ಅಧಿಕಾರಿಗಳು ರಾಜ್ಯದ ರೈತರ ಹಿತಕಾಯಲಿ

10 KAMPLI 03
Published on

ಕಂಪ್ಲಿ: ತುಂಗಭದ್ರಾ ಜಲಾಶಯದ ನೀರನ್ನು ಸದ್ಭಳಕೆ ಮಾಡಿಕೊಳ್ಳುವಲ್ಲಿ ರಾಜ್ಯದ ಇಂಜಿನಿಯರ್‌ಗಳು ವಿಫಲರಾಗಿದ್ದಾರೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಬಿ.ವಿ.ಗೌಡ ಆರೋಪಿಸಿದರು.

ಪಟ್ಟಣದಲ್ಲಿ ತುಂಗಭದ್ರಾ ನದಿಗೆ ಬಾಗಿನ ಅರ್ಪಿಸಿ ಗುರುವಾರ ಮಾತನಾಡಿದರು. ಕೃಷಿಗೆ ಸಕ್ರಮವಾಗಿ ನೀರೊದಗಿಸಲು ರಾಜ್ಯದ ಇಂಜಿನಿಯರ್‌ಗಳು ಭಯಪಡುತ್ತಿದ್ದಾರೆ. ಆದರೆ, ಆಂಧ್ರ ಪ್ರದೇಶದ ಇಂಜಿನಿಯರ್‌ಗಳು ನೀರಿನ ಸದ್ಬಳಕೆ ಮಾಡುವಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದರು.

ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ಎರಡನೇ ಬೆಳೆಗೆ ನೀರಿಲ್ಲ ಎಂದು ತುಂಗಭದ್ರಾ ಜಲಾಶಯದ ಅಧಿಕಾರಿಗಳು ಹೇಳುತ್ತಿರುವುದು ಸರಿಯಲ್ಲ. ನವೆಂಬರ್‌ನಲ್ಲಿ ಎರಡನೇ ಬೆಳೆಗೆ ನೀರಿನ ಲಭ್ಯತೆ ತಿಳಿಯುತ್ತದೆ. ರಾಜ್ಯದ ರೈತರ ಹಿತ ಕಾಯುವಲ್ಲಿ ಕರ್ನಾಟಕದ ಅಧಿಕಾರಿಗಳು, ಇಂಜಿನಿಯರ್‌ಗಳು ಮುಂದಾಗಬೇಕು. ನೀರಾವರಿ ಸಲಹಾ ಸಮಿತಿ ಸಭೆ ಮುನಿರಾಬಾದಿನಲ್ಲೇ ನಡೆಸಬೇಕು ಎಂದು ಬಿ.ವಿ.ಗೌಡ ಒತ್ತಾಯಿಸಿದರು.

ತಾಲೂಕು ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ ಮಾತನಾಡಿ, ನದಿ ಮೂಲಕ 20 ಟಿಎಂಸಿ ನೀರು ವ್ಯರ್ಥವಾಗಿ ಹೋಗಿದ್ದು, ಕಾಲುವೆಗಳಿಗೆ ಮೊದಲೇ ನೀರು ಹರಿಸಬೇಕಿತ್ತು. ಇದರಿಂದ ರೈತರಿಗೆ ಅನುಕೂಲವಾಗತ್ತಿತ್ತು ಎಂದರು.

ರೈತ ಸಂಘದ ತಾಲೂಕು ಕಾರ್ಯಾಧ್ಯಕ್ಷ ಕೊಟ್ಟೂರು ರಮೇಶ, ಅಧ್ಯಕ್ಷರಾದ ವಿ.ವೀರೇಶ, ಡಿ.ಮುರಾರಿ, ನಗರ ಘಟಕದ ಅಧ್ಯಕ್ಷ ತಿಮ್ಮಪ್ಪನಾಯಕ, ಪ್ರಮುಖರಾದ ವಾಲಿ ಕೊಟ್ರಪ್ಪ, ಗಂಗಣ್ಣ, ಬಿ.ನಾರಾಯಣಪ್ಪ, ಕುರಿ ಮಂಜುನಾಥ, ತೌಸಿಫ್‌ಅಲಿ, ಬಿಂಗಿ ಬಸವರಾಜ, ಯಮನೂರಪ್ಪ, ಡಾ.ಜಗನ್ನಾಥ ಹಿರೇಮಠ, ಅಕ್ಕನ ಬಳಗದ ಅಧ್ಯಕ್ಷೆ ಮುಕ್ಕುಂದಿ ಶಿವಗಂಗಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net