ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ

24CBP3 (1)
Published on

ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಜನರು ಸಮರ್ಪಕವಾಗಿ ಮುಂಜಾಗ್ರತಾ ಕ್ರಮಗಳನ್ನು ಪಾಲಿಸದಿರುವುದೇ ಹೆಚ್ಚು ಕರೊನಾ ಪ್ರಕರಣಗಳು ದಾಖಲಾಗಲು ಪ್ರಮುಖ ಕಾರಣ ಎಂದು ಜಿಲ್ಲಾಧಿಕಾರಿ ಆರ್.ಲತಾ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕರೊನಾ ನಿಯಂತ್ರಣದ ಸಲುವಾಗಿ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಹೋಟಲ್, ರಸ್ತೆ ಬದಿಯ ಆಂಗಡಿ ಸೇರಿ ವಿವಿಧೆಡೆ ಬಹುತೇಕರು ಮಾಸ್ಕ್ ಧರಿಸುತ್ತಿಲ್ಲ. ಸಾಮಾಜಿಕ ಅಂತರ ಮತ್ತು ಸುತ್ತಲಿನ ಸ್ವಚ್ಛತೆ ಕಾಪಾಡುತ್ತಿಲ್ಲ. ಇದಕ್ಕೆ ಮೊದಲು ಕಡಿವಾಣ ಹಾಕಬೇಕು. ನಿಯಮ ಉಲ್ಲಂಘಿಸುವವರಿಗೆ ನಿರ್ದಾಕ್ಷಿಣ್ಯವಾಗಿ ದಂಡ ವಿಧಿಸುವುದರ ಜತೆಗೆ ಅರಿವು ಮೂಡಿಸಬೇಕು ಎಂದರು. ಮೊದಲು ನಗರ ಪಟ್ಟಣ ಪ್ರದೇಶಗಳಿಗೆ ಮಾತ್ರ ಸೋಂಕು ಸೀಮಿತವಾಗುತ್ತಿತ್ತು. ಇದೀಗ ಹಳ್ಳಿಗಳಲ್ಲೂ ಕಾಣಿಸಿಕೊಳ್ಳುತ್ತಿದೆ. ಆಯಾ ಗ್ರಾಪಂ ಪಿಡಿಒಗಳು ಎಚ್ಚರಿಕೆ ವಹಿಸಬೇಕು. ಕಾಲ ಕಾಲಕ್ಕೆ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಬೇಕು. ಹಾಗೆಯೇ ಕರೊನಾ ನಿಯಂತ್ರಣದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಮಾತಾನಾಡಿ, ಕರೊನಾ ಎಲ್ಲಿ?ಯಾವಾಗ? ಯಾರಿಗೆ ಬರುತ್ತದೆ ಎಂಬುದನ್ನು ನಿಖರವಾಗಿ ಹೇಳುವುದಕ್ಕೆ ಆಗುತ್ತಿಲ್ಲ. ಇದಕ್ಕೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕು.

ಸಂಕಷ್ಟದ ಸಂದರ್ಭದಲ್ಲಿ ಹೆಚ್ಚಿನ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಆರೋಗ್ಯದ ಕಡೆಗೆ ಗಮನಹರಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಇದರ ಬಗ್ಗೆ ಜನರಿಗೆ ತಿಳಿಸಬೇಕು ಎಂದರು. ಜಿಪಂ ಸಿಇಒ ಬಿ.ೌಜಿಯಾ ತರನ್ನುಮ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಭಾಸ್ಕರ್, ತಹಸೀಲ್ದಾರ್ ನಾಗಪ್ರಶಾಂತ್, ಪೌರಾಯುಕ್ತ ಲೋಹಿತ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net