ಅಧಿವೇಶನಕ್ಕೂ ಮುನ್ನ ಶ್ವೇತಪತ್ರ ಹೊರಡಿಸಿ

7 klr-3
Published on

ಕೋಲಾರ: ವಿಧಾನಸಭೆ ಅಧಿವೇಶನ ಆರಂಭಗೊಳ್ಳುವ ಮುನ್ನ ಆರ್ಥಿಕ ಸ್ಥಿತಿ-ಗತಿಗಳ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಕೆಪಿಸಿಸಿ ಮಾಧ್ಯಮ ಸಂವಹನ ವಿಭಾಗದ ಸಹ ಅಧ್ಯಕ್ಷ, ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಆಗ್ರಹಿಸಿದರು.

ರಾಜ್ಯಕ್ಕೆ 2019-20ನೇ ಸಾಲಿನ ಜಿಎಸ್‌ಟಿ ಪಾಲು 31,674 ಕೋಟಿ ರೂ., ಹಿಂದಿನ ಬಾಕಿ 13, 764 ಕೋಟಿ ರೂ. ಬರಬೇಕಿದೆ. ಯಡಿಯೂರಪ್ಪ ಅವರಿಗೆ, ಹಕ್ಕು ಕೇಳಲು ಹಿಂಜರಿಕೆಯೇಕೆ? ಹಣ ಕೇಳದೆ ಕೇಂದ್ರ ಸರ್ಕಾರವನ್ನು ಮೆಚ್ಚಿಸಲು ಆಡಳಿತ ನಡೆಸುತ್ತಿದ್ದಾರಾ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ತೀರ್ಪು ಬೇಗ ಬರಲಿ: ಒಳ ಮೀಸಲಾತಿ ಕುರಿತು ಸುಪ್ರೀಂಕೋರ್ಟ್ ಅಭಿಪ್ರಾಯ ಜನರ, ರಾಜಕೀಯ ಪಕ್ಷಗಳ ಗಮನ ಸೆಳೆದಿದೆ. ಈ ವಿಚಾರವನ್ನು ನ್ಯಾಯಾಲಯ ಶೀಘ್ರ ಇತ್ಯರ್ಥಪಡಿಸಬೇಕು, ಸಾಮಾಜಿಕ ನ್ಯಾಯದ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತನ್ನ ನಿಲುವನ್ನು ಜನರ ಮುಂದೆ ಹೇಳಬೇಕು, ಅಧಿವೇಶನದಲ್ಲೂ ಚರ್ಚೆಯಾಗಬೇಕು ಎಂದರು.

ಸಮಾನ ಮೊತ್ತ ನೀಡಿ: ಮಾಲೂರಿನ ಮಿಂಡಹಳ್ಳಿ ಸಮೀಪ ಕೈಗಾರಿಕೆಗಳಿಗೆ ವಶಪಡಿಸಿಕೊಂಡ ರೈತರ ಜಮೀನಿಗೆ ಎಕರೆಗೆ 1.20 ಕೋಟಿ ರೂ. ನೀಡಲು ಡಿಸಿ ಶಿಫಾರಸು ಮಾಡಿರುವಾಗ ವೇಮಗಲ್, ನರಸಾಪುರ 2ನೇ ಹಂತದ ವಿಸ್ತರಣೆಗೂ ತಾರತಮ್ಯವಿಲ್ಲದೆ ಅಷ್ಟೇ ಹಣ ನೀಡಲು ಕೆಐಡಿಬಿಗೆ ಶಿಫಾರಸು ಮಾಡಬೇಕು ಎಂದರು.

ಮೇಲ್ದರ್ಜೆಗೇರಿಸಿ: ಕೋಲಾರದ ಕುರಗಲ್-ವೇಮಗಲ್ ಹಾಗೂ ಬೇತಮಂಗಲವನ್ನು ಪಟ್ಟಣ ಪಂಚಾಯಿತಿಯನ್ನಾಗಿಸಲು ಪ್ರಸ್ತಾವನೆ ಸಲ್ಲಿಕೆಯಾಗಿದೆ. ಸಂಸದರು, ಶಾಸಕರು, ಉಸ್ತುವಾರಿ ಸಚಿವರು ಗಮನಹರಿಸಬೇಕು ಎಂದು ಒತ್ತಾಯಿಸಿದರು. ರಾಜ್ಯದ 37 ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಕಚೇರಿ ನಿರ್ಮಾಣ, ನವೀಕರಣಕ್ಕೆ ಕ್ರಮವಹಿಸಲಾಗಿದೆ, ಕೋಲಾರ ಸೇರಿ 7-8 ಜಿಲ್ಲೆಗಳ ಮುಖಂಡರಲ್ಲಿನ ಗೊಂದಲ ಬಗೆಹರಿಸಲು ಡಿ.ಕೆ.ಶಿವಕುಮಾರ್ ಗುಣಮುಖರಾದ ನಂತರ ಕಾರ್ಯಪ್ರವೃತ್ತರಾಗುತ್ತಾರೆ ಎಂದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಗೋಷ್ಠಿಯಲ್ಲಿದ್ದರು.

ಕೆಪಿಸಿಸಿಯಿಂದ ವಿಷನ್ ಕರ್ನಾಟಕ ಸಮಿತಿಯನ್ನು ಮಾಜಿ ಸಚಿವ ಆರ್. ವಿ. ದೇಶಪಾಂಡೆ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ. ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ಸೇರಿ ಜನವಿರೋಧಿ ನೀತಿಗಳ ವಿರುದ್ಧ ಹೋರಾಟ, ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ತರಬೇತಿ, ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸಲು ಕಾರ್ಯಾಗಾರ ನಡೆಸಲಾಗುತ್ತಿದೆ. ವಿ.ಆರ್.ಸುದರ್ಶನ್, ಮಾಜಿ ಸಭಾಪತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net