದ ರಾಮದುರ್ಗ ತಾಲೂಕಿನ ಮನಿಹಾಳ (ಸುರೇಬಾನ) ಗ್ರಾಮದ ಗೌಡರಾಗಿ ತನ್ನಂತೆ ಪ್ರಜೆಗಳನ್ನು ಕಂಡು ಜನರ ಪ್ರೀತಿಗೆ ಪಾತ್ರರಾದರು.
ರೋಣ ತಾಲೂಕಿನ ಬನಹಟ್ಟಿ ಗ್ರಾಮದ ಪಟ್ಟದಮಠದ ಶ್ರೀ ರುದ್ರಮುನಿ ಶಿವಾಚಾರ್ಯರಿಂದ ದೀಕ್ಷೆ ಪಡೆದು ಮನಿಹಾಳದ ಮಣಿಯಮ್ಮಗಿರಿಯಲ್ಲಿ 18 ವರ್ಷಗಳ ಕಾಲ ಜಪತಪಗೈದರು. ನಂತರ ಸಮಸ್ತ ಲೌಕಿಕ ವ್ಯವಹಾರಗಳನ್ನು ದೂರ ತಳ್ಳಿ ಪಾರಪಾರ್ಥಿಕ ಪಥದಲ್ಲಿ ನೆಲೆ ನಿಂತರು. ಕನ್ನಡನಾಡಿನ ಉದ್ಧಾರಕ್ಕಾಗಿ ದೇಶ ಸಂಚಾರಗೈದರು. ಭಕ್ತರು ಬೇಡಿದ ವರಗಳನ್ನು ಕರುಣಿಸಿದರು. ಅದ್ವೈತ ತತ್ತ್ವವನ್ನು ಪ್ರತಿಪಾದಿಸುವ ನಾಡಿನ ಮಹಾಮುನಿಗಳಲ್ಲಿ ಒಬ್ಬರಾದರಲ್ಲದೆ, ಗದಗ ನಗರದಲ್ಲಿ ಅದ್ವೈತ ವೇದಾಂತವನ್ನು ಪ್ರತಿಪಾದಿಸುವ ಮುಕ್ತೇಶ್ವರ ಪೀಠವನ್ನು ಸ್ಥಾಪಿಸಿ 96 ವರ್ಷಗಳ ಕಾಲ ಜ್ಞಾನ ಗಂಗೆಯನ್ನು ಹರಿಸಿ 1939ರಲ್ಲಿ ಶ್ರಾವಣ ಶುದ್ಧ ಪಂಚಮಿಯಂದು ಶ್ರೀಗಳು ಬ್ರಹ್ಮಲೀನರಾದರು. ನಂತರ ಸದಾಶಿವಾನಂದ ಸ್ವಾಮೀಜಿ ಪೀಠಾರೋಹಣ ಮಾಡಿದರು. ಹುಬ್ಬಳ್ಳಿ ತಾಲೂಕಿನ ಭೈರಿದೇವರಕೊಪ್ಪದಲ್ಲಿ ಜನಿಸಿದ ಸದಾಶಿವಾನಂದ ಶ್ರೀಗಳು ಶಿಕ್ಷಣ ಪೂರೈಸಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿನ ಲಿಂ. ಶ್ರೀ ಶಿವಾನಂದ ಶ್ರೀಗಳ ದರ್ಶನ ಪಡೆದರು. ಅವರ ಅನುಗ್ರಹಕ್ಕೆ ಪಾತ್ರರಾಗಿ ದೀಕ್ಷೆ ಪಡೆದರು. ಗುರುಗಳ ಆಜ್ಞೆಯ ಮೇರೆಗೆ ಕಾಶಿಗೆ ತೆರಳಿ ಸಂಸ್ಕೃತ ಅಧ್ಯಯನ ಆರಂಭಿಸಿದರು. ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಷಡ್ದರ್ಶನಾಚಾರ್ಯರೆಂಬ ಬಿರುದು ಪಡೆದರು. ನಂತರ ಭೈರಿದೇವರಕೊಪ್ಪ ಹಾಗೂ ಗಾಮನಗಟ್ಟಿಯಲ್ಲಿ ಶ್ರೀ ಶಿವಾನಂದ ವಿದ್ಯಾವರ್ಧಕ ಸಂಘ ಸ್ಥಾಪಿಸಿ ಅದರಡಿ ಪ್ರಾಥಮಿಕ,ಪ್ರೌಢಶಾಲೆ ಮತ್ತು ಉಚಿತ ಪ್ರಸಾದ ಸೇವೆ ಆರಂಭಿಸಿದರು. ಶಿಕ್ಷಣ ಪ್ರೇಮಿಗಳಾಗಿದ್ದ ಶ್ರೀಗಳು 1979ರಲ್ಲಿ ಬ್ರಹ್ಮಲೀನರಾದರು.
ತದನಂತರ ಶ್ರೀ ನಂದೀಶ್ವರ ಸ್ವಾಮೀಜಿ ಅವರು ಪೀಠ ಅಲಂಕರಿಸಿದರು. ಶ್ರೀ ಶಿವಾನಂದ, ಶ್ರೀ ಸದಾಶಿವಾನಂದ ಶ್ರೀಗಳ ಕೃಪೆಗೆ ಪಾತ್ರರಾಗಿದ್ದ ಶ್ರೀಗಳು ಕಾಶಿ, ಕಾಶ್ಮೀರದಲ್ಲಿ ಸಂಸ್ಕೃತ ಅಧ್ಯಯನ ಮಾಡಿದರು. ಬನಾರಸ್ ವಿಶ್ವವಿದ್ಯಾಲಯದಿಂದ ಸಾಹಿತ್ಯಾಚಾರ್ಯ, ವೇದಾಂತಾಚಾರ್ಯ ಎಂಬ ಎರಡು ಸ್ನಾತಕೋತ್ತರ ಪದವಿಯಲ್ಲಿ ಸುವರ್ಣ ಪದಕ ಪಡೆದರು.
1970ರಿಂದ ಶ್ರೀಮಠದ ಒಡೆಯರಾಗಿ ಗದಗದಲ್ಲಿ ಶಿವಾನಂದ ವಿದ್ಯಾವರ್ಧಕ ಸಂಸ್ಥೆ ಹುಟ್ಟುಹಾಕಿ ಸಂಸ್ಕೃತ ಪಾಠಶಾಲೆ, ಆಯುರ್ವೆದ ಕಾಲೇಜ್, ಉಚಿತ ಪ್ರಸಾದ ನಿಲಯ ಹಾಗೂ ಶಿವಾನಂದ ಕಲ್ಯಾಣ ಮಂಟಪ ನಿರ್ವಿುಸಿದರು. 2000ರಲ್ಲಿ ಶ್ರೀಗಳು ಬ್ರಹ್ಮಲೀನರಾದರು. ಅನಂತರ ಅಭಿನವ ಶಿವಾನಂದ ಸ್ವಾಮೀಜಿ ಅವರು ಶ್ರೀ ಮಠದ ಚತುರ್ಥ ಜಗದ್ಗುರುಗಳಾಗಿ ಪೀಠಾರೋಹಣ ಮಾಡಿದರು. ಶ್ರೀಮಠದ ವಿದ್ಯಾವರ್ಧಕ ಸಂಘದಡಿ ಶ್ರೀ ಶಿವಾನಂದ ಪಪೂ ವಿಜ್ಞಾನ ಕಾಲೇಜ್, ಶಿವಾನಂದ ಆಸ್ಪತ್ರೆ ಆರಂಭಿಸಿದರು. ಇದೀಗ ಶ್ರೀ ಕೈವಲ್ಯಾನಂದ ಸ್ವಾಮೀಜಿ ಅವರು ಶ್ರೀಮಠದ ಉತ್ತರಾಧಿಕಾರಿಗಳಾಗಿದ್ದು, ಎಂ.ಎ ತತ್ತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ಭಗವದ್ಗೀತಾ, ವೇದ ಆಗಮ ಉಪನಿಷತ್ತು, ಶರಣ ಸಾಹಿತ್ಯದಲ್ಲಿ ಆಳವಾದ ಅಧ್ಯಯನಗೈದು ಉತ್ತಮ ವಾಗ್ಮಿಗಳು ಎನಿಸಿದ್ದಾರೆ.
ಇಂತಹ ಐತಿಹ್ಯ ಹೊಂದಿರುವ ಶ್ರೀಮಠದಲ್ಲಿ ಫೆ.21ರಂದು ಮಹಾಶಿವರಾತ್ರಿ, 22ರಂದು ಮಹಾರಥೋತ್ಸವ ನಡೆಯಲಿದೆ.