

ಮೈಸೂರು: ಯುಗದ ಕವಿ ಕುವೆಂಪು ಅವರು ಅಧ್ಯಾತ್ಮ ಹಾಗೂ ವೈಚಾರಿಕತೆಯ ಸಮನ್ವಯ ಕಾಪಾಡಿದವರು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಶಿ ಅಭಿಪ್ರಾಯಪಟ್ಟರು.
ಗ್ರಾಮಾಂತರ ಬುದ್ಧಿಜೀವಿಗಳ ಬಳಗ, ಅಖಿಲ ಭಾರತೀಯ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಿಷತ್ ಸಹಯೋಗದಲ್ಲಿ ಇಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಸಾಹಿತ್ಯೋತ್ಸವ ಉದ್ಘಾಟಿಸಿ ಮಾತನಾಡಿದರು. ಕುವೆಂಪು ಮೂಢನಂಬಿಕೆ ಧಿಕ್ಕರಿಸಿದವರು, ಸಮಾನತೆ, ವಿಶ್ವಮಾನವತೆಯ ಸಂದೇಶ ಸಾರಿದ ಜಗದ ಕವಿ. ಕುವೆಂಪು ಹಾಗೂ ದ.ರಾ.ಬೇಂದ್ರೆ ಅವರು ಕನ್ನಡ ಸಾಹಿತ್ಯದ ಎರಡು ಕಣ್ಣುಗಳು ಎಂದರು.
ಆರು ಕೃತಿಗಳ ಬಿಡುಗಡೆ:
ಕವಿ ಎಂ.ಡಿ.ಅಯ್ಯಪ್ಪ ಅವರ ಹೃದಯರಾಗ ಕೃತಿ, ಪುಣೆಯ ಲೇಖಕಿ ಹೇಮಾಮಳಗಿ ಅವರ ಹೃದಯ ಕಾದಂಬರಿ, ರತ್ನಾ ಚಂದ್ರಶೇಖರ್ ಅವರ ಕಾವ್ಯ ಲಹರಿ ಕೃತಿ, ವಕೀಲರಾದ ಬಿ.ಕೆ.ನೂತನ ಕುಮಾರ್ ಅವರ ಮೊದಲ ತೊದಲು ಕೃತಿ, ಪುಣೆಯ ಹೇಮಾ ಮಳಗಿ ಅವರ ಕವನ ಸಂಗಮ ಕೃತಿ, ಕಾವ್ಯಧಾರೆ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.
ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಹಾವೇರಿಯ ಪರಿಸರ ಚಿಂತಕ ಜಗದೀಶ್ ಮಹಾರಾಜ್ ಪೇಟ್, ರಂಗಕರ್ಮಿ ಡಾ.ಎಚ್.ಎ.ಪಾರ್ಶ್ವನಾಥ ಅವರಿಗೆ ಸಾಹಿತಿ ಪ್ರೊ.ಎಚ್.ಎಸ್.ಕೆ.ಅವರ ನೆನಪಿನ ಶತಮಾನೋತ್ಸವ ಪ್ರಶಸ್ತಿ, ಕವಯಿತ್ರಿ ಡಾ.ಲತಾ ರಾಜಶೇಖರ್, ವೈದ್ಯ ಡಾ.ನರೇಂದ್ರ, ಪುಷ್ಪಾ ಅಯ್ಯಂಗಾರ್ ಹಾಗೂ ವೈದೇಹಿ ಅಯ್ಯಂಗಾರ್‌ಗೆ ಸುವರ್ಣ ಕರ್ನಾಟಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಆರು ದಂಪತಿಗಳಿಗೆ ಸುವರ್ಣ ಕರ್ನಾಟಕ ಅಪೂರ್ವ ದಂಪತಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಡಿ.ಜಿ.ಗುರುಶಾಂತಪ್ಪ ಉಪನ್ಯಾಸ ನೀಡಿದರು. ಸಾಹಿತಿ ಡಾ. ಸಿಪಿಕೆ, ರಂಗಕರ್ಮಿ ಡಾ.ಎಚ್.ಎ.ಪಾರ್ಶ್ವನಾಥ, ನ್ಯಾಯವಾದಿ ರೇವಣ್ಣ ಬಳ್ಳಾರಿ, ಸಾಹಿತಿ ಡಾ.ಜೆ.ಲೋಹಿತ್, ವೈದ್ಯ ಡಾ.ಕೆ.ಆರ್.ಗೌತಮ್, ರೈತ ಮುಖಂಡ ಸರಗೂರು ನಟರಾಜ್, ಲೇಖಕಿ ಸೌಜನ್ಯಾ ಶರತ್ ಇದ್ದರು
-----