ಅಧಿಕಾರಿಗಳು ಶ್ರಮ ವಹಿಸಿ ಕೆಲಸ ನಿರ್ವಹಿಸಿ

Vpt- 01-15-23
ವಿರಾಜಪೇಟೆ ಪುರ ಭವನ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಉಸ್ತುವಾರಿ ಸಚಿವ ಬೋಸ ರಾಜು, ಶಾಸಕ ಎ.ಎಸ್. ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಜಿಲ್ಲಾಧಿಕಾರಿ ವೆಂಕಟ ರಾಜ, ಮುಖ್ಯ ಕಾರ್ಯನಿರ್ವಾಣಾಧಿಕಾರಿ ವರ್ಣಿತ್ ನೇಗಿ ಇದ್ದಾರೆ.
Published on

ವಿರಾಜಪೇಟೆ: ಅಧಿಕಾರಿಗಳು ಶ್ರಮವಹಿಸಿ ಕೆಲಸ ನಿರ್ವಹಿಸದಿದ್ದಲ್ಲಿ ಕೆಲಸ ಕಳೆದುಕೊಳ್ಳುವ ಪ್ರಮೇಯ ಬರಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ಹೇಳಿದರು.

ವಿರಾಜಪೇಟೆ ಪುರಭವನದಲ್ಲಿ ಏರ್ಪಡಿಸಿದ್ದ ತಾಲ್ಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯ ಎಲ್ಲಾ ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇವೆ. ಖಾಲಿ ಇರುವ ಸ್ಥಾನಕ್ಕೆ ಮತ್ತೊಬ್ಬರು ನಿಯುಕ್ತಿ ಆಗುವವರೆಗೆ ವರ್ಗಾವಣೆ ನೀಡಬಾರದು ಎಂದು ಹೇಳಿದರು.

ವಿರಾಜಪೇಟೆ ತಾಲ್ಲೂಕು ಶಿಕ್ಷಣಾಧಿಕಾರಿ ಪ್ರಕಾಶ್ ತಾಲ್ಲೂಕಿನಲ್ಲಿ 177 ಶಿಕ್ಷಕರ ಹುದ್ದೆಗಳು ಖಾಲಿ ಇರುವ ಕುರಿತು ಸಭೆಗೆ ಮಾಹಿತಿ ನೀಡಿದರು. ಅನುದಾನಿತ ಶಾಲೆಗಳಿಗೆ ಶಿಕ್ಷಕರ ನೇಮಕ ಆಗದಿರುವ ಕುರಿತು ಶಾಸಕ ಪೊನ್ನಣ್ಣ ಪ್ರಶ್ನಿಸಿ ಸಮಗ್ರ ಮಾಹಿತಿಯನ್ನು ಡಿಸಿ ಹಾಗೂ ಉಸ್ತುವಾರಿ ಸಚಿವರಿಗೆ ನೀಡುವಂತೆ ಸೂಚಿಸಿದರು.

ವಿರಾಜಪೇಟೆ ಆಸ್ಪತ್ರೆಯಲ್ಲಿ ವೈದ್ಯರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರುಗಳು ಬರುತ್ತಿವೆ. ಮರುಕಳಿಸದಂತೆ ಪೊನ್ನಣ್ಣ ಎಚ್ಚರಿಸಿದರು. ತಾಲ್ಲೂಕು ವೈದ್ಯಾಧಿಕಾರಿ ಹೇಮಾಪ್ರಿಯ ವೈದ್ಯರ ಕೊರತೆಯಿಂದ ಕರ್ತವ್ಯದಲ್ಲಿರುವ ವೈದ್ಯರು ಐಸಿಯು, ಜನರಲ್ ರೌಂಡ್ಸ್ ಮುಗಿಸಿ ಬರುವುದು ತಡವಾಗುತ್ತಿದೆ ಎಂದು ಹೇಳಿದರು. ಜಿಲ್ಲಾ ಆರೋಗ್ಯಾಧಿಕಾರಿ ಸತೀಶ್ ಕುಮಾರ್ ಒಟ್ಟು ಎಂಟು ವೈದ್ಯರ ಕೊರತೆ ಇರುವ ಕುರಿತು ಸಭೆಗೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಗೆ ಬೇಕಿರುವ ಸೌಲಭ್ಯಗಳ ಕುರಿತು ವರದಿಯನ್ನು ಜಿಲ್ಲಾಧಿಕಾರಿಯ ಗಮನಕ್ಕೆ ತನ್ನಿ, ಆರೋಗ್ಯ ಸಚಿವರ ಜೊತೆ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲು ಚಿಂತಿಸುವುದಾಗಿ ಸಚಿವ ಬೋಸರಾಜು ಹೇಳಿದರು.

ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಸಂಬಂಧ ಪಟ್ಟವರು ಎಚ್ಚರಿಕೆ ವಹಿಸಬೇಕು. ಇಒ, ಸಿಇಒ ಪ್ರತಿಯೊಬ್ಬರೂ ಸಮಸ್ಯೆಜಾಗಕ್ಕೆ ಭೇಟಿ ನೀಡಿ ಪರಿಹರಿಸುವತ್ತ ಚಿಂತನೆ ಹರಿಸುವಂತೆ ಸೂಚಿಸಿದರು.

ಸರ್ವೆ ಇಲಾಖೆ ಹಾಗೂ ಚೆಸ್ಕಾಂ ಇಲಾಖೆಯಲ್ಲಿ ಸಮರ್ಪಕ ಕೆಲಸಗಳು ಆಗಿಲ್ಲ ಸಂಬಂಧಪಟ್ಟವರು ಗಮನಹರಿಸುವಂತೆ ಸೂಚಿಸಿದರು. ನಿಗದಿಯಾಗಿದ್ದ ಸಮಯಕ್ಕಿಂತ ಎರಡು ಘಂಟೆ ತಡವಾಗಿ ಸಭೆ ಆರಂಭವಾಗಿ ಎಲ್ಲಾ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯದೆ ಮುಗಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಸುಜಾಕುಶಾಲಪ್ಪ, ಜಿಲ್ಲಾಧಿಕಾರಿ ವೆಂಕಟ ರಾಜ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ, ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಹಸೀಲ್ದಾರ್ ರಾಮಚಂದ್ರ ಹಾಗೂ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net