ಅಧ್ಯಾತ್ಮ ಕೃತಿ ಅಜ್ಞಾನ ತೊಲಗಿಸುವ ದೀವಿಗೆ

26Jaggu6
ಬಾಳೇಕುಂದ್ರಿ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೃತ್ಯುಂಜಯಸ್ವಾಮಿ ಹಿರೇಮಠ ಅವರ ನಮನಾಂಜಲಿ ಗ್ರಂಥ ಬಿಡುಗಡೆ ಮಾಡಲಾಯಿತು. ಡಾ.ಅಭಿನವ ಕುಮಾರ ಚೆನ್ನಬಸವ ಸ್ವಾಮೀಜಿ, ಸಾಹಿತಿ ಪ್ರಕಾಶ ಗಿರಿಮಲ್ಲನವರ, ಡಾ.ಎಫ್. ವಿ.ಮಾನ್ವಿ , ಈರಣ್ಣ ದೇಯಣ್ಣವರ, ಡಾ.ಮಹೇಶ್ವರಯ್ಯ ಹೊತ್ತಿಗಿಮಠ ಮತ್ತಿತರರು ಉಪಸ್ಥಿತರಿದ್ದರು.
Published on

ಬೆಳಗಾವಿ: ಗ್ರಂಥಗಳು ಮನುಷ್ಯನ ಬದುಕಿಗೆ ಆನಂದದ ಅನುಭೂತಿ ನೀಡುತ್ತವೆ. ಅದರಲ್ಲೂ ಆಧ್ಯಾತ್ಮ ಕೃತಿಗಳು ಮಾನವನ ಮನದ ಕತ್ತಲೆಯನ್ನು ಓಡಿಸುವ ಜ್ಞಾನದ ದೀವಿಗೆಗಳಾಗಿವೆ ಎಂದು ಜಮಖಂಡಿ ಓಲೇಮಠದ ಡಾ.ಅಭಿನವ ಕುಮಾರ ಚೆನ್ನಬಸವ ಸ್ವಾಮೀಜಿ ಅಭಿಪ್ರಾಯ ಪಟ್ಟರು.

ಬೆಳಗಾವಿಯ ನಾಗನೂರು ರುದ್ರಾಕ್ಷಿಮಠ ಹಾಗೂ ಗಂದಿಗವಾಡದ ರಾಜಗುರು ಹಿರೇಮಠ ಸಂಯುಕ್ತ ಆಶ್ರಯದಲ್ಲಿ ಎಸ್.ಜಿ.ಬಾಳೇಕುಂದ್ರಿ ಇಂಜಿನಿಯರಿಂಗ್‌ಮಹಾವಿದ್ಯಾಲಯದಲ್ಲಿ ಜರುಗಿದ ಮೃತ್ಯುಂಜಯಸ್ವಾಮಿ ಹಿರೇಮಠ ಅವರ ’ನಮನಾಂಜಲಿ ಗ್ರಂಥ ಲೋಕಾರ್ಪಣೆ’ ಸಮಾರಂಭದಲ್ಲಿ ಮಾತನಾಡಿದರು. ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮೀಜಿ ಮೆಚ್ಚಿಕೊಂಡ ಅಷ್ಟೋತ್ತರ ಶತನಾಮ ಪಂಚಾಕ್ಷರಿ ನಾಮಗಳಿಗೆ ಲೇಖಕ ಮೃತ್ಯುಂಜಯ ಸ್ವಾಮಿಗಳು ಅನನ್ಯ ವ್ಯಾಖ್ಯಾನ ಬರೆದಿದ್ದಾರೆ. ಇಂಥ ಕೃತಿಗಳು ನಿಜವಾಗಿಯೂ ಮನುಷ್ಯನ ಮನಸ್ಸು-ಹೃದಯ ಅರಳಿಸುತ್ತವೆ ಎಂದರು.

ಸಾಹಿತಿ ಪ್ರಕಾಶ ಗಿರಿಮಲ್ಲನವರ ಕೃತಿ ಪರಿಚಯ ಮಾಡುತ್ತ, ಅಷ್ಟೋತ್ತರ ಶತನಾಮ ಪಂಚಾಕ್ಷರಿ ಮೂಲ ಪಠ್ಯವನ್ನು ಬರೆದವರು ಕುಮಾರ ನಿಜಗುಣರು. ಲೋಕಕ್ಕೆ ತಿಳಿಸಿದ್ದು ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮಿಗಳು. ಪಠ್ಯಕ್ಕೆ ಸೂಕ್ತ ವ್ಯಾಖ್ಯಾನ ನೀಡಿದವರು ವಾಗ್ದೇವಿಯವರು. ಅಂಥ ಕೃತಿ ಭಂಡಾರದ ಮುದ್ರೆಯನ್ನು ಒಡೆದು ತೋರಿದ ಮೃತ್ಯುಂಜಯ ಸ್ವಾಮಿಗಳು ಅಭಿನಂದನಾರ್ಹರು ಎಂದರು. ಡಾ.ಎಫ್.ವಿ.ಮಾನ್ವಿ ಸಮಾರಂಭ ಉದ್ಘಾಟಿಸಿದರು. ಖ್ಯಾತ ವೈದ್ಯ ಡಾ.ರವಿ ಪಾಟೀಲ ಗ್ರಂಥ ಲೋಕಾರ್ಪಣೆ ಮಾಡಿದರು. ಗ್ರಂಥ ದಾಸೋಹ ಮಾಡಿದ ಎಸ್.ಎಸ್. ಗಂಗಾಧರಮಠ ಮತ್ತು ಮಾಣಿಕ ಗಂಗಪ್ಪ ಕಮ್ಮಾರ ಅವರನ್ನು ಪೂಜ್ಯ ಶ್ರೀಗಳು ಸನ್ಮಾನಿಸಿದರು. ಈರಣ್ಣ ದೇಯಣ್ಣವರ, ಡಾ.ಮಹೇಶ್ವರಯ್ಯ ಹೊತ್ತಿಗಿಮಠ, ಎಸ್.ಜಿ.ಸಿದ್ನಾಳ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಹಿರಿಯ ಸಾಹಿತಿ ಪ್ರಾ.ಬಿ. ಎಸ್. ಗವಿಮಠ ಅಧ್ಯಕ್ಷತೆ ವಹಿಸಿದ್ದರು. ಬೈಲಹೊಂಗಲ ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ ಆಶೀರ್ವಚನ ನೀಡಿದರು. ಲೇಖಕ ಮೃತ್ಯುಂಜಯಸ್ವಾಮಿ ಹಿರೇಮಠ ಆಶಯ ನುಡಿಗಳನ್ನಾಡಿದರು. ಶೀಲಾ ಜಗದೀಶ ಗಂಗಾಧರಮಠ ಸ್ವಾಗತಿಸಿದರು. ಆಶಾ ಯಮಕನಮರಡಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net