ಅಧ್ಯಕ್ಷರಾಗಿ ನಾಗೇಗೌಡ, ಉಪಾಧ್ಯಕ್ಷರಾಗಿ ಬೋರೇಗೌಡ ಅವಿರೋಧ ಆಯ್ಕೆ

10mlk-1
Published on

ಮೇಲುಕೋಟೆ: ಮಾಣಿಕ್ಯನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷರಾಗಿ ಕಾಂಗ್ರೆಸ್-ರೈತಸಂಘದ ಮೈತ್ರಿಕೂಟದ ಬೆಂಬಲಿತ ಅಭ್ಯರ್ಥಿಗಳಾದ ನಾಗೇಗೌಡ ಮತ್ತು ಬೋರೇಗೌಡ ಅವಿರೋಧ ಆಯ್ಕೆಯಾದರು.

ಸಂಘದಲ್ಲಿ 11 ನಿರ್ದೇಶಕರಿದ್ದು, ಇತ್ತೀಚೆಗೆ ಚುನಾವಣೆ ನಿಗದಿಯಾಗಿತ್ತು. ಕಾಂಗ್ರೆಸ್-ರೈತಸಂಘ ಮೈತ್ರಿಕೂಟ ಬೆಂಬಲಿತ 7 ಹಾಗೂ ಜೆಡಿಎಸ್ ಬೆಂಬಲಿತರು 4 ನಿರ್ದೇಶಕರಿದ್ದಾರೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್-ರೈತಸಂಘದ ಮೈತ್ರಿಕೂಟದ ಬೆಂಬಲಿತ ಅಭ್ಯರ್ಥಿಗಳಾದ ನಾಗೇಗೌಡ ಹಾಗೂ ಬೋರೇಗೌಡ ಅವರನ್ನು ಹೊರತುಪಡಿಸಿದಂತೆ ಬೇರ‌್ಯಾರೂ ನಾಮಪತ್ರ ಸಲ್ಲಿಸಿದ ಕಾರಣ ಚುನಾವಣಾಧಿಕಾರಿಯೂ ಆದ ಸಹಕಾರ ಇಲಾಖೆಯ ಆರ್.ನಿರ್ಮಲಾ ಅವಿರೋಧ ಆಯ್ಕೆಯನ್ನು ಘೋಷಿಸಿದರು. ಕಾಂಗ್ರೆಸ್-ರೈತಸಂಘದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು.

ಶಾಸಕ ದರ್ಶನ್ ಪುಟ್ಟಣ್ಣಯ್ಯ ಪರವಾಗಿ ರೈತ ಸಂಘದ ಮುಖಂಡ ಕ್ಯಾತನಹಳ್ಳಿ ರಾಘವ ಪ್ರಕಾಶ್ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಿದರು. ಬಳಿಕ ಮಾತನಾಡಿ, ಶಾಸಕರ ಮಾರ್ಗದರ್ಶನದಂತೆ ನಡೆದ ಚುನಾವಣೆಯಲ್ಲಿ ಮಾಣಿಕ್ಯನಹಳ್ಳಿ ಹಾಗೂ ತೋಪೇಗೌಡನಕೊಪ್ಪಲು ಗ್ರಾಮಸ್ಥರು ಕಾಂಗ್ರೆಸ್-ರೈತಸಂಘ ಮೈತ್ರಿಕೂಟದ ಬೆಂಬಲಿತರನ್ನು ಆಯ್ಕೆ ಮಾಡಿ ಶಾಸಕರ ಕೈ ಬಲಪಡಿಸಿದ್ದಾರೆ. 35 ವರ್ಷಗಳಿಂದ ಕಾಂಗ್ರೆಸ್-ರೈತಸಂಘ ಮೈತ್ರಿಕೂಟಕ್ಕೆ ಅಧಿಕಾರ ಸಿಕ್ಕಿರಲಿಲ್ಲ. ಶಾಸಕರು ಮಾಣಿಕ್ಯನಹಳ್ಳಿ ಗ್ರಾಮದಲ್ಲಿ ನಡೆಸಿದ ‘ಸರ್ಕಾರಿ ಸೇವೆ ನಿಮ್ಮಮನೆ ಮನೆ ಬಾಗಿಲಿಗೆ’ ಎಂಬ ವಿನೂತನ ಕಾರ್ಯಕ್ರಮಕ್ಕೆ ಜನರು ಮನ್ನಣೆ ನೀಡಿ ಡೇರಿ ಚುನಾವಣೆಯಲ್ಲಿ ಅಧಿಕಾರ ನೀಡಿದ್ದಾರೆ ಎಂದರು.

ಮಾಣಿಕ್ಯನಹಳ್ಳಿ ಗ್ರಾಪಂ ಅಧ್ಯಕ್ಷ ಎಂ.ಎಸ್.ಕುಮಾರ್, ಡೇರಿ ನಿರ್ದೇಶಕರಾದ ಕೃಷ್ಣ, ಜಲಬೋರೇಗೌಡ, ಸ್ವಾಮಿಗೌಡ, ಅರಸಮ್ಮ, ಶಕುಂತಲಾ, ಎಂ.ಕೆ.ಮಂಜುನಾಥ್, ಮಹೇಶ, ದ್ಯಾವಶೆಟ್ಟಿ, ನಾಮ ನಿರ್ದೇಶನ ನಿರ್ದೇಶಕ ಮಹದೇವ, ಮುಖಂಡರಾದ ಚಂದ್ರಶೇಖರ್, ಶ್ರೀಕಂಠೇಗೌಡ, ಸಿಂಗ್ರಿಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಕುಮಾರ್, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಉಪಾಧ್ಯಕ್ಷ ನಟರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಕೆಂಪುಕೃಷ್ಣ, ಸಮಾಜ ಸೇವಕ ಶಂಕರ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net