

ಮುಳಬಾಗಿಲು: ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಬೇಕೆಂದರೆ ಅಧಿಕಾರಿಗಳು ಜನರ ಮನೆ ಬಾಗಿಲಿಗೆ ತೆರಳಿ ಅವರ ಸಮಸ್ಯೆ ಪರಿಹರಿಸಿದಾಗ ಉತ್ತಮ ಸೇವೆ ಸಿಗಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ಗ್ರಾಮವಾಸ್ತವ್ಯದ ಪರಿಕಲ್ಪನೆಗೆ ಯಶಸ್ಸು ಸಿಗುತ್ತದೆ ಎಂದು ಶಾಸಕ ಎಚ್.ನಾಗೇಶ್ ತಿಳಿಸಿದರು.
ತಾಲೂಕಿನ ಗುಡಿಪಲ್ಲಿ ಗ್ರಾಪಂ ವ್ಯಾಪ್ತಿಯ ನಾಗೇನಹಳ್ಳಿಯಲ್ಲಿ ಕಂದಾಯ ಇಲಾಖೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಗ್ರಾಮವಾಸ್ತವ್ಯ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಜನರ ಸಮಸ್ಯೆ ಹಾಗೂ ಕುಂದುಕೊರತೆಗಳು ಬಗೆಹರಿಸುವ ಸಲುವಾಗಿ ಗ್ರಾಮವಾಸ್ತವ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಅಧಿಕಾರಿಗಳು ಜನರ ಸೇವೆಯನ್ನು ಮಾಡಲು ಮುಂದಾಗಬೇಕೆಂದು ಹೇಳಿದರು.
ಕೃಷಿಕವರ್ಗ, ಕೂಲಿ ಕಾರ್ಮಿಕರು, ವಿದ್ಯಾರ್ಥಿ ಸೇರಿ ಎಲ್ಲರಿಗೂ ಕಂದಾಯ ಮತ್ತು ತಾಲೂಕು ಕಚೇರಿಯ ಸೌಲಭ್ಯಗಳನ್ನು ತಲುಪಿಸುವ ಯೋಜನೆಯನ್ನು ಜಾರಿಗೆ ತಂದಿದ್ದು, ಇದನ್ನು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಲು ಮುಂದಾಗಬೇಕೆಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ಜಿಲ್ಲೆಯ ಆಡಳಿತ ನಿಮ್ಮ ಹಳ್ಳಿಯಲ್ಲಿ ವಾಸ್ತವ್ಯವಿದೆ. ನಿಮ್ಮ ಸಮಸ್ಯೆಗಳು ಏನೇ ಇರಲಿ ಅರ್ಜಿ ಸಲ್ಲಿಸುವ ಮೂಲಕ ಅದನ್ನು ಶ್ರೀದಲ್ಲಿ ಪರಿಹರಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ನಿಮ್ಮ ಗ್ರಾಮವನ್ನು ಅಭಿವೃದ್ಧಿ ಪಡಿಸಲು ನೀವು ಕೋರಿರುವ ಎಲ್ಲ ಸಮಸ್ಯೆಗಳನ್ನು ಗುರುತಿಸಿದ್ದೇವೆ. ಗ್ರಾಮದಲ್ಲಿ ಒಂದು ಶುದ್ಧ ಕುಡಿಯುವ ನೀರಿನ ಟಕ, ಗ್ರಾಮಸ್ಥರು ಹಾಗೂ ಶಾಲಾ&ಕಾಲೇಜು ವಿದ್ಯಾರ್ಥಿಗಳು ಓಡಾಡಲು ಡಾಂಬರೀಕರಣದ ರಸ್ತೆ, ಗ್ರಾಮಕ್ಕೆ ನಿರಂತರ ಜ್ಯೋತಿ ಅಡಿಯಲ್ಲಿ ವಿದ್ಯುತ್ ಸರಬರಾಜು ಮುಂತಾದ ಗ್ರಾಮದ ಸಮಸ್ಯೆಗಳನ್ನು ಬಗೆಹರಿಸಲು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಎಲ್ಲಾ ಗ್ರಾಮಸ್ಥರು ನೀರನ್ನು ಮಿತವಾಗಿ ಬಳಕೆ ಮಾಡಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ ಹಾಗೂ ಯಾವುದೇ ಮಗುವು ಶಿಕ್ಷಣದಿಂದ ದೂರ ಉಳಿಯಬಾರದು ಇದರ ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿಸಲು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.
ತಹಸೀಲ್ದಾರ್ ಆರ್.ಶೋಭಿತಾ ಮಾತನಾಡಿ, ಕಳೆದ ಒಂದು ವಾರದಿಂದ ಗ್ರಾಮಸ್ಥರೊಂದಿಗೆ ಚರ್ಚೆ ಮಾಡಿ ಅವರ ಕುಂದುಕೊರತೆಗಳನ್ನು ಗುರಿತಿಸಿ ಕೆಲವು ಬಗೆಹರಿಸಿದ್ದು, ಮುಂದಿನ ದಿನಗಳಲ್ಲಿ ಉಳಿದ ಎಲ್ಲವನ್ನೂ ಪರಿಹರಿಸಲಾಗುವುದು. ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಹಿಂದುಳಿದ ಹಾಗೂ ಗಡಿಯಲ್ಲಿರುವ ಹಳ್ಳಿಗಳನ್ನು ಆಯ್ಕೆ ಮಾಡಿಕೊಂಡು ಇಡೀ ದಿನ ಹಳ್ಳಿಯಲ್ಲಿ ವಾಸ್ತವ್ಯ ವಹಿಸಿ ಗ್ರಾಮದಲ್ಲಿ ಇರುವಂತಹ ಸಮಸ್ಯೆಗಳನ್ನು ಬಗೆಹರಿಸುವುದು ಇದರ ಉದ್ದೇಶ. ಗ್ರಾಮವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿಸಲಾಯಿತು ಎಂದು ತಿಳಿಸಿದರು.
ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಇಲಾಖೆಗಳಲ್ಲಿ ಏನೆಲ್ಲ ಸೌಲಭ್ಯಗಳು ಸಿಗುತ್ತದೆ ಎಂಬುದನ್ನು ಗ್ರಾಮಸ್ಥರಿಗೆ ವಿವರವಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗ್ಯಲ್ಮ ಬಾಂಡ್, ವೃದ್ದಾಪ್ಯ ವೇತನ, ವಿಧವಾ ಪಿಂಚಣಿ ಹಾಗೂ ಆಯುಷ್ಮಾನ್ ಭಾರತ್ ಕಾರ್ಡ್ಗಳನ್ನು ಗ್ರಾಮದ ಫಲಾನುಭವಿಗಳಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಸ್ಥಳದಲ್ಲೇ ವಿತರಿಸಲಾಯಿತು.
ಅಪರ ಜಿಲ್ಲಾಧಿಕಾರಿ ಸ್ನೇಹಾ, ತಾಪಂ ಇಒ ಡಾ.ಸರ್ವೇಶ್, ಜಿಲ್ಲಾ ಅಂಧತ್ವಾಧಿಕಾರಿ ನಾರಾಯಣಸ್ವಾಮಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಸೋಮಶಂಕರಪ್ಪ, ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ.ವರ್ಣಶ್ರೀ, ಗುಡಿಪಲ್ಲಿ ಗ್ರಾಪಂ ಅಧ್ಯಕ್ಷ ಲ್ಮ ಮಂಜುನಾಥ್, ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಪಂ ಅಧ್ಯಕ್ಷ ಇತರರಿದ್ದರು.