ಹುಣಸೂರು: ಕಂದಾಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಬಿಳಿಕೆರೆ ಗ್ರಾಮದಲ್ಲಿ ವಾಸವಾಗಿರುವ ರೈತ ಕಾಳೇಗೌಡರವರ ಕುಟುಂಬ ಆಗಿರುವ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು ಎಂದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಆನಂದಗೆರೆ ಮಂಜುನಾಥಗೌಡ ಒತ್ತಾಯಿಸಿದ್ದಾರೆ.
ರೈತ ಕಾಳೇಗೌಡ ಬಿನ್ ಚಂದ್ರೆಗೌಡ ತಮಗೆ ಸೇರಿದ ಸರ್ವೇ ನಂ.83/1ರಲ್ಲಿ ಸುಮಾರು ಒಂದು 1.11 ಎಕರೆ ಜಮೀನಿನಲ್ಲಿ ಅಲಸಂದೆ, ಜೋಳ ಸೇರಿದಂತೆ ಇತರ ಬೆಳೆಗಳನ್ನು ಬಳೆದಿದ್ದರು. ಇತ್ತೀಚೆಗೆ ಕಾಳೇಗೌಡ ಅವರ ಮಕ್ಕಳಾದ ಶ್ರುತಿ, ಮಧು, ವಸುಮತಿ, ರಶ್ಮಿ ಜತೆ ರೈತ ಕಾಳೇಗೌಡ ಜಮೀನಿನ ಬಳಿ ಬಂದಾಗ ಪಕ್ಕದ ಜಮೀನಿನ ಮಾಲೀಕ ವಾಸುದೇವಪ್ಪ ಎಂಬಾತ ಮಗ ಮತ್ತು ಖಾಸಗಿ ವ್ಯಕ್ತಿಗಳನ್ನು ಕರೆತಂದು ಜಮೀನಿನಲ್ಲಿ ಬೆಳೆದಿದ್ದ ಬೆಳೆಗಳನ್ನು ಟ್ರ್ಯಾಕ್ಟರ್ ಮೂಲಕ ನಾಶ ಮಾಡಿದ್ದರು. ಈ ವಿಚಾರವಾಗಿ ಬಿಳಿಕೆರೆ ಪೊಲೀಸ್ ಠಾಣೆಗೆ ಕಾಳೇಗೌಡ ದೂರು ನೀಡಿದ್ದರು. ಅಲ್ಲದೇ ರೈತನಿಗೆ ಏಕಾಏಕಿ ಅನ್ಯಾಯವಾಗಿರುವ ಕುರಿತು ನಮ್ಮ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳಾದ ಪೆಂಜಳ್ಳಿ ನಾಗರಾಜೇಗೌಡ, ಪಾಂಡವಪುರ ತಾಲೂಕು ಅಧ್ಯಕ್ಷ ಕುಮಾರ್, ಬೆಟ್ಟದಪುರ ಹೋಬಳಿ ಅಧ್ಯಕ್ಷ ಸಣ್ಣೆಗೌಡ, ಜಿಲ್ಲಾ ಕಾರ್ಯದರ್ಶಿ ಹುಲ್ಲೇನಹಳ್ಳಿ ದೇವರಾಜು, ಆರತಿ ಉಕ್ಕುಡ ಜಯರಾಮ್ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆಯನ್ನು ಕೂಡ ಮಾಡಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಆಗಿರುವ ಅನ್ಯಾಯ ಹಾಗೂ ದೌರ್ಜನ್ಯಕ್ಕೆ ನ್ಯಾಯ ಒದಗಿಸಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.