

ಹಿರೀಸಾವೆ: ಜನರನ್ನು ಕಚೇರಿಗೆ ಅಲೆದಾಡಿಸುವ ಬದಲು ಕಾನೂನು ರೀತಿಯಲ್ಲಿ ಸರಿಯಾದ ಸಮಯಕ್ಕೆ ಕೆಲಸವನ್ನು ಅಧಿಕಾರಿಗಳು ಮಾಡಿಕೊಟ್ಟರೆ ಜನರು ನಿಮ್ಮನ್ನು ಸ್ಮರಿಸುತ್ತಾರೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಪಟ್ಟಣದ ನಾಡಕಚೇರಿ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಕಂದಾಯ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಧಿಕಾರಿಗಳ ಬಳಿ ಜನತೆ ಬಂದಾಗ ನೆಪಗಳನ್ನು ಹೇಳಿ ಅಲೆದಾಡಿಸುವುದು ಸರಿಯಲ್ಲ ಎಂದರು.
ತಾಲೂಕಿನ ಪ್ರತಿ ಹೋಬಳಿಯಲ್ಲಿ ಕಂದಾಯ ಅದಾಲತ್ ಕಾರ್ಯಕ್ರಮವನ್ನು ಏರ್ಪಡಿಸಿ, ಭೂಮಿ ದಾಖಲೆಗಳ ಸಮಸ್ಯೆ ಬಗೆಹರಿಸಲಾಗುತ್ತಿದೆ. ಜಮೀನು ಅಳತೆ ಮಾಡುವ ಬಗ್ಗೆ ಹೆಚ್ಚು ದೂರುಗಳು ಕೇಳಿಬರುತಿದ್ದವು. ಆ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ, ಜರೂರಾಗಿ ರೈತರ ಭೂಮಿಯನ್ನು ಅಳತೆ ಮಾಡಿಕೊಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ತಹಸೀಲ್ದಾರ್ ಸಿ.ಜೆ.ಗೀತಾ ಮಾತನಾಡಿ, ಕೆಲವು ಸಲ ಸುಳ್ಳು ದಾಖಲೆಗಳನ್ನು ನೀಡಿ ಬೇರೆಯವರ ಹೆಸರಿಗೆ ನಿಮ್ಮ ಜಮೀನನ್ನು ಖಾತೆ ಮಾಡಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಆರು ತಿಂಗಳಿಗೊಮ್ಮೆ ಪರಿಶೀಲನೆ ಮಾಡಿಕೊಳ್ಳಬೇಕು ಎಂದು ಎಚ್ಚರಿಸಿದರು.
ನಿಮ್ಮ ದಾಖಲೆಗಳಿಗೆ ನೀವೇ ಜವಾಬ್ದಾರರು. ಕಂದಾಯ ಅದಾಲತ್‌ನಲ್ಲಿ ಮುಂದಿನ ಡಿಸೆಂಬರ್‌ವರೆಗೆ ತಹಸೀಲ್ದಾರರು ಪಹಣಿ ತಿದ್ದುಪಡಿ ಮಾಡುವ ಅಧಿಕಾರವನ್ನು ಸರ್ಕಾರ ನೀಡಿದೆ. ತಾಲೂಕಿನ ಜನರು ಪಹಣಿ ತಿದ್ದುಪಡಿ ಮಾಡಿಸಿಕೊಳ್ಳಬೇಕು ಎಂದು ಸೂಚಿಸಿದರು.
ಸರ್ಕಾರದ ವಿವಿಧ ಯೋಜನೆಯಲ್ಲಿ ಪಿಂಚಣಿ ಪಡೆಯಲು, ತಾಲೂಕು ಕಚೇರಿಗೆ ತಿಂಗಳ 3ನೇ ಶನಿವಾರ ಅಗತ್ಯ ದಾಖಲೆಗಳನ್ನು ನೀಡಿದರೆ ಪಿಂಚಣಿ ಮಂಜೂರಾತಿ ಪತ್ರವನ್ನು ನೀಡಲಾಗುವುದು ಎಂದರು.
ಎಡಿಎಲ್‌ಆರ್ ಲಾಲು ಪ್ರಸಾದ್, ಎಸ್‌ಐ ಸುಪ್ರಿತ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಬೋರಣ್ಣ, ಉಪತಹಸೀಲ್ದಾರ್ ತೇಜಸ್ವಿನಿ, ಆರ್‌ಐ ಯೋಗೇಶ್, ಪಿಎಸಿಸಿಬಿ ಅಧ್ಯಕ್ಷ ಶ್ರೀನಾಥಬಾಬು, ಮುಖಂಡರಾದ ರಾಮಕೃಷ್ಣ, ರವಿಕುಮಾರ್, ಮಂಜುನಾಥ್, ಬೋರೇಗೌಡ, ಹೊನ್ನೇನಹಳ್ಳಿ, ಬಾಬು, ಲೋಕೇಶ್, ಪಿಡಿಒ ಸತೀಶ್ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಇದ್ದರು.