

ಆಲೂರು:- ಹೇಮಾವತಿ ಜಲಾಶಯ ಸಂತಸ್ತರ ಹೋರಾಟ ಸಮಿತಿ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸ್ಥಳಕ್ಕೆ ಲೇಟಾಗಿ ಬಂದದಲ್ಲದೆ, ನಿರಾಸಕ್ತಿ ತೋರಿದ ತಹಸೀಲ್ದಾರ್ ಮೇಘನಾ ಜಿ.ವಿರುದ್ಧ ದಿಕ್ಕಾರ ಕೂಗಿ ಹೊರಗೆ ಬರದಂತೆ ದಿಕ್ಬಂಧನ ಹಾಕಿದ ಘಟನೆ ತಾಲ್ಲೂಕಿನಲ್ಲಿ ನಡೆದಿದೆ.
ಆಲೂರು ಪಟ್ಟಣದ ವೀರಶೈವ ಕಲ್ಯಾಣ ಮಂಟಪದಿಂದ ಹೋರಾಟ ಪ್ರತಿಭಟನಾರ್ಯಾಲಿ ತಾಲ್ಲೂಕು ಕಚೇರಿಯ ಆವರಣಕ್ಕೆ ಬೆಳಗ್ಗೆ 11 ಗಂಟೆಗೆ ಬಂದು ಸೇರಿ ಪ್ರತಿಭಟನಾ ಹೋರಾಟ ಪ್ರಾರಂಭವಾಯಿತು.
ಹೇಮಾವತಿ ಜಲಾಶಯ ಸಂತಸ್ತರ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷ ನಿವೃತ್ತ ವಿಶೇಷ ಜಿಲ್ಲಾಧಿಕಾರಿ ಕೃಷ್ಣರವರು ಮಾತನಾಡಿ, ಗೊರೂರು ಹೇಮಾವತಿ ಜಲಾಶಯ ಮುಳುಗಡೆಯಾಗಿ 50 ವರ್ಷ ಕಳೆದಿದ್ದರೂ ಸುಮಾರು 10 ಸಾವಿರ ಕುಟುಂಬಗಳು ಸುಮಾರು 50 ಸಾವಿರ ಜನರು ಜಮೀನು ದುರಸ್ಥಿ ಯಾಗದೆ ನೋವನ್ನು ಅನುಭವಿಸುತ್ತಿದ್ದಾರೆ. ಬ್ಯಾಬಪಾರೆಸ್ಟ್ ನ ಸರ್ವೆ ನಂ 1 ರಲ್ಲಿ 306 ಕುಟುಂಬಗಳ ಪೈಕಿ 59 ಜನರು ಮಾತ್ರ ಪೋಡಿ ಮಾಡಿಸಿದ್ದು, 247 ಕುಟುಂಬಗಳಿಗೆ ಇನ್ನೂ ಪೋಡಿಯಾಗಿಲ್ಲ. ಮಂಜೂರಾತಿ ಪಡೆದ ಬಹಳಷ್ಟು ರೈತರು ಸಾವನ್ನಪ್ಪಿದ್ದಾರೆ. ಮಣಿಪುರ, ಬ್ಯಾಬ, ಬ್ಯಾಬ ಫಾರೆಸ್ಟ್, ಧರ್ಮಪುರಿ, ಮಣಿಪುರ,ಬೈರಾಪುರ, ಸಿಂಗಾಪುರ,ಹಳುವಳ್ಳಿ, ಮಡಗೆರೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬದಲಿ ಜಮೀನು ಪಡೆದಿದ್ದ ಸಂತ್ರಸ್ತ ರೈತರಿಗೆ ಈವರೆಗೂ ಪೋಡಿ ದುರಸ್ಥಿ ಮಾಡದ ಕಾರಣ, ತಂದೆಯಿಂದ ಮಕ್ಕಳಿಗೆ ಖಾತೆ ಮಾಡಲು, ಸರ್ಕಾರಿ ಸೌಲಭ್ಯ ಪಡೆಯಲು, ದಾರಿ ಸಮಸ್ಯೆ ಸೇರಿದಂತೆ ನೂರಾರು ಸಮಸ್ಯೆಗಳಲ್ಲಿ ಸೋತಿರುವ ನಿರಾಶ್ರಿತ ರೈತರ ಭೂಮಿಯನ್ನು ಸರಿಪಡಿಸಲು ಅಧಿಕಾರಿಗಳು ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರುತ್ತಿರುವುದೆ ಮುಖ್ಯ ಕಾರಣ, ಬಸವೇಶ್ವರ ಗ್ರಾಮದಲ್ಲಿ 17-02-2022 “ಡಿ.ಸಿ. ನಡೆ ಹಳ್ಳಿ ಕಡೆ” ಕಾರ್ಯಕ್ರಮದಲ್ಲಿ ಈ ಬಗ್ಗೆ ಅರ್ಜಿ ಸಲ್ಲಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ ಎಂದ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೆಮ್ಮಿಗೆ ಮೋಹನ್ ಮಾತನಾಡಿ, ಹೇಮಾವತಿ ಜಲಾಶಯ ನಿರ್ಮಾಣಕ್ಕಾಗಿ ತಮ್ಮ ಭೂಮಿ, ಮನೆ, ಊರುಗಳನ್ನು ತ್ಯಾಗ ಮಾಡಿ, ಗೆಡ್ಡೆ ಕಿತ್ತು ಜಮೀನು ಹಸನು ಮಾಡಿಕೊಂಡು ಬೆಳೆ ಮಾಡಿಕೊಂಡು ಬರುತ್ತಿರುವ ಸಂತಸ್ತ ರೈತರಿಗೆ 5 ದಶಕಗಳಿಂದ ಪೋಡಿ, ಮಾಡದ ಕಾರಣ, ತಂದೆ ಮಕ್ಕಳಿಗೆ ಖಾತೆ ಬದಲಾಗುತ್ತಿಲ್ಲ, ಕೃಷಿ ಹಾಗೂ ವಿವಿಧ ಇಲಾಖೆಗಳಿಂದ ಸಿಗುವ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಕೃಷಿ ಅಭಿವೃದ್ಧಿ ಯಾವುದೇ ಬ್ಯಾಂಕಿನಿಂದ ಸಾಲ ಪಡೆಯಲಾಗುತ್ತಿಲ್ಲ. ಹಲವಾರು ಬಾರಿ ಪ್ರತಿಭಟನೆ ಹಮ್ಮಿಕೊಂಡರು ಇದು ಕಾರ್ಯರೂಪಕ್ಕೆ ಬಂದಿಲ್ಲ ದಯಮಾಡಿ ಸಂಬಂಧಿಸಿದ ಅಧಿಕಾರಿಗಳು ಇದರ ಕಡೆ ಗಮನಹರಿಸಿ ಸಮಸ್ಯೆ ಪರಿಹರಿಸಿಕೊಡಬೇಕೆಂದು ತಿಳಿಸಿದರು.
ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಧತ್ತ ಮಾತನಾಡಿ, ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ರೈತರ ಜೊತೆಗೆ ವರ್ತಿಸುತ್ತಿದ್ದಾರೆ. ಪೋಡಿ ಮಾಡುವ ವಿಚಾರದಲ್ಲಿ ನಿರ್ಲಕ್ಷ ತಾಳಿದರೆ ಜಿ್ಲ್ಲಾಧಿಕಾರಿಗಳ ಕಚೇರಿ ವಿರುದ್ಧ ಬೃಹತ್ ಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಹಿರಿಯ ನಾಗರೀಕರ ಸಂಘದ ಜಿಲ್ಲಾಧ್ಯಕ್ಷ ವೀರಭದ್ರಪ್ಪ, ಪ್ರಧಾನ ಕಾರ್ಯದರ್ಶಿ,ಮಂಜುನಾಥ್, ಚೌಡಹಳ್ಳಿ ಪುಟ್ಟರಾಜು, ನಿವೃತ್ತ ಪೊಲೀಸ್ ಅಧೀಕ್ಷರು ಕೆ.ಪಿ ಬೆಟ್ಟೇಗೌಡ, ತಾಲ್ಲೂಕು ಜೆ.ಡಿ.ಎಸ್ ಅಧ್ಯಕ್ಷ ಕೆ.ಎಸ್ ಮಂಜೇಗೌಡ, ಬಿ.ಜೆ.ಪಿ ತಾಲ್ಲೂಕು ಅಧ್ಯಕ್ಷ ಹುಲ್ಲಹಳ್ಳಿ ನಾಗರಾಜು, ಕ.ರ.ವೇ ಜಿಲ್ಲಾ ಕಾರ್ಯದರ್ಶಿ ಮಧು, ಜಯರಾಮ್ ಧರ್ಮಪುರಿ, ಚಂದ್ರಶೇಖರ್, ಮಣಿಪುರ ಕೃಷ್ಣೇಗೌಡ, ಚಂದ್ರಶೇಖರ್, ಬೈರಾಪುರ ಗ್ರಾ.ಪಂ ಸದಸ್ಯ ರುದ್ರೇಗೌಡ, ಗಣೇಶ್, ಶಂಕರಾಚಾರ್, ರಂಗಸ್ವಾಮಿ ಬಿ.ಕೆ. ನಾಗೇಶ್ ಮಲ್ಲೇಶಪುರ ಮುಂತಾದವರು ಉಪಸ್ಥಿತರಿದ್ದರು.