ಅಧಿಕಾರಿಗಳಿಗೆ ನಡೆಗೆ ಸಚಿವ ಸುಧಾಕರ್ ಕೆಂಡಾಮಂಡಲ

CTD KDP SABE----
Published on

ಚಿತ್ರದುರ್ಗ: ಕರ್ತವ್ಯದಲ್ಲಿ ಬದ್ಧತೆ ಪ್ರದರ್ಶಿಸದಿದ್ದರೆ ಕಡ್ಡಾಯ ರಜೆ ಹೋಗಿ ಅಥವಾ ಜಿಲ್ಲೆಯಿಂದ ನಿರ್ಗಮಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಕಟುವಾಗಿ ಸೂಚಿಸಿದರು.

ಜಿಪಂ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಸೋಮವಾರ ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದ ಅವರು ಎಸ್‌ಸಿ, ಎಸ್‌ಟಿ ಸಮುದಾಯದ ಜನರು ಅಧಿಕ ಸಂಖ್ಯೆಯಲ್ಲಿರುವ ಈ ಜಿಲ್ಲೆಯಲ್ಲಿ 2 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕೆಲಸಗಳು ವೇಗವಾಗಿ ನಡೆಯುತ್ತಿಲ್ಲ. ಅಧಿಕಾರಿಗಳಲ್ಲಿ ಬದ್ಧತೆ ಇಲ್ಲವಾಗಿದೆ. ಜನಪ್ರತಿನಿಧಿಗಳನ್ನು ಹಗುರವಾಗಿ ಪರಿಗಣಿಸಿದ್ದೀರಿ. ಜನರ ಪ್ರಶ್ನೆಗಳಿಂದ ನಾವು ಮುಜುಗರ ಅನುಭವಿಸುವಂತಾಗಿದೆ. ಶ್ರಮವಹಿಸಿ ಕೆಲಸ ಮಾಡಲಾಗದಿದ್ದರೆ ಜಿಲ್ಲೆಯಿಂದ ನಿರ್ಗಮಿಸುವಂತೆ ಖಡಕ್ಕಾಗಿ ಸೂಚಿಸಿದರು.

2022-23ನೇ ಸಾಲಿನ ಶಾಸಕರ ಅನುದಾನ, ನರೇಗಾದಡಿ ಹಿರಿಯೂರು ಕ್ಷೇತ್ರದಲ್ಲಿ ಮಂಜೂರಾದ ಶಾಲೆ, ಅಂಗವಾಡಿ ಹಾಗೂ ಶೌಚಗೃಹ ಕಟ್ಟಡಗಳ ಕಾಮಗಾರಿ ಪೂರ್ಣಗೊಂಡಿಲ್ಲ. ಕೆಲವೆಡೆ ಕಾಮಗಾರಿಗಳೇ ಆರಂಭವಾಗಿಲ್ಲ. ತಮ್ಮ ಈ ನಿರ್ಲಕ್ಷ್ಯಕ್ಕೆ ನಾವು ಬೆಲೆ ತೆರ ಬೇಕಾಗುತ್ತದೆ ಎಂದು ಅಧಿಕಾರಿಗಳ ಬೆವರಿಳಿಸಿದರು.

ಎಲ್ಲ ಶಾಸಕರು ಸಿಎಂ ಸಿದ್ದರಾಮಯ್ಯರ ಬಳಿಗೆ ತೆರಳಿ ಜಿಲ್ಲೆಗೆ ಹೊಸಬರ ನೇಮಕ ಮಾಡುವಂತೆ ಮನವಿ ಮಾಡಲಾಗುವುದು ಎಂದು ಎಚ್ಚರಿಸಿದರು.

ರಾಜ್ಯದ ಸರಾಸರಿಗಿಂತ ಜಿಲ್ಲೆಯಲ್ಲಿ ತಾಯಿ, ಶಿಶು ಮರಣ, ಸಿಜೇರಿಯನ್ ಪ್ರಮಾಣ ಹೆಚ್ಚಳಕ್ಕೆ ಸಭೆಯಲ್ಲಿ ಕಳವಳ ವ್ಯಕ್ತವಾಯಿತು. ತಾಯಿ, ಶಿಶು ಮರಣಕ್ಕೆ ಸಂಬಂಧಿಸಿದ ಪ್ರತಿ ಕೇಸ್‌ಗೂ ಪ್ರತ್ಯೇಕ ವಿಶ್ಲೇಷಣಾ ವರದಿ ಸಲ್ಲಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಚಿವರು ನಿರ್ದೇಶಿಸಿದರು.

ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ,ಅಗತ್ಯ ಸವಲತ್ತುಗಳಿದ್ದರೂ ಸರ್ಕಾರಿ ಆಸ್ಪತ್ರೆಗಳಲ್ಲಿ ಯಾಕೆ ತಾಯಿ ಮರಣ ಸಂಭವಿಸುತ್ತದೆ ಎಂದು ಪ್ರಶ್ನಿಸಿದರು.

ಶಾಸಕ ಬಿ.ಜಿ. ಗೋವಿಂದಪ್ಪ ಮಾತನಾಡಿ, ಹೊಸದುರ್ಗ ತಾಲೂಕಿನಲ್ಲೂ ಗರ್ಭಿಣಿಯರ ಸಾವು, ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಳವಾಗುತ್ತಿದೆ. ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು. ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿ, ಸಾರ್ವಜನಿಕರಿಗೆ ಸಹಜ ಹೆರಿಗೆಯ ಅರಿವು ಆಗಿದೆ. ಆದರೆ, ವೈದ್ಯಾಧಿಕಾರಿಗಳೇ ಸಿಜೇರಿಯನ್‌ಗೆ ಮುಂದಾಗುತ್ತಿದ್ದಾರೆ. ಸಹಜ ಹೆರಿಗೆಗೆ ಶಿಫಾರಸ್ಸು ಮಾಡುವಂತಾಗಿದೆ ಬೇಸರಿಸಿದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಮಾತನಾಡಿ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ನೀಡಬೇಕೆಂದರು.

ತಾಯಿ, ಶಿಶು ಮರಣ ನಿಯಂತ್ರಣಕ್ಕೆ ವಹಿಸಿರುವ ಕ್ರಮದ ಕುರಿತು ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 1544 ಶಾಲೆ ಕೊಠಡಿಗಳ ನಿರ್ಮಾಣದ ಅವಶ್ಯಕತೆಯಿದೆ ಎಂದು ಡಿಡಿಪಿಐ ಎಂ.ಆರ್.ಮಂಜುನಾಥ್ ಮಾಹಿತಿ ನೀಡಿದರು. ಹಲವು ಕೊಠಡಿಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳದಿರುವುದಕ್ಕೆ ಹಾಗೂ ಆರಂಭವಾಗದೇ ಇರುವುದಕ್ಕೆ ಸಂಬಂಧಿಸಿದ ಇಇ ವಿರುದ್ಧ ಕ್ರಮಕ್ಕೆ ಸಚಿವರು ಜಿಪಂ ಸಿಇಒ ಎಸ್.ಜೆ.ಸೋಮಶೇಖರ್‌ಗೆ ಸೂಚಿಸಿದರು.

ಕಳೆದ ಬೇಸಿಗೆಯಲ್ಲಿ ಕೊರೆಸಿದ 390 ಬೋರ್‌ವೆಲ್‌ಗಳ ಬಾಕಿ 5 ಕೋಟಿ ರೂ.ಬಾಕಿ ಇದೆ. ಲಭ್ಯ ಅನುದಾನದಲ್ಲಿ ಬಾಕಿ ಪಾವತಿಗೆ ಕ್ರಮ ಕೈಗೊಳ್ಳಬೇಕೆಂದು ಡಿಸಿ ಟಿ.ವೆಂಕಟೇಶ್‌ಗೆ ಸಚಿವರು, ಶಾಸಕರು ನಿರ್ದೇಶಿಸಿದರು.

ರಸ್ತೆ ವಿಸ್ತರಣೆಗೆ ನಿರ್ದೇಶನ

ನಗರದ ಹಳೆಯ ಪಿಬಿ ರಸ್ತೆ ಅಗಲೀಕರಣ ಕಾರ್ಯ ನಮ್ಮ ಅವಧಿಯಲ್ಲೇ ಪೂರ್ಣಗೊಳ್ಳಬೇಕು. ಇದಕ್ಕಾಗಿ ದಾಖಲೆಗಳನ್ನು ಸಂಗ್ರಹಿಸಿ, ವಿಸ್ತರಣೆಗೆ ಮುಂದಾಗುವಂತೆ ಭೂಸ್ವಾಧೀನಾಧಿಕಾರಿ ವೆಂಕಟೇಶ್‌ನಾಯ್ಕ, ನಗರಸಭೆ ಅಧಿಕಾರಿಗಳಿಗೆ ಸಚಿವರು ನಿರ್ದೇಶಿಸಿದರು. ವಿಸ್ತರಣೆಗೆ ಅಡ್ಡಿಯಾಗುವಂಥ ಧಾರ್ಮಿಕ ಕೇಂದ್ರಗಳ ತೆರವಿಗೆ ಸುಪ್ರೀಂಕೋರ್ಟ್ ಆದೇಶಿಸಿದೆ. ರಸ್ತೆ ಅನಧಿಕೃತ ಒತ್ತುವರಿ ಮುಲಾಜಿಲ್ಲದೆ ತೆರವುಗೊಳಿಸಬೇಕೆಂದು ಚಂದ್ರಪ್ಪ ಹೇಳಿದರು.

ಚಳ್ಳಕೆರೆ ಹಾಗೂ ಹಿರಿಯೂರಿನಿಂದ ಚಿತ್ರದುರ್ಗ ನಗರ ಪ್ರವೇಶಿಸುವ ಪಿ.ಬಿ.ರಸ್ತೆ ಸರ್ಕಾರಿ ವಿಜ್ಞಾನ ಕಾಲೇಜಿನಿಂದ ಆಸ್ಪತ್ರೆಯವರೆಗೆ ವಿಸ್ತಾರವಾಗಿದೆ. ನಗರದ ಮುಖ್ಯಭಾಗದಲ್ಲಾಗಿರುವ ಒತ್ತುವರಿ ತೆರವು ಮಾಡಬೇಕೆಂದು ಶಾಸಕ ಟಿ. ರಘುಮೂರ್ತಿ ಹೇಳಿದರು.

ಈ ನಿಟ್ಟಿನಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ಸಲಹೆ ಪಡೆಯಬೇಕೆಂದು ನವೀನ್ ತಿಳಿಸಿದರು. ರಸ್ತೆ ಒತುವರಿ ಜತೆ ರಾಜಕಾಲುವೆ ಮೇಲಿನ ನಿರ್ಮಾಣಗಳ ತೆರವಿಗೂ ಮುಂದಾಗಬೇಕೆಂದು ವಿರೇಂದ್ರಪಪ್ಪಿ ಹೇಳಿದರು.

ಮಾರ್ಚ್ ಒಳಗೆ ರಸ್ತೆ ಗುಂಡಿಗಳನ್ನು ಮುಚ್ಚದಿದ್ದರೆ ಕಡ್ಡಾಯ ರಜೆ ಮೇಲೆ ಕಳುಹಿಸಲಾಗುವುದೆಂದು ಲೋಕೋಪಯೋಗಿ ಇಲಾಖೆ ಇಇಗೆ ಎಚ್ಚರಿಸಿದರು. ವಿದ್ಯುತ್ ಪೂರೈಕೆ ದೂರುಗಳಿಗೆ ಸ್ಪಂದಿಸುವಂತೆ ಬೆಸ್ಕಾಂ ಇಇ ತಿಮ್ಮರಾಯಪ್ಪಗೆ ಡಿಸಿ ಟಿ. ವೆಂಕಟೇಶ್ ಸೂಚಿಸಿದರು. ಕೃಷಿ, ತೋಟಗಾರಿಕೆ ಮತ್ತಿತರ ಇಲಾಖೆಗಳ ಪ್ರಗತಿ ಪರಿಶೀಲಿಸಲಾಯಿತು. ಜೆಜೆಎಂ ಕಾಮಗಾರಿಗಳ ತ್ವರಿತಕ್ಕೆ ಗೋವಿಂದಪ್ಪ, ರಘುಮೂರ್ತಿ ಅಧಿಕಾರಿಗಳಿಗೆ ಸೂಚಿಸಿದರು. ಶಾಸಕ ಎನ್.ವೈ. ಗೋಪಾಲಕೃಷ್ಣ, ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್. ಶಿವಣ್ಣ, ಕೆಡಿಪಿ ನಾಮ ನಿರ್ದೇಶಿತ ಸದಸ್ಯರು, ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಮತ್ತಿತರ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net