ಅಧಿಕಾರಿಗಳು, ಸದಸ್ಯರಲ್ಲಿ ಹೊಂದಾಣಿಕೆ ಕೊರತೆ

CMC
Published on

ಚಿತ್ರದುರ್ಗ: ಇಲ್ಲಿನ ನಗರಸಭೆಯ ಅಧಿಕಾರಿಗಳು, ಸದಸ್ಯರ ನಡುವೆ ಹೊಂದಾಣಿಕೆ ಕೊರತೆ ಇದೆ ಎಂಬುದಕ್ಕೆ ಸಾಮಾನ್ಯ ಸಭೆ ಮುಂದೂಡಿದ್ದೆ ಸಾಕ್ಷಿಯಾಯಿತು.

ನೂತನ ಅಧ್ಯಕ್ಷೆ ಸುಮಿತಾ ರಾಘವೇಂದ್ರ ಅಧ್ಯಕ್ಷತೆಯಲ್ಲಿ ಸೋಮವಾರ ಬೆಳಗ್ಗೆ 11ಕ್ಕೆ ಮೊದಲ ಸಾಮಾನ್ಯ ಸಭೆ ನಿಗದಿಯಾಗಿತ್ತು. ಆದರೆ, 11.45 ಸಮಯವಾದರೂ ಮುಖ್ಯವಾಗಿ ಇರಬೇಕಿದ್ದ ಅಧಿಕಾರಿಗಳೇ ಸುಳಿಯಲಿಲ್ಲ. ಇದು ಅನೇಕ ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು.

ಒಂದು ವರ್ಷಕ್ಕೂ ಅಧಿಕ ಕಾಲ ಖಾಲಿ ಇದ್ದ ಅಧ್ಯಕ್ಷ ಸ್ಥಾನಕ್ಕೆ ತಿಂಗಳ ಹಿಂದಷ್ಟೇ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆದ ಬಳಿಕ ಆಯ್ಕೆಯಾಗಿದ್ದ ಅಧ್ಯಕ್ಷೆ ಸುಮಿತಾ ಅವರಿಗೆ ಸಭೆ ಮುಂದೂಡಬೇಕಾದ ಪರಿಸ್ಥಿತಿ ಎದುರಾಗಿ, ಎಲ್ಲಿಲ್ಲದ ಬೇಸರ ಉಂಟಾಯಿತು.

ಸಭೆ ಕರೆದ ಅಧ್ಯಕ್ಷರ ಮಾತಿಗೆ ಕಿಮ್ಮತ್ತಿಲ್ಲ. ಅವರಿಗೆ ಅವಮಾನಿಸಿದ್ದಾರೆ ಎಂದು ಸದಸ್ಯ ಮಂಜುನಾಥ್ ಗೊಪ್ಪೆ ಆಕ್ರೋಶ ಹೊರಹಾಕಿದರು. ಕಳೆದೊಂದು ವರ್ಷದಿಂದ ಸದಸ್ಯರು ಹೇಳಿದ ಯಾವ ಕೆಲಸಗಳು ವಾರ್ಡ್‌ಗಳಲ್ಲಿ ಆಗುತ್ತಿಲ್ಲ. ಸ್ಪಂದಿಸದ ಅಧಿಕಾರಿಗಳು ನಮಗೆ ಬೇಕಿಲ್ಲ, ಸಭೆಯೂ ಬೇಕಿಲ್ಲ ಎಂದು ಕಿಡಿಕಾರಿದರು. ನಾವೆಲ್ಲರೂ ರಾಜೀನಾಮೆ ಕೊಟ್ಟು ಹೋಗೋಣ. ಅಧಿಕಾರಿಗಳೇ ಆಡಳಿತ ನಡೆಸಲಿ ಎಂಬ ಮಾತು ಕೇಳಿಬಂದಿತು.

ನಗರಸಭೆ ಆಡಳಿತ ಯಂತ್ರ ಕುಸಿದಿದೆ. ಹಿಡಿತ ಸಾಧಿಸುವಲ್ಲಿ ಅಧ್ಯಕ್ಷರು ವಿಫಲರಾಗಿದ್ದಾರೆ. ಅಭಿವೃದ್ಧಿ ಕುಂಠಿತವಾಗಿದೆ ಎಂದು ಬಿಜೆಪಿ ಸದಸ್ಯರು ದೂರಿದರು.

ಅಧ್ಯಕ್ಷರನ್ನು ಬೆಂಬಲಿಸುವ ಒಂದು ಗುಂಪು ಸಭಾಂಗಣದಿಂದ ಹೊರನಡೆದು ಕೊಠಡಿಯಲ್ಲಿ ಗೌಪ್ಯ ಚರ್ಚೆಗೆ ಮುಂದಾದರು. ತಡವಾಗಿ ಬಂದ ನಗರಸಭೆ ಪೌರಾಯುಕ್ತೆ ಎಂ.ರೇಣುಕಾ, ನಾವು ಸಾರ್ವಜನಿಕರ ಕೆಲಸ ಮಾಡಲಿಕ್ಕಾಗಿಯೇ ಇದ್ದೇವೆ. ಡಿಸಿ ಅವರು ಸಭೆ ಕರೆದಿದ್ದರಿಂದ ಸ್ವಲ್ಪ ತಡವಾಯಿತು ಎಂದರು.

ಸುಮಿತಾ ಮಾತನಾಡಿ, ನೀರು ಪೂರೈಕೆ, ಚರಂಡಿ ಸೇರಿ ವಾರ್ಡ್‌ಗಳ ಸ್ವಚ್ಛತೆ, ಸಮಸ್ಯೆಗಳ ಕುರಿತು ಸ್ಥಳೀಯ ನಾಗರಿಕರು ಅಧ್ಯಕ್ಷರು, ಸದಸ್ಯರನ್ನು ಪ್ರಶ್ನಿಸುತ್ತಾರೆ. ಉತ್ತರ ಕೊಡಬೇಕಾದ್ದು, ನಾವುಗಳೇ ಹೊರತು ಡಿಸಿ ಅವರಲ್ಲ ಎಂದರು.

ವ್ಯವಸ್ಥಾಪಕಿ ಮಂಜುಳಾ ಸದಸ್ಯರ ಮನವೊಲಿಸಿ ಸಭೆ ನಡೆಸಲು ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಸ್ಪಂದಿಸದ ಅಧಿಕಾರಿಗಳು ಚಿತ್ರದುರ್ಗ ನಗರಸಭೆಗೆ ಬೇಡವೆಂದು ನಿರ್ಣಯ ಮಂಡಿಸಲು ಮಂಜುನಾಥ್ ಗೊಪ್ಪೆ ಇದೇ ವೇಳೆ ಆಗ್ರಹಿಸಿದರು.

ಮಧ್ಯ ಪ್ರವೇಶಿಸಿದ ಸದಸ್ಯ ಸರ್ದಾರ್ ಅಹಮದ್ ಪಾಷಾ ಮಾತನಾಡಿ, ಅಧಿಕಾರಿಗಳು, ಸದಸ್ಯರು ಒಂದೇ ಕುಟುಂಬವಿದ್ದಂತೆ. ನಮ್ಮಲ್ಲಿ ಭಿನ್ನಾಭಿಪ್ರಾಯಗಳು ಬೇಡ. ಎಲ್ಲರೂ ಸೇರಿ ಒಟ್ಟಾಗಿ ಜನಪರ ಕೆಲಸ ಮಾಡೋಣ ಎಂದು ಸಮಾಧಾನ ಪಡಿಸಲು ಮುಂದಾದರು.

ಚರ್ಚೆಯಾಗದ ಸಮಸ್ಯೆಗಳು: ಮೂಲಸೌಕರ್ಯ ಕಲ್ಪಿಸುವ, ವಾರ್ಡ್‌ಗಳ ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಲು ನಡೆಯಬೇಕಿದ್ದ ಸಭೆ ಮುಂದೂಡಲಾಗಿದೆ ಎಂದು ಸುದ್ದಿಗಾರರಿಗೆ ಸುಮಿತಾ ರಾಘವೇಂದ್ರ ತಿಳಿಸಿದರು.

ಕುಡಿಯುವ ನೀರು, ನೈರ್ಮಲ್ಯ, ಆರೋಗ್ಯ, ಅಭಿವೃದ್ಧಿ ಕೆಲಸಗಳಿಗೆ ಒತ್ತು ನೀಡಿ, ಸದಸ್ಯರ ವಿಶ್ವಾಸದೊಂದಿಗೆ ಯೋಜನೆ ರೂಪಿಸಿಕೊಳ್ಳಲು ತೀರ್ಮಾನಿಸಬೇಕಿತ್ತು. ಮುಂದೆ ಪುನರಾವರ್ತನೆ ಆಗದಂತೆ ಎಚ್ಚರವಹಿಸಲಾಗುವುದು ಎಂದು ತಿಳಿಸಿದರು.

ಉಪಾಧ್ಯಕ್ಷೆ ಶ್ರೀದೇವಿ ಚಕ್ರವರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net