

ಕಾರವಾರ: ಇಲ್ಲಿನ ಕ್ರಿಮ್್ಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಹಾಗೂ ಜಿಲ್ಲಾ ಸರ್ಜನ್ ಡಾ. ಶಿವಾನಂದ ಕುಡ್ತಲಕರ್ ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಿ ಆದೇಶಿಸಲಾಗಿದೆ. ಬೇರೆ ಯಾವುದೇ ಹುದ್ದೆ ತೋರಿಸಿಲ್ಲ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅನುಮೋದನೆಯಂತೆ ಆರೋಗ್ಯ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಯ. ಶಿವಶಂಕರ್ ಆದೇಶ ಹೊರಡಿಸಿದ್ದಾರೆ.
ಸೆ. 3 ರಂದು ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಯ ವೇಳೆ ಬಾಣಂತಿ ಗೀತಾ ಬಾನಾವಳಿ ಸಾವನ್ನಪ್ಪಿದ್ದರು. ಆಕೆಯ ಸಾವಿಗೆ ವೈದ್ಯರ ನಿರ್ಲಕ್ಷ್ಯೇ ಕಾರಣ ಎಂದು ಆರೋಪಿಸಿ ಡಾ.ಶಿವಾನಂದ ಕುಡ್ತಲಕರ್ ವಿರುದ್ಧ ಮೃತಳ ಸಂಬಂಧಿಕರು ದೂರು ದಾಖಲಿಸಿದ್ದರು.
ಅಲ್ಲದೆ, ಡಾ.ಕುಡ್ತಲಕರ್ ವಿರುದ್ಧ ಮೀನುಗಾರರ ಮುಖಂಡರು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಶಾಸಕಿ ರೂಪಾಲಿ ನಾಯ್ಕ ಈ ಸಂಬಂಧ ಸಿ.ಎಂ. ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿ ಅವರ ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದರು. ಶಾಸಕಿಯ ಮನವಿಗೆ ಸ್ಪಂದಿಸಿದ ಸಿಎಂ ತಕ್ಷಣ ವರ್ಗಾವಣೆ ಮಾಡಲು ಆದೇಶ ನೀಡಿದ್ದರು.
ಈ ಪ್ರಕರಣ ಸಂಬಂಧ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಅವರು ಜಿಪಂ ಸಿಇಒ ಎಂ.ರೋಶನ್ ಅಧ್ಯಕ್ಷತೆಯಲ್ಲಿ ತನಿಖಾ ಸಮಿತಿಯೊಂದನ್ನು ರಚಿಸಿದ್ದಾರೆ. ಸಮಿತಿ ತನಿಖೆ ನಡೆಸುತ್ತಿದೆ.