ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಿ

24 HBD 3
ಚಿಟಗುಪ್ಪ ತಾಲೂಕಿನ ಕರಕನಳ್ಳಿ ಗ್ರಾಮದಲ್ಲಿ ಮಂಗಳವಾರ ಕರೆದಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿದರು. ತಹಸೀಲ್ದಾರ್ ಮಂಜುನಾಥ ಪಂಚಾಳ, ತಾಪಂ ಇಒ ಲಕ್ಷ್ಮೀ ಬಿರಾದಾರ, ಆಡಳಿತಾಧಿಕಾರಿ ಬಳಿರಾಮ, ಸಿಪಿಐ ಶ್ರೀನಿವಾಸ ಅಲ್ಲಾಪುರೆ ಇದ್ದರು.
Published on

ಚಿಟಗುಪ್ಪ: ಸಂಪೂರ್ಣ ಹಳ್ಳಿಗಳಿಂದ ಕೂಡಿರುವ ಬೀದರ್ ದಕ್ಷಿಣ ಕ್ಷೇತ್ರದಲ್ಲಿ ರಸ್ತೆ, ಶಾಲಾ ಕೋಣೆ, ಆರೋಗ್ಯ ಸೇವೆ ಸೇರಿ ನಾನಾ ಮೂಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ವಿವಿಧ ಯೋಜನೆಯಡಿ ಅನುದಾನ ತರಲಾಗುತ್ತಿದ್ದು, ಅಧಿಕಾರಿಗಳು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳದೆ ತಮಗೆ ವಹಿಸಿದ ಕೆಲಸಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಖಡಕ ಎಚ್ಚರಿಕೆ ನೀಡಿದರು.

ಕರಕನಳ್ಳಿ ಗ್ರಾಮದ ಶ್ರೀ ಬಕ್ಕಾ ಪ್ರಭು ದೇವಸ್ಥಾನದಲ್ಲಿ ಮಂಗಳವಾರ ತಮ್ಮ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ವಿಶೇಷ ಕಾಳಜಿಯೊಂದಿಗೆ ತ್ವರಿತಗತಿ ಅಭಿವೃದ್ಧಿ ಕಾರ್ಯ ಮುಗಿಸುವುದರ ಜತೆಗೆ ಸಾರ್ಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ವಹಿಸುವವುದು ಸಹಿಸುವುದಿಲ್ಲ . ಮನ್ನಾಎಖ್ಖೇಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆಗಾಗಿ ಹಲವು ಗಂಟೆಗಳ ಕಾಲ ಕಾಯುವ ಪರಿಸ್ಥಿತಿ ಉಂಟಾಗಿದೆ ಎಂಬ ಆರೋಪಗಳು ಸಾಕಷ್ಟು ಕೇಳಿ ಬರುತ್ತಿವೆ. ಇಂತಹ ಸಮಯದಲ್ಲಿ ದುಃಖದಲ್ಲಿರುವ ಜನರಿಗೆ ಕಾಯಿಸುವುದು ಸರಿಯಲ್ಲ. ಮಾನವೀಯತೆ ಮುಖ್ಯವಾಗಿದೆ. ಅಲ್ಲಿ ಸಮಸ್ಯೆಯಾಗದಂತೆ ಕ್ರಮ ವಹಿಸಿಸಲು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.

ಗರ್ಭಿಣಿಯರಿಗೆ ಅಂಗನವಾಡಿ ಮತ್ತು ಆರೋಗ್ಯ ಇಲಾಖೆಯವರು ಅವರಿಗೆ ಅಗತ್ಯ ಸೇವೆಗಳನ್ನು ಚಿಕಿತ್ಸೆಗಳನ್ನು ನೀಡುವ ಮೂಲಕ ಹೆರಿಗೆ ಸಮಯದಲ್ಲಿ ತಾಯಿ ಹಾಗೂ ಮಗುವಿಗೆ ತೊಂದರೆಯಾಗದಂತೆ ಅಗತ್ಯ ನಿಗಾವಹಿಸಬೇಕು ಎಂದು ತಿಳಿಸಿದರು.

ಜನನಿಬಿಡ ಪ್ರದೇಶಗಳಲ್ಲಿರುವ ಅನಕೃತ ಅಂಗಡಿಗಳನ್ನು ಸ್ಥಳಾಂತರಿಸಬೇಕು. ಮಾಂಸದಂಗಡಿಯವರು ಸ್ವಚ್ಛತೆ ಮತಿತ್ತರ ಕಾಳಜಿ ವಹಿಸಬೇಕು. ಗೋವುಗಳನ್ನು ಗೋಮಾತೆ ಎಂದು ಪೂಜಿಸುತ್ತೇವೆ. ಗೋಹತ್ಯೆ ನಿಷೇಧ ಕಾಯಿದೆ ಇರುವುದರಿಂದ ಗೋವುಗಳ ರಕ್ಷಣೆಯಾಗಬೇಕು. ಇವುಗಳಿಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕೆಂದು ತಾಕೀತು ಮಾಡಿದರು.

ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳು ಪ್ರತಿ ಗ್ರಾಮಗಳಲ್ಲಿ ರೈತರೊಂದಿಗೆ ಸಂವಾದ ನಡೆಸಿ, ಉತ್ತಮ ಇಳುವರಿ, ಆದಾಯ ಬರುವ ನಿಟ್ಟಿನಲ್ಲಿ ಸೂಕ್ತ ಮಾಹಿತಿ ಒದಗಿಸಬೇಕು. ರೈತರಿಗೆ ಬೀಜ ಮತ್ತು ಗೊಬ್ಬರ ಕೊರತೆಯಾಗದಂತೆ ಕ್ರಮ ವಹಿಸಲು ತಿಳಿಸಿದರು.

ಮನ್ನಾಎಖೇಳ್ಳಿ ಸೇರಿ ತಾಲೂಕಿನ ಹಲವೆಡೆ ಜೆಜೆಎಂ ಕಾಮಗಾರಿಯ ಗುತ್ತಿಗೆದಾರರು ನಿಷ್ಕಾಳಜಿತನ ತೋರುತ್ತಿದ್ದಾರೆ. ಸಿಸಿ ರಸ್ತೆ ಅಗೆದು ಅರ್ಧಂಬರ್ಧ ಮುಚ್ಚುತ್ತಿರುವುದರಿಂದ ರಸ್ತೆಗಳಲ್ಲಿ ತಗ್ಗು ಬಿದ್ದು ಜನರಿಗೆ ತೊಂದರೆಯಾಗುತ್ತಿದೆ. ಸರಿಯಾಗಿ ಕೆಲಸ ಮಾಡದೆ ಹೋದರೆ ಅಂತಹವರ ಬಿಲ್​ ನೀಡಲಾಗುವುದಿಲ್ಲ ಈ ಬಗ್ಗೆ ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಹಸೀಲ್ದಾರ್ ಮಂಜುನಾಥ ಪಂಚಾಳ, ತಾಪಂ ಇಒ ಲಕ್ಷ್ಮೀ ಬಿರಾದಾರ, ಆಡಳಿತಾಧಿಕಾರಿ ಬಳಿರಾಮ, ಸಿಪಿಐ ಶ್ರೀನಿವಾಸ ಅಲ್ಲಾಪುರೆ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಗೂಡಾಳ, ಟಿಎಚ್‌ಒ ಡಾ. ಶಿವಕುಮಾರ ಸಿದ್ದೇಶ್ವರ, ಸಮಾಜ ಕಲ್ಯಾಣ ಅಧಿಕಾರಿ ನಿಂಗರಾಜ್ ಅರಸ ಹಾಗೂ ತಾಲೂಕು ಮಟ್ಟದ ಅನುಷ್ಠಾನಾಕಾರಿಗಳು, ಪಿಡಿಒ ಪಾಲ್ಗೊಂಡಿದ್ದರು.

ಜನರ ಕುಂದುಕೊರತೆ ಆಲಿಕೆ: ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಸಭೆ ಬಳಿಕ ಸ್ಥಳದಲ್ಲಿಯೇ ಅಧಿಕಾರಿಗಳ ಸಮ್ಮುಖದಲ್ಲಿ ಕ್ಷೇತ್ರದ ಜನರ ಕುಂದುಕೊರತೆ ಆಲಿಸಿ ಬಗೆ ಹರಿಸುವ ಪ್ರಯತ್ನ ನಡೆಸಿದರು. ತಮ್ಮ ಸಮಸ್ಯೆಗಳನ್ನು ಹೊತ್ತು ತಂದ ಜನರೊಂದಿಗೆ ಚರ್ಚಿಸಿ ಪಿಂಚಣಿ, ರಸ್ತೆ, ವಿದ್ಯುತ್, ಹೊಲದ ಸಮಸ್ಯೆಯಂತಹ ಸಣ್ಣಪುಟ್ಟ ಸಮಸ್ಯೆಗಳನ್ನು ಸ್ಥಳದಲ್ಲಿ ಪರಿಹರಿಸಿದರು. ಉಳಿದ ಸಮಸ್ಯೆಗಳಿಗೆ ಸ್ಥಳದಲ್ಲಿದ್ದ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸೂಚನಾ ಫಲಕ ಹಾಕಿ ಮತ್ತು ಡಂಗೂರ ಸಾರುವ ಮೂಲಕ ಕೃಷಿ, ತೊಟಗಾರಿಕೆ ಸೇರಿ ಎಲ್ಲ ಇಲಾಖೆಗಳು ತಮ್ಮ ಯೋಜನೆಗಳ ಸಮಗ್ರ ಮಾಹಿತಿ ಎಲ್ಲರಿಗೂ ತಲುಪುವಂತೆ ಮಾಡಬೇಕು.

| ಡಾ.ಶೈಲೇಂದ್ರ ಬೆಲ್ದಾಳೆ

ಶಾಸಕ, ಬೀದರ್ ದಕ್ಷಿಣ ಕ್ಷೇತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net