

ಔರಾದ್: ಪಟ್ಟಣದಲ್ಲಿ ೩೦ ವರ್ಷಗಳಿಂದ ವಾಸವಾಗಿರುವ ಅಲೆಮಾರಿ ಬುಡಕಟ್ಟು ಜನಾಂಗದವರ ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ವಿಳಂಬ ಮಾಡುತ್ತಿರುವುದು ತುಂಬ ಬೇಸರ ತಂದಿದೆ. ಕೂಡಲೇ ಸಮಸ್ಯೆಗೆ ಸ್ಪಂದಿಸಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕೆಂದು ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಶುಕ್ರವಾರ ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ವಾಸವಾಗಿರುವ ಅಲೆಮಾರಿ ಬುಡಕಟ್ಟು ಜನಾಂಗದ ಸಮಸ್ಯೆ ಆಲಿಸಿ ಮಾತನಾಡಿದ ಅವರು, ಬಡ ಜನತೆ ಗುಡಿಸಿನಲ್ಲಿ ಜೀವನ ನಡೆಸುತ್ತಿದ್ದಾರೆ. ಜನಪ್ರತಿನಿಧಿ ಮತ್ತು ಅಧಿಕಾರಿಗಳು ಕೇವಲ ಹೆಸರಿಗೆ ಮಾತ್ರ ಬಂದು ಹೋಗುತ್ತಿರುವ ತರಹ ಕಾಣ್ತಾ ಇದೆ. ಇಲ್ಲಿಯವರೆಗೆ ಒಂದು ಸೂರು ಕಲ್ಪಿಸದೆ ಇರುವುದು ನೋವು ತಂದಿದೆ ಬೇಸರ ವ್ಯಕ್ತಪಡಿಸಿದರು.
ಸರ್ವೇ ನಂ.೨೦೫ರಲ್ಲಿ ೨ ಎಕರೆ ಜಮೀನು ಗುರುತಿಸಿ ಜಿಲ್ಲಾಧಿಕಾರಿಗಳ ಅನುಮೋದನೆಗೆ ಕಳುಹಿಸಿದ್ದಾರೆ. ಅಧಿಕಾರಿಗಳ ಜತೆಗೆ ಚರ್ಚಿಸಿ ಶೀಘ್ರವೇ ಸೂರು ಕಲ್ಪಿಸುವ ಕೆಲಸ ಪ್ರಾಮಾಣಿಕವಾಗಿ ಮಾಡುವೆ ಎಂದು ಭರವಸೆ ನೀಡಿದರು.
ಅಲೆಮಾರಿ ಜನಾಂಗದ ಜನರು ತಮ್ಮ ಸಮಸ್ಯೆಗಳನ್ನು ಬಿಚ್ಚಿಟ್ಟರು. ಸುಮಾರು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ಆದರೆ ಇಲ್ಲಿಯವರೆಗೆ ಯಾವುದೇ ರೀತಿಯ ಸೌಲಭ್ಯ ಸಿಕ್ಕಿಲ್ಲ, ಅಧಿಕಾರಿಗಳು ಬರುತ್ತಾರೆ ಹೋಗುತ್ತಾರೆ. ಇಲ್ಲಿಯವರೆಗೆ ಸೂರು ಕಲ್ಪಿಸಿಲ್ಲವೆಂದು ಸೋನಾಬಾಯಿ, ಶಶಿಕಲಾ, ಭಟ್ಕೆ ಸಮಾಜ ಅಧ್ಯಕ್ಷ ನಾಗನಾಥ ವಾಕೋಡೆ ಕಣ್ಣೀರಿಟ್ಟರು.
ತಹಸೀಲ್ದಾರ್ ಮಹೇಶ ಪಾಟೀಲ, ಪಪಂ ಮುಖ್ಯಾಧಿಕಾರಿ ಸ್ವಾಮಿದಾಸ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಸಿಂಧು ಎಚ್.ಎಸ್., ಆಪ್ತ ಸಹಾಯಕ ಆನಂದಕುಮಾರ, ಸಹಾಯಕ ನಿರ್ದೇಶಕ ಅನಿಲಕುಮಾರ ವಾಲ್ದೋಡ್ಡಿ, ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಬಸವರಾಜ ಶೆಟಕಾರ, ಅನಿಲ ನಿರ್ಮಳೆ, ಅನಿಲ ಬೆಲೂರೆ, ಅನಿಲ ದೇವಕತೆ ಇತರರಿದ್ದರು.