

ಪಾಂಡವಪುರ: ತಾಲೂಕಿನ ಕೆನ್ನಾಳು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ರೈತಸಂಘ ಬೆಂಬಲಿತ ಸದಸ್ಯ ಕೆ.ಎಂ.ರಾಮಚಂದ್ರ ಅವಿರೋಧವಾಗಿ ಆಯ್ಕೆಯಾದರು.
ಅಧಿಕಾರ ಒಡಂಬಡಿಕೆ ಹಂಚಿಕೆ ಸೂತ್ರದಡಿ ಈ ಹಿಂದಿನ ಅಧ್ಯಕ್ಷ ಶಿವಶಂಕರ ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದರು. ಒಟ್ಟು 13 ಸಂಖ್ಯಾ ಬಲದ ಡೇರಿಯಲ್ಲಿ 11 ಸ್ಥಾನಗಳು ರೈತ ಸಂಘ ಬೆಂಬಲಿತರು, 2 ಜೆಡಿಎಸ್ ಬೆಂಬಲಿತ ಸದಸ್ಯರು ಇದ್ದಾರೆ. ಅಧ್ಯಕ್ಷಗಾದಿಗೆ ಬುಧವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷಗಾದಿ ಬಯಸಿ ಕೆ.ಎಂ.ರಾಮಚಂದ್ರ ಹೊರತುಪಡಿಸಿ ಬೇರೆ ಯಾರೂ ಉಮೇದುಗಾರಿಕೆ ಸಲ್ಲಿಸದ ಪರಿಣಾಮ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಸಹಕಾರ ಸಂಘಗಳ ಇಲಾಖೆ ಅಧಿಕಾರಿ ಸುಮಿತ್ರಾ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು.
ಅಧ್ಯಕ್ಷರ ಆಯ್ಕೆ ಘೋಷಣೆಯಾಗುತ್ತಿದ್ದಂತೆ ರೈತಸಂಘ ಕಾರ್ಯಕರ್ತರು, ಅಭಿಮಾನಿಗಳು ಸಿಹಿ ವಿತರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ವೇಳೆ ಡೇರಿ ಉಪಾಧ್ಯಕ್ಷ ವೆಂಕಟನಾಯಕ ನಿರ್ದೇಶಕರಾದ ಕೆ.ಎ.ಪುಟ್ಟೇಗೌಡ, ಕೆ.ಬಿ.ಸದಾಶಿವ, ಗುರುರಾಜ, ದಾಸಿ, ಜೆ.ಚಂದ್ರಶೇಖರ್, ನಾಗರತ್ನ, ಹಂಸವೇಣಿ, ಶ್ರೀಧರ್ ರೈತಸಂಘದ ಮುಖಂಡ ವಿಜಯಕುಮಾರ್ ಇತರರು ಇದ್ದರು.