ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ನಿರ್ವಹಿಸಲು ಡಿಸಿ.ಸೂಚನೆ

ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ನಿರ್ವಹಿಸಲು ಡಿಸಿ.ಸೂಚನೆ
Published on

ಹಾಸನ : ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಣೆ ಮಾಡಿ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಸಮನ್ವಯತೆಯಿಂದ ಕೆಲಸ ಮಾಡುವಂತೆ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಲಾಖೆಗಳು ಸಮಾನ ಮನಸ್ಥಿತಿಯಿದಿಂದ ಕೆಲಸ ಮಾಡಬೇಕು ಎಂದರಲ್ಲದೆ, ಬಾಲಕಾರ್ಮಿಕರಾಗಿ ಪತ್ತೆಯಾದ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿದಾಗ ಮಗುವನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಗಮನಕ್ಕೆ ತಂದು ಬಿಡುಗಡೆಗೊಳಿಸಬೇಕು ಎಂದರು.
ಮಗುವಿನ ಮುಂದಿನ ವಿದ್ಯಾಭ್ಯಾಸದ ಹಿತದೃಷ್ಟಿಯಿಂದ ಸೋಶಿಯಲ್ ಇನ್ವೆಸ್ಟಿಗೇಷನ್ ವರದಿಯನ್ನು ಆಧರಿಸಿ ಮಗುವನ್ನು ಬಿಡುಗಡೆಗೊಳಿಸಲು ಸೂಕ್ತ ಕ್ರಮಕೈಗೊಳ್ಳಬೇಕು.ಕಾರ್ಮಿಕ ಇಲಾಖೆಯು ಬಿಡುಗಡೆಯಾದ ಮಗುವಿನ ಅನುಪಾಲನೆ ಮಾಡಬೇಕೆಂದು ಸೂಚಿಸಿದರು.
ಎಲ್ಲಾ ಇಲಾಖೆಗಳು ಸಹಭಾಗಿತ್ವದಲ್ಲಿ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಯಲ್ಲಿ ಕೆಲಸ ಮಾಡಬೇಕು. ಬಾಲಕಾರ್ಮಿಕರನ್ನು ನೇಮಿಸಿಕೊಂಡಿದ್ದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸುವಾಗ ಪೊಲೀಸ್ ಇಲಾಖೆ ನಿರ್ಲಕ್ಷವಹಿಸದೆ ಸಂಬಂಧಪಟ್ಟ ಇಲಾಖೆಯೊಂದಿಗೆ ಕ್ರಮಕೈಗೊಳ್ಳಬೇಕೆಂದು ತಿಳಿಸಿದರು.
ಬಾಲಕಾರ್ಮಿಕ ಹಾಗೂ ಕಿಶೋರಾವಸ್ತೆ ಕಾರ್ಮಿಕರ ಸಮೀಕ್ಷೆ ಮಾಡಬೇಕೆಂದು ಸೂಚಿಸಿದರು ಹಾಗೂ ಪೊಲೀಸ್ ಇಲಾಖೆಗೆ ಮತ್ತು ಬಾಲಕಾರ್ಮಿಕ ಹಾಗೂ ಕಿಶೋರಾವಸ್ಥೆ ಕಾರ್ಮಿಕ ನಿಷೇಧ ನಿಯಂತ್ರಣ ಕಾಯ್ದೆ 1986 ಹಾಗೂ ತಿದ್ದುಪಡಿ ಕಾಯ್ದೆ 2016 ರ ಕಲಂ 17ರ ಅಡಿ ನೇಮಕವಾದ ನಿರೀಕ್ಷಕರುಗಳಿಗೆ ಬಾಲಕಾರ್ಮಿಕ ನಿರ್ಮೂಲನೆಯ ಬಗ್ಗೆ ತರಬೇತಿಯನ್ನು ಆಯೋಜಿಸುವಂತೆ ಕಾರ್ಮಿಕ ಇಲಾಖೆ ಅಧಿಕಾರಿಗೆ ಸೂಚಿಸಿದರು.
ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಾಕ್ಷಾಯಿಣಿ ಅವರು ಮಾತನಾಡಿ, ಬಾಲಕಾರ್ಮಿಕರನ್ನು ಬಿಡುಗಡೆಗೊಳಿಸುವಾಗ ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡುವಂತೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಶೇಖರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು ಹಾಗೂ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net