ಅಧಿಕಾರಿಗಳು ಕಾಲಹರಣ ಮಾಡಿದರೆ ಸಹಿಸಲ್ಲ, ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಗರಂ

Health Minister Meeting 18.08 (5)
Published on

ಬೆಂಗಳೂರು ಗ್ರಾಮಾಂತರ: ವೈದ್ಯಕೀಯ ಸಿಬ್ಬಂದಿ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಕರೊನಾ ಸಂದರ್ಭದಲ್ಲಿ ನಿರೀಕ್ಷೆಗೂ ಮೀರಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಕೆಲ ಅಧಿಕಾರಿಗಳು ಕರ್ತವ್ಯದ ನೆಪದಲ್ಲಿ ಕಾಲಹರಣ ಮಾಡುತ್ತಿರುವ ದೂರು ಬಂದಿದ್ದು, ಅದನ್ನು ಸಹಿಸಲ್ಲ, ಅಂಥವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಸಚಿವ ಡಾ. ಕೆ.ಸುಧಾಕರ್ ಎಚ್ಚರಿಕೆ ನೀಡಿದರು.

ದೇವನಹಳ್ಳಿ ತಾಲೂಕು ಜಿಪಂ ಸಭಾಂಗಣದಲ್ಲಿ ಬುಧವಾರ ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಕೋವಿಡ್ ನಿರ್ವಹಣೆ ಸಮರ್ಪಕ ಮಾಹಿತಿ ನೀಡಲು ತಡವರಿಸಿದ ಜಿಲ್ಲಾ ವೈದ್ಯಾಧಿಕಾರಿ ತಿಪ್ಪೇಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಈ ರೀತಿ ಉದಾಸೀನ ಧೋರಣೆ ಅನುಸರಿಸಿದರೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕರೊನಾ ನಿಯಂತ್ರಣಕ್ಕೆ ಅಧಿಕಾರಿಗಳು ತಂಡವಾಗಿ ಕರ್ತವ್ಯ ನಿರ್ವಹಿಸಬೇಕು. ಜಿಲ್ಲೆಯಲ್ಲಿ ನಿಗದಿಪಡಿಸಿರುವಂತೆ ಕರೊನಾ ಪರೀಕ್ಷೆ ನಡೆಸಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಿದರೆ ಸೋಂಕು ನಿಯಂತ್ರಣ ಕಷ್ಟ. ರಾಷ್ಟ್ರೀಯ ವಿಪತ್ತಿನ ಸಮಯದಲ್ಲಿ ಅಧಿಕಾರಿಗಳು ಮೈಮರೆಯಬಾರದು ಎಂದರು.

ರಾಜ್ಯ ತಾಂತ್ರಿಕ ಸಲಹಾ ಸಮಿತಿ ಸಲಹೆಯಂತೆ ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆ ಹಾಗೂ ಲಸಿಕಾಕರಣ ಹೆಚ್ಚಿಸುವ ಮೂಲಕ ಮೂರನೇ ಅಲೆ ತಡೆಗೆ ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕು, ಸೋಂಕು ದೃಢಪಟ್ಟ ವ್ಯಕ್ತಿಗಳ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪರೀಕ್ಷೆಗೆ ಒಳಪಡಿಸಿ ಸೋಂಕು ಉಲ್ಬಣಗೊಳ್ಳದಂತೆ ತಡೆಯಬೇಕು ಎಂದರು.

ಮಕ್ಕಳಿಗೆ ಆರೋಗ್ಯ ನಂದನ: ರಾಜ್ಯದಲ್ಲಿ ಶೀಘ್ರವೇ ಮಕ್ಕಳಿಗಾಗಿ ಆರೋಗ್ಯ ನಂದನ ಎಂಬ ವಿಶೇಷ ಆರೋಗ್ಯ ಯೋಜನೆಯನ್ನು ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದು, ಅಪೌಷ್ಟಿಕತೆ, ರಕ್ತಹೀನತೆ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗೆ ವಿಶೇಷ ಆರೈಕೆ, ಕಾಳಜಿ ಹಾಗೂ ಚಿಕಿತ್ಸೆ ನೀಡುವ ಮೂಲಕ ಕೋವಿಡ್ ಮೂರನೇ ಅಲೆ ಪರಿಣಾಮ ಬೀರದಂತೆ ತಡೆಯುವ ವ್ಯವಸ್ಥೆ ಜಾರಿಗೆ ಬರಲಿದೆ ಸುಧಾಕರ್ ತಿಳಿಸಿದರು.

ಜಿಲ್ಲಾಸ್ಪತ್ರೆ ಮಂಜೂರು: ಸಿಎಂ ಜತೆ ಚರ್ಚಿಸಿ ಜಿಲ್ಲೆಗೆ ಜಿಲ್ಲಾ ಆಸ್ಪತ್ರೆ ಮಂಜೂರು ಮಾಡಿಸಲಾಗುವುದು. ಅಲ್ಲದೇ ಹೊಸಕೋಟೆ ತಾಲೂಕಿಗೆ ತಾಯಿ ಮತ್ತು ಮಗುವಿನ ಆಸ್ಪತ್ರೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು, ಪ್ರತಿ ತಾಲೂಕಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಗತ್ಯ ಮೂಲಸೌಕರ್ಯ ಕಲ್ಪಿಸಿ, ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ಆರೋಗ್ಯ ಸಚಿವರು ಭರವಸೆ ನೀಡಿದರು.

ಲಸಿಕೆಗೆ ಎಂಟಿಬಿ ಬೇಡಿಕೆ: ಆರಂಭದಲ್ಲಿ ಪ್ರತಿಪಕ್ಷಗಳು ಸೇರಿ ಕೆಲವರು ಹಬ್ಬಿಸಿದ ವದಂತಿಗಳಿಂದ ಕೋವಿಡ್ ಲಸಿಕೆ ಪಡೆಯಲು ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದರು. ಪ್ರಸ್ತುತ ಪರಿಸ್ಥಿತಿ ಬದಲಾಗಿದೆ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಲಸಿಕೆ ಪಡೆಯಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲೆಗೆ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಪೂರೈಕೆಗೆ ಕ್ರಮಕೈಗೊಳ್ಳಬೇಕು ಎಂದು ಪೌರಾಡಳಿತ ಮತ್ತು ಸಣ್ಣಕೈಗಾರಿಕೆ ಖಾತೆ ಸಚಿವ ಎಂಟಿಬಿ ನಾಗರಾಜ್ ಆರೋಗ್ಯ ಸಚಿವ ಸುಧಾಕರ್‌ಗೆ ಮನವಿ ಮಾಡಿದರು.

ಕಾದು ಸುಸ್ತಾದ ಅಧಿಕಾರಿಗಳು: ಬುಧವಾರ ಬೆಳಗ್ಗೆ 10.45ಕ್ಕೆ ನಿಗದಿಯಾಗಿದ್ದ ಸಭೆಗೆ ಸಚಿವ ಸುಧಾಕರ್ ಎರಡು ಗಂಟೆ ತಡವಾಗಿ ಆಗಮಿಸಿದರು. ಬೆಳಗ್ಗೆಯಿಂದಲೇ ಸಚಿವರ ಅಗಮನ ಎದುರು ನೋಡುತ್ತಿದ್ದ ಅಧಿಕಾರಿಗಳು ಕಾದು ಸುಸ್ತಾದರು, ಈಗ ಬರುತ್ತಾರೆ, ಇನ್ನೇನು ಬಂದೇ ಬಿಟ್ಟರು ಎಂಬ ಉತ್ತರಗಳನ್ನು ಕೇಳಿ ಸಾಕಾದ ಅಧಿಕಾರಿಗಳು ಮನದಲ್ಲೇ ಗೊಣಗಾಟ ಶುರುವಿಟ್ಟುಕೊಂಡರು, ತಡವಾಗಿ ಬಂದ ಸಚಿವರು ತರಾತುರಿಯಲ್ಲೇ ಸಭೆ ನಡೆಸಿ ಹೊರಟು ನಿಂತಿದ್ದರಿಂದ ಅಧಿಕಾರಿಗಳು ಬೇಸರದಿಂದಲೇ ಕಚೇರಿಗಳತ್ತ ಹೆಜ್ಜೆ ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net