

ಗೌರಿಬಿದನೂರು : ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ವರ್ಷ ಕಳೆದರೂ ಸರ್ಕಾರ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಘೋಷಿಸದ ಕಾರಣ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.
ನಗರದ 1ನೇ ವಾರ್ಡ್‌ನಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಬುಧವಾರ ಚಾಲನೆ ನೀಡಿ ಮಾತನಾಡಿ, ಮೀಸಲಾತಿ ಕಲ್ಪಿಸಿ ಚುನಾವಣೆ ನಡೆದರೆ ಚುನಾಯಿತ ಪ್ರತಿನಿಧಿಗಳ ಕೈಗೆ ಅಧಿಕಾರ ಸಿಗಲಿದೆ. ಸದಸ್ಯರು ವಾರ್ಡ್‌ಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿಸಲು ಸಾಧ್ಯವಾಗಲಿದೆ. ಆದರೆ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಿಸಲು ಮೀನಮೇಷ ಎಣಿಸುತ್ತಿರುವುದರಿಂದ ಅಭಿವೃದ್ಧಿಗೆ ಅಡ್ಡಿಯಾಗಿದೆ. ಸದಸ್ಯರು ಕೈಕಟ್ಟಿ ಕೂರುವಂತಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ಮೀಸಲಾತಿ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.
ನಗರಸಭಾ ಸದಸ್ಯ ಆರ್.ಪಿ.ಗೋಪಿನಾಥ್ ಮಾತನಾಡಿ, ಬಡಾವಣೆ ನಿವಾಸಿಗಳು ನೀರು, ರಸ್ತೆ, ಚರಂಡಿ ಮೂಲ ಸೌಲಭ್ಯಗಳ ಕೊರತೆ ಬಗ್ಗೆ ಶಾಸಕರ ಗಮನಸೆಳೆದಾಗ ಹಂತ ಹಂತವಾಗಿ ಬಗೆಹರಿಸಲಿದ್ದಾರೆ ಎಂಬ ಭರವಸೆ ನೀಡಿದರು.
ನಗರಸಭೆ ಆಯುಕ್ತ ಜಿ.ಎನ್.ಚಲಪತಿ, ನಗರಸಭಾ ಸದಸ್ಯರಾದ ರಫೀಕ್, ಶ್ರೀಕಾಂತ್, ಪದ್ಮಾವತಮ್ಮ, ನಗರಸಭೆ ಅಭಿಯಂತರ ರಾದ ಸುಭಾಷ್ ಕಂಬಳಿ, ಚಕ್ರಪಾಣಿ, ನಗರದ ಪ್ರಮುಖರಾದ ಮೈಲಾರಿ, ಮುರಳಿಸ್ವಾಮಿ, ಸುನಿಲ್ ಇನ್ನಿತರರು ಇದ್ದರು.