

ಹಾಸನ: ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಪರಿಣಾಮಕಾರಿ ಅಧ್ಯಯನದ ಜೊತೆಗೆ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ತಿಳಿಸಿದರು.
ನಗರದ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಅಭಿಶಿಕ್ಷಣ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ವ್ಯಾಸಂಗಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಅದರಂತೆ ಉಪನ್ಯಾಸಕರಿಗೆ ಗೌರವ ನೀಡುವ ಮೂಲಕ ತಂದೆ-ತಾಯಿ, ಪೋಷಕರಿಗೆ ಗೌರವ ತರುವಂತೆ ನಡೆದುಕೊಂಡು ಉತ್ತಮ ನಾಗರಿಕರಾಗಬೇಕೆಂದು ಸಲಹೆ ನೀಡಿದರು.
ಜಿಲ್ಲಾ ಸಿವಿಲ್ ನ್ಯಾಯಾಧೀಶರಾದ ರವಿಕಾಂತ ಮಾತನಾಡಿ, ವಿದ್ಯಾರ್ಥಿಗಳು ಸಾಮರಸ್ಯ, ಸಮಾನತೆ, ಸಹೋದರತ್ವ ಭಾವನೆ ಹೊಂದಿ, ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಾವು ಬದುಕಬೇಕು. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ದುಶ್ಚ್ಚಟಗಳಿಗೆ ಬಲಿಯಾಗದೆ, ನಿಮ್ಮ ಭವಿಷ್ಯವನ್ನು ಉಜ್ವಲ ಮಾಡಿಕೊಳ್ಳಿ ಉತ್ತಮ ಗುಣ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಸಾಧನೆ ಮಾಡಬೇಕು. ಮಧ್ಯಪಾನ, ಧೂಮಪಾನ, ಬೆಟ್ಟಿಂಗ್ ದಂಧೆಗೆ ಹೋಗಬಾರದು ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಬಿ.ಅರ್.ಗುರುದೇವ್, ಕಾಲೇಜಿನ ಪ್ರಾಂಶುಪಾಲ
ಡಾ.ಎಸ್.ಪ್ರದೀಪ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ.ಹೆಚ್.ಎಸ್.ನರಸಿಂಹನ್, ಸಂಸ್ಥೆ ಕಾರ್ಯದರ್ಶಿ ಆರ್.ಟಿ.ದ್ಯಾವೇಗೌಡ, ನಿರ್ದೇಶಕರಾದ ಚೌಡವಳ್ಳಿ ಜಗದೀಶ್, ಶ್ರೀನಿವಾಸ್, ಸುರೇಶ್ ಮತ್ತಿತರರು ಹಾಜರಿದ್ದರು.