

ಕೆ.ಎಂ.ದೊಡ್ಡಿ: ನಿರಂತರವಾಗಿ ಅಧ್ಯಯನ ಮಾಡುವವರು ಮಾತ್ರ ಸಮರ್ಥ ಶಿಕ್ಷಕರಾಗಲು ಸಾಧ್ಯ ಎಂದು ಮಂಡ್ಯದ ನವೋದಯ ವಿದ್ಯಾಸಂಸ್ಥೆ ಕಾರ್ಯದರ್ಶಿ ಕನ್ಯಕಾ ಶಿಲ್ಪಾ ಹೇಳಿದರು.
ಭಾರತೀ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಭಾವ ಸಂಗಮ-2024 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬೋಧನಾ ವೃತ್ತಿಯಲ್ಲಿ ಇರುವವರಿಗೆ ಅಧ್ಯಯನವೇ ಭೂಷಣ. ಶಿಕ್ಷಕ ವೃತ್ತಿ ಪವಿತ್ರವಾದುದಾಗಿದೆ. ಆ ವೃತ್ತಿಗೆ ಎಂದಿಗೂ ಕಳಂಕ ತರಬೇಡಿ. ವೃತ್ತಿಯ ಗೌರವ ಹೆಚ್ಚಿಸಲು ಪ್ರತಿಯೊಬ್ಬ ಶಿಕ್ಷಕನು ಕಾಯಾ, ವಾಚಾ ಶ್ರಮಿಸಿದರೆ ಮಾತ್ರ ಕೀರ್ತಿಗೆ ಭಾಜನರಾಗುತ್ತಾರೆ. ಸಂತೃಪ್ತ ಜೀವನ ನಡೆಸುತ್ತಾರೆ ಎಂದರು. ಈ ನಿಟ್ಟಿನಲ್ಲಿ ಪ್ರಶಿಕ್ಷಣಾರ್ಥಿಗಳು ಶ್ರಮಿಸಿ, ಅಭಿವೃದ್ಧಿ ಕಂಡುಕೊಳ್ಳಬೇಕು ಎಂದು ಕನ್ಯಕಾ ಶಿಲ್ಪಾ ಕಿವಿಮಾತು ಹೇಳಿದರು.
ಬೋಧನಾ ವೃತ್ತಿಯನ್ನು ಸವಾಲಾಗಿ ಸ್ವೀಕಾರ ಮಾಡಬೇಕು. ಶಿಕ್ಷಣ ಪ್ರಾಯೋಗಿಕವಾಗಿರಬೇಕು. ಶಿಕ್ಷಕನಾದವನಿಗೆ ಮತ್ತೆ ಮತ್ತೆ ಕಲಿಯಬೇಕು ಎಂಬ ಹಂಬಲ ಇರಬೇಕು. ಆಗ ಮಾತ್ರ ಆ ವೃತ್ತಿಯ ಗೌರವ ಹೆಚ್ಚಿಸಲು ಸಾಧ್ಯ ಎಂದವರು ತಿಳಿಸಿದರು.
ಪ್ರಾಂಶುಪಾಲ ಡಾ.ಎಸ್.ಎಲ್. ಸುರೇಶ್ ಮಾತನಾಡಿ, ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಮಾಡುವಲ್ಲಿ ಶಿಕ್ಷಕರ ಪಾತ್ರ ಬಹಳ ದೊಡ್ಡದು. ಮುಂದೆ ಗುರಿ ಹಿಂದೆ ಗುರು ಇದ್ದರೆ ವಿದ್ಯಾರ್ಥಿ ಜೀವನದಲ್ಲಿ ಸಾಧನೆ ಮಾಡಲು ಸುಲಭ ಎಂದರು. ವಿದ್ಯಾರ್ಥಿ ಜೀವನದ ಘಟ್ಟದಲ್ಲಿ ಉತ್ತಮ ಸಂಸ್ಕಾರಗಳನ್ನು ರೂಢಿಸಿಕೊಂಡವರು ಮಾತ್ರ ಪ್ರಶಿಕ್ಷಣದ ನಂತರ ಉತ್ತಮ ಶಿಕ್ಷಕರಾಗಲು ಸಾಧ್ಯ. ಶ್ರಮವಿದ್ದಲ್ಲಿ ಉತ್ತಮ ಪ್ರತಿಫಲ ದೊರಕುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಪ್ರಶಿಕ್ಷರ್ಣಾರ್ಥಿಯೂ ಗಮನ ಹರಿಸಬೇಕು ಎಂದರು.
ಸಹಾಯಕ ಪ್ರಾಧ್ಯಾಪಕರಾದ ಗಂಗೇಗೌಡ, ಎಚ್.ಡಿ.ಜ್ಯೋತಿ, ಶ್ವೇತಾ, ಶಶಿಕಲಾ, ಅಪರ್ಣಾ, ಕಿರಣ್, ವೆಂಕಟೇಶ್ ಪ್ರಸಾದ್, ಸುನೀಲ್‌ಕುಮಾರ್ ಮತ್ತಿತರಿದ್ದರು.