ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ತಕ್ಷಣ ಸ್ವಂಧಿಸಬೇಕು

ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ತಕ್ಷಣ ಸ್ವಂಧಿಸಬೇಕು
Published on


ಚನ್ನರಾಯಪಟ್ಟಣ:ತಾಲೂಕು ಹಾಗೂ ಹೋಬಳಿ ಮಟ್ಟದ ಸರ್ಕಾರಿ ಕಚೇರಿಗಳಲ್ಲಿ ರೈತರ ಯಾವುದೇ ಕೆಲಸಗಳಿಗೆ ವಿಳಂಬವಾಗಬಾರದು ಎಂದು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಸೂಚಿಸಿದರು.


ತಾಲೂಕಿನ ಹಿರೀಸಾವೆ ಹೋಬಳಿ ಆಯಾರಹಳ್ಳಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿ, ರೈತ ಎಂದರೆ ದೇಶದ ಜೀವನಾಡಿ ಎಂದರು.


ಯಾರೇ ಕೈಕಟ್ಟಿ ಕುಳಿತರೂ ಪರವಾಗಿಲ್ಲ ಆದರೆ ರೈತರು ಒಂದು ದಿನ ಕೈಚೆಲ್ಲಿ ಕುಳಿತರೆ ದೇಶದಲ್ಲಿ ಆಹಾರದ ಕೊರತೆ ಎದುರಾಗಲಿದೆ. ರೈತ ವರ್ಗಕ್ಕೆ ಒಂದಷ್ಟು ಸೌಲಭ್ಯಗಳನ್ನು ಕಲ್ಪಿಸಿದರೆ ಸಾಕು ದೇಶವನ್ನು ಸಮೃದ್ಧಿಗೊಳಿಸುವ ಶಕ್ತಿ ಅವರಿಗಿದೆ ಎಂದು ತಿಳಿಸಿದರು.


ನಾಡಕಚೇರಿ ಹಾಗೂ ಯಾವುದೇ ಇಲಾಖೆಗೆ ಬರುವ ಅರ್ಜಿಗಳನ್ನು ಪರಿಶೀಲಿಸಿ ಸಮಯಕ್ಕೆ ಸರಿಯಾಗಿ ವಿಲೇವಾರಿಗೊಳಿಸುವ ಕೆಲಸವಾಗಬೇಕು. ರೈತರು ಅಲೆದಾಡುವ ಸ್ಥಿತಿ ಇರಬಾರದು. ದಾಖಲಾತಿಗಳ ಕೊರತೆ ಇದ್ದಲ್ಲಿ ಅವರಿಗೆ ತಿಳಿಸಿ ಪಡೆದು ಕೆಲಸ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.


ಪರೀಕ್ಷೆ ದಿನಗಳು ಬರುತ್ತಿದ್ದು ಮಕ್ಕಳು ಓದಿನತ್ತ ಹೆಚ್ಚು ಗಮನ ಹರಿಸಬೇಕು. ವರ್ಷವಿಡೀ ಕಲಿತ ಪಾಠ ಅಥವಾ ವೃದ್ಧಿಸಿಕೊಳ್ಳುವ ಜ್ಞಾನಕ್ಕೆ ಪರೀಕ್ಷೆ ಒಂದು ಅಗ್ನಿ ಪರೀಕ್ಷೆಯಾಗಿರುತ್ತದೆ. ಆದರೆ ಯಾವುದೇ ಭಯಗೊಳ್ಳದೇ ಎದುರಿಸಿ ಕಲಿಸಿದ ಶಿಕ್ಷಕರಿಗೆ ಹಾಗೂ ಪಾಲಕರಿಗೆ ಒಳ್ಳೆಯ ಹೆಸರು ಮತ್ತು ಕೀರ್ತಿ ತರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.


ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಅಧಿಕಾರಿ ವರ್ಗವು ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ತಾಲೂಕು ರೈತರ ಎಲ್ಲ ಕೆಲಸಗಳು ಸಮಯಕ್ಕೆ ಸರಿಯಾಗಿ ವಿಲೆವಾರಿಯಾಗುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರೈತರ ಕೃಷಿಗೆ ಅನುಕೂಲ ಕಲ್ಪಿಸುವ ಸಿಟ್ಟಿನಲ್ಲಿ ಸರ್ಕಾರವು ಪಂಪ್‌ಸೆಟ್ ಸಲುವಾಗಿ ದಿನದಲ್ಲಿ 7 ಗಂಟೆ ವಿದ್ಯುತ್ ಪೂರೈಕೆ ಮಾಡಲು ಸೂಚಿಸಿದೆ. ಸಮಸ್ಯೆ ಕಂಡುಬಂದ ಕಡೆಗಳಲ್ಲಿ ಶೀಘ್ರ ಬಗೆಹರಿಸಿ ವಿದ್ಯುತ್ ಪೂರೈಕೆ ಮಾಡಬೇಕು. ರೈತರಿಗೆ ತೊಂದರೆಯಾಗವಾರದು ಎಂದು ಸೆಸ್ಕ್ ಅಧಿಕಾರಿಗಳಿಗೆ ಸೂಚಿಸಿದರು.


ನೀರನ್ನು ಉಳಿಸುವ ಸಲುವಾಗಿ ಕೃಷಿ ಚಟುವಟಿಕೆಯಲ್ಲಿ ತುಂತುರು ನೀರಾವರಿ ಅಳವಡಿಕೆಯ ಅಗತ್ಯವಿದ್ದು ತಾಲೂಕಿನಲ್ಲಿ ಬಾರಿ ಭೇಡಿಕೆ ಇದೆ. ಆದ್ದರಿಂದ ಕೃಷಿ ಇಲಾಕೆಯು ಭೇಡಿಕೆಗೆ ಅನುಗುಣವಾಗಿ ಪೂರೈಕೆ ಮಾಡಲು ವ್ಯವಸ್ಥೆ ಮಾಡಬೇಕು. ಈ ಬಗ್ಗೆ ಕೃಷಿ ಸಚಿವರ ಗಮನಕ್ಕೂ ತರಲಾಗುವುದು ಎಂದರು.


ಶೀಘ್ರದಲ್ಲಿಯೇ ತಾಲೂಕು ಆರೋಗ್ಯಾಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಹೋಬಳಿ ಮಟ್ಟದ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸಲು ಕ್ರಮ ಕೈಗೊಳ್ಳಲಾಗುವುದು. ಇದರಿಂದ ಗ್ರಾಮೀಣ ಭಾಗದ ಜನತೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.


ಈ ವೇಳೆ ವ್ಯಾಪ್ತಿಯ ರೈತರಿಂದ ಸರ್ವೇ, ವೃದ್ಧಾಪ್ಯ, ವಿದ್ಯುತ್, ರಸ್ತೆ, ಕೆರೆ ಒತ್ತುವರಿ ತೆರವು ಸೇರಿದಂತೆ ಹಲವು ಸಮಸ್ಯೆಗಳಿಗೆ ಸಂಬಂದಪಟ್ಟಂತೆ 215 ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದರು. ಇದಕ್ಕೂ ಮೊದಲು ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಹಾಗೂ ಶಸಕ ಸಿ.ಎನ್.ಬಾಲಕೃಷ್ಣ ಅವರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು. ಎತ್ತಿನ ಗಾಡಿಯಲ್ಲಿ ಮಂಗಳವಾಧ್ಯದೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು.


ಹಾಸನ ಉಪವಿಭಾಗಾಧಿಕಾರಿ ಜಿ.ಕೆ.ಕೃಪಾಲಿನಿ, ಡಿಡಿಎಲ್‌ಆರ್ ಹೇಮಲತಾ, ಉಪತಹಸೀಲ್ದಾರ್ ಬಿ.ಎಂ.ಗೋವಿಂದರಾಜ್, ತಾಲೂಕು ಪಂಚಾಯಿತಿ ಇಒ ಸುನೀಲ್‌ಕುಮಾರ್, ಉಪ ತಹಸೀಲ್ದಾರ್ ನಂಜೇಗೌಡ, ಆರ್‌ಐ ವೀರಾಜ್, ಪ್ರಮುಖರಾದ ಎಚ್.ಜಿ.ರಾಮಕೃಷ್ಣ, ಆಯಾರಹಳ್ಳಿ ಪ್ರಭಾಕರ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ರೈತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net