

ಬಸವಕಲ್ಯಾಣ: ಪಡಿತರ ವಿತರಕರ ಸಮಸ್ಯೆ ಪರಿಹಾರ ಮತ್ತು ಬೇಡಿಕೆಗಳ ಬಗ್ಗೆ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸುವ ಮೂಲಕ ಸರ್ಕಾರದ ಗಮನ ಸೆಳೆಯುವುದಾಗಿ ಶಾಸಕ ಶರಣು ಸಲಗರ ಭರವಸೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ಪಡಿತರ ವಿತರಕರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳ ನಿಯೋಗದಿಂದ ಸೋಮವಾರ ಶಾಸಕರ ಕಚೇರಿಯದಲ್ಲಿ ಮನವಿಪತ್ರ ಸ್ವೀಕರಿಸಿ ಮಾತನಾಡಿದ ಅವರು, ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದರು.
ಸಗಟು ಮಳಿಗೆಗಳಲ್ಲಿ ಬಯೋಮೆಟ್ರಿಕ್ ಮಾಪನ ಅಳವಡಿಸಬೇಕು. ವಿತರಕರಿಗೆ ಬರಬೇಕಾಗಿರುವ ಈಕೆವೈಸಿ ಹಣ ಹಾಗೂ ಕಮಿಷನ್ ನೀಡಬೇಕು. ಸರ್ವರ್ ಸಮಸ್ಯೆ ಬಗೆಹರಿಸಬೇಕು. ಅನುಕಂಪದ ಅಂಗಡಿಗಳು ಮೊದಲಿನ ಪದ್ಧತಿಯಲ್ಲಿ ಕೊಡಬೇಕು. ಡಿಬಿಟಿ ಮೂಲಕ ಕಮಿಷನ್ ನೀಡಬೇಕು ಸೇರಿ ಇತರ ಬೇಡಿಕೆಗಳ ಕುರಿತು ಅಧಿವೇಶನದಲ್ಲಿ ಧ್ವನಿ ಎತ್ತಬೇಕು ಎಂದು ವಿತರಕರು ಮನವಿ ಮಾಡಿದರು.
ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರಕಾಶ ಮೆಂಡೋಳೆ, ತಾಲೂಕು ಅಧ್ಯಕ್ಷ ಆನಂದ ಪಾಟೀಲ್, ಕಾರ್ಯದರ್ಶಿ ರವೀಂದ್ರ ಖೇರ್ಡಾ, ಜಿಲ್ಲಾ ನಿರ್ದೇಶಕರಾದ ಘಂಟೆಪ್ಪ ಬಿರಾದಾರ, ಭೀವಾಜಿ ಪಾಟೀಲ್, ತಾಲೂಕು ಕಾರ್ಯದರ್ಶಿ ವಿರಾಮ ಕರಾಡೆ, ತಾಜೋದ್ಧಿನ್, ವಿಠ್ಠಲ್ ಮೇತ್ರೆ, ಷಣ್ಮುಖ ಪಾಟೀಲ್, ಬಸವರಾಜ ಧರಿ, ಲೋಕೇಶ, ನಾಗರಾಜ, ಪಂಡರಿನಾಥ್, ಸೋಮನಾಥ್ ಬಚಣೆ ಸುಭಾಷ ಕುದುರೆ ಇತರರಿದ್ದರು.
ಪಡಿತರ ವಿತರಕರ ಸಂಘದ ನಿಯೋಗದಿಂದ ತಾಲೂಕು ಆಡಳಿತ ಸೌಧಕ್ಕೆ ತೆರಳಿ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ದತ್ತಾತ್ರೇಯ ಗಾದಾ ಅವರಿಗೆ ಸಲ್ಲಿಸಲಾಯಿತು.