ಅಧ್ಯಯನ ಪೀಠಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ

klb1
ಗುಲ್ಬರ್ಗ ವಿವಿಯ ನಿಜಶರಣ ಅಂಬಿಗರ ಚೌಡಯ್ಯ ಅಧ್ಯಯನ ಪೀಠ.
Published on

ಕಲಬುರಗಿ: ಅಧ್ಯಯನ, ಸಂಶೋಧನೆ, ಸಮುದಾಯದಲ್ಲಿ ಪ್ರಜ್ಞೆ ಮೂಡಿಸುವಂತಹ ಕಾರ್ಯಚಟುವಟಿಕೆ ನಡೆಸಬೇಕಾದ ವಿಶ್ವವಿದ್ಯಾಲಯದ ಪೀಠಗಳು ಕೇವಲ ಜಯಂತಿ, ಪುಣ್ಯತಿಥಿ ಆಚರಣೆಗೆ ಸೀಮಿತವಾಗಿವೆ. ಸರ್ಕಾರ ನೀಡುವ ಅನುದಾನದಲ್ಲೇ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ, ಜ್ಞಾನ ತುಂಬುವ ಕೆಲಸ ಆಗುತ್ತಿಲ್ಲ. ಗುಲ್ಬರ್ಗ ವಿವಿ ಹತ್ತಾರು ಅಧ್ಯಯನ/ಸಂಶೋಧನಾ ಪೀಠಗಳ ದುಸ್ಥಿತಿ ಇದು.

ವಿವಿಯಲ್ಲಿ 11ಕ್ಕೂ ಹೆಚ್ಚು ಅಧ್ಯಯನ ಪೀಠಗಳು ಕಾರ್ಯನಿರ್ವಹಿಸುತ್ತಿವೆ. ಕೆಲವು ಸ್ವಂತ ಕಟ್ಟಡ ಹೊಂದಿದ್ದರೆ, ಕೆಲವು ಲಭ್ಯ ಕಟ್ಟಡಗಳಲ್ಲಿ ನಡೆಯುತ್ತಿವೆ. ಬೋಧಕ ಸಿಬ್ಬಂದಿ ಕೊರತೆ ಎಂಬುದರಲ್ಲಿ ಎರಡು ಮಾತಿಲ್ಲ. ಲಭ್ಯ ಸಿಬ್ಬಂದಿಗೆ ಪೀಠಗಳ ಹೊಣೆ ನೀಡಲಾಗಿದೆ. ಬೆರಳೆಣಿಕೆ ಪೀಠಗಳಲ್ಲಿ ಒಂದಿಷ್ಟು ಕೆಲಸ ಮಾಡುತ್ತಿವೆ ಎಂಬುದನ್ನು ಹೊರತುಪಡಿಸಿದರೆ ಬಹುತೇಕ ನಿರ್ಲಿಪ್ತವಾಗಿವೆ.

ಪೀಠಗಳೆಷ್ಟು: ವಿವಿಯಲ್ಲಿ 11 ಅಧ್ಯಯನ ಪೀಠಗಳಿವೆ. ಈ ಪೈಕಿ ಬಸವಾದಿ ಶರಣ ಸಾಹಿತ್ಯ ಕೇಂದ್ರ (ಖಾಸಗಿ), ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ, ನಿಜಶರಣ ಅಂಬಿಗರ ಚೌಡಯ್ಯ ಅಧ್ಯಯನ ಪೀಠ, ಶರಣ ಹಡಪದ ಅಪ್ಪಣ್ಣ ಅಧ್ಯಯನ ಪೀಠ, ಶರಣೆ ಹೇಮರಡ್ಡಿ ಮಲ್ಲಮ್ಮ ಅಧ್ಯಯನ ಪೀಠ, ಶರಣ ಮಾದಾರ ಚೆನ್ನಯ್ಯ ಅಧ್ಯಯನ ಪೀಠ ಕಾರ್ಯನಿರ್ವಹಿಸುತ್ತಿವೆ. ಇವುಗಳಿಗೆ ಹೊರತುಪಡಿಸಿ ಡಾ.ಬಾಬು ಜಗಜೀವನರಾಮ್ ಅಧ್ಯಯನ ಮತ್ತು ವಿಸ್ತರಣಾ ಕೇಂದ್ರ, ಹರಿದಾಸ ಅಧ್ಯಯನ ಪೀಠ, ವಾಲ್ಮೀಕಿ ಬುಡಕಟ್ಟು ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ, ಸಂತ ಸೇವಾಲಾಲ್ ಅಧ್ಯಯನ ಪೀಠ, ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆಗಳೂ ಇವೆ.

ಸ್ಥಾಪನೆಯಾದರೆ ಸಾಲದು: ಉನ್ನತ ಶಿಕ್ಷಣ ಸಂಸ್ಥೆಯಾದ ವಿಶ್ವವಿದ್ಯಾಲಯಗಳಲ್ಲಿ ಆಡಳಿತದಲ್ಲಿರುವ ಸರ್ಕಾರದ ಮೇಲೆ ವಿವಿಧ ಸಮಾಜಗಳು ಒತ್ತಡ ಹೇರಿ ಪೀಠ ಸ್ಥಾಪಿಸಿಕೊಳ್ಳುತ್ತಿವೆ. ಆದರೆ ಪೀಠ/ಸಂಸ್ಥೆಗಳಲ್ಲಿ ಯಾವ ಕಾರ್ಯಚಟುವಟಿಕೆ ನಡೆಯುತ್ತಿದೆ ಎಂಬುದನ್ನು ಯಾರೂ ಪ್ರಶ್ನಿಸುತ್ತಿಲ್ಲ. ಅಧ್ಯಯನ ಪೀಠ ಸ್ಥಾಪನೆ ಜತೆಗೆ ಕ್ರಿಯಾಶೀಲವಾಗಿದ್ದಾಗ ಸಾರ್ಥಕತೆ ಬರುತ್ತದೆ. ಶರಣರು, ಸಂತರು, ದಾಸರ, ಮಹನೀಯರ ಇತಿಹಾಸ ಕುರಿತು ಅಧ್ಯಯನ, ಸಂಶೋಧನೆ ಮೂಲಕ ಬೆಳಕು ಚೆಲ್ಲುವ ಕಾರ್ಯ ಆಗಬೇಕು. ವಿಚಿತ್ರವೆಂದರೆ ಇದ್ಯಾವ ಕಾರ್ಯಚಟುವಟಿಕೆ ವಿವಿಯಲ್ಲಿ ನಡೆಯದಿರುವುದು ವಿಷಾದಕರ ಸಂಗತಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net