ಅಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧನೆ

2-klr-3
Published on

ಕೋಲಾರ: ರಾಷ್ಟ್ರಾದ್ಯಂತ ನವೆಂಬರ್‌ನ ಮೊದಲ ವಾರವನ್ನು ಜಾಗೃತ ಸಪ್ತಾಹವನ್ನಾಗಿ ಆಚರಿಸಲಾಗುತ್ತಿದ್ದು, ಲೋಕಾಯುಕ್ತ ಕಾಯ್ದೆಗಳ ಬಗ್ಗೆ ಸರ್ಕಾರಿ ಅಧಿಕಾರಿ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸಲಾಗುವುದು ಎಂದು ರಾಜ್ಯ ಲೋಕಾಯುಕ್ತ ಅಧೀಕ್ಷಕ ಸಿ.ಎನ್. ಜನಾರ್ದನ್ ಹೇಳಿದರು.

ಜಿಪಂ ಸಭಾಂಗಣದಲ್ಲಿ ತಾಲೂಕಿನ ಗ್ರಾಪಂ ಪಿಡಿಒಗಳಿಗೆ ಲೋಕಾಯುಕ್ತ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ, ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಯಾವ ರೀತಿ ವರ್ತಿಸಬೇಕೆಂದು ಲೋಕಾಯುಕ್ತ ಕಾಯ್ದೆಯಲ್ಲಿ ಸೂಚಿಸಿದೆ. ಇದನ್ನು ಜಿಲ್ಲಾ ಮತ್ತು ತಾಲೂಕಿನ ಅಧಿಕಾರಿಗಳಿಗೆ ತಿಳಿಸಿ ಕೊಡುವ ಸಲುವಾಗಿ ಜಾಗೃತಿ ಸಪ್ತಾಹ ಆಯೋಜಿಸಲಾಗಿದೆ ಎಂದರು.

ಲೋಕಾಯುಕ್ತ ಉಪಾಧೀಕ್ಷಕ ಕೃಷ್ಣಮೂರ್ತಿ ಮಾತನಾಡಿ, ರಾಜ್ಯದ ಜನಸಂಖ್ಯೆ 7 ಕೋಟಿ ದಾಟಿದೆ. ಸರ್ಕಾರಿ ನೌಕರರ ಸಂಖ್ಯೆ 4.5 ಲಕ್ಷ ಇರಬಹುದು. ಒತ್ತಡದ ಕೆಲಸಗಳ ನಡುವೆಯೇ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.

ಲಂಚ ಸ್ವೀಕಾರ ಮತ್ತು ಕೊಡುವುದು ಎರಡೂ ಅಪರಾಧ. ಸಾರ್ವಜನಿಕರ ಕೆಲಸ ಕಾರ್ಯಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿಕೊಡಬೇಕು. ವಿನಾ ಕಚೇರಿಗೆ ಅಲೆದಾಡಿಸುವುದು, ಲಂಚಕ್ಕಾಗಿ ಬೇಡಿಕೆ ಇಡುವುದು, ಕರ್ತವ್ಯ ನಿರ್ಲಕ್ಷಿಸುವುದು, ಕಾನೂನು ಉಲ್ಲಂಘಿಸುವುದು, ಅಗೌರವದಿಂದ ಕಾಣುವುದು. ಉದ್ಧಟತನದಿಂದ ವರ್ತಿಸುವುದು ಅಪರಾಧ ಎಂದರು.

ಅಧಿಕಾರಿಗಳ ಮೇಲೆ ದೂರು ನೀಡಿದ ಕೂಡಲೆ ಕ್ರಮ ಕೈಗೊಳ್ಳಲಾಗುವುದಿಲ್ಲ, ಅವರಿಗೂ ಒಂದು ತಿಂಗಳು ಕಾಲಾವಕಾಶದೊಂದಿಗೆ ಸೂಚನೆ ನೀಡುವುದು, ನೋಟಿಸ್ ಜಾರಿ ಮಾಡಲಾಗುತ್ತದೆ. ಮಾನ್ಯತೆ ನೀಡದಿದ್ದಲ್ಲಿ ಕಾನೂನು ಕ್ರಮವಾಗಿ ಬಡ್ತಿಗೆ ಕಡಿವಾಣ, ಸೇವಾ ದಾಖಲಾತಿಗಳಲ್ಲಿ ದೋಷಾರೋಪ ನಮೂದಿಸುವುದರಿಂದ ಅವರಿಗೆ ಮುಂದಿನ ದಿನಗಳಲ್ಲಿ ತೊಂದರೆಯಾಗುತ್ತದೆ ಎಂದರು.

ಸರ್ಕಾರಿ ಕೆಲಸಗಳಿಗೆ ನಿಗದಿತ ಅವಧಿಯನ್ನು ಗೊತ್ತು ಪಡಿಸಿದ ದಿನದೊಳಗೆ ಮಾಡಿ ಕೊಡದಿದ್ದರೆ, ಸ್ಪಷ್ಟನೆ ನೀಡದಿರುವುದನ್ನು ಕರ್ತವ್ಯದ ಉಲ್ಲಂಘನೆ ಎಂದು ಪರಿಗಣಿಸಿ ವಿಚಾರಣೆಗೆ ಒಳಪಡಿಸುವ ಅಧಿಕಾರ ಲೋಕಾಯುಕ್ತಕ್ಕೆ ಇದೆ ಎಂದರು.

ರಾಜಕಾರಣಿಗಳ ಒತ್ತಡಕ್ಕೆ ಕಾನೂನು ಮೀರಬೇಡಿ, ಬಡವ, ಶ್ರೀಮಂತ ಎಂಬ ತಾರತಮ್ಯ ಬೇಡ, ಎಲ್ಲರಿಗೂ ಒಂದೇ ಕಾನೂನು ಎಂಬ ಅರಿವಿರಲಿ ಎಂದರು. ಜಿಪಂ ಸಿಇಒ ಎಂ.ಆರ್. ರವಿಕುಮಾರ್, ತಾಪಂ ಇಒ ಎನ್.ವಿ. ಬಾಬು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net