

ಅಥಣಿ: ಕರೊನಾ ಹತೋಟಿಗೆ ತರುವ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಜವಾಬ್ದಾರಿ ಹಾಗೂ ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಡಿಸಿಎಂ ಲಕ್ಷ್ಮಣ ಸವದಿ ಸೂಚನೆ ನೀಡಿದರು. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ತಾಲೂಕುಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಾದ್ಯಂತ ಕರೊನಾ 2ನೇ ಅಲೆ ಜೋರಾಗಿರುವುದರಿಂದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು. ಸಾರ್ವಜನಿಕ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಕುರಿತು ಅಧಿಕಾರಿಗಳಿಂದ ಮಾಹಿತಿ ಕೇಳಿ ಪಡೆದರು. ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್‌ಗಳು ಖಾಲಿ ಇವೆ. ಖಾಸಗಿ ಆಸ್ಪತ್ರೆಗಳಲ್ಲಿ ಸಾಕಷ್ಟು ಜನ ಚಿಕಿತ್ಸೆ ಪಡೆಯುತ್ತಿದ್ದು, ಬೆಡ್‌ಗಳು ಖಾಲಿ ಸಿಗುತ್ತಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಅದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸವದಿ, ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್‌ಗಳು ಖಾಲಿಯಾಗಿವೆ. ಖಾಸಗಿಯಲ್ಲಿ ಮಾತ್ರ ಭರ್ತಿ ಆಗಿವೆ ಏಕೆ ಎಂದು ಪ್ರಶ್ನಿಸಿ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ: ಸರ್ಕಾರಿ ಆಸ್ಪತ್ರೆಯ ಬಗ್ಗೆ ಜನರ ವಿಶ್ವಾಸ ಕಡಿಮೆಯಾಗುತ್ತಿದೆ. ನಿಮ್ಮಲ್ಲಿರುವ ವ್ಯವಸ್ಥೆ ಬಗ್ಗೆ ನಮಗೆ ಎಲ್ಲವೂ ಗೊತ್ತಿದೆ. ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ನಿಮ್ಮ ಮೇಲಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಗರಂ ಆದರು. ಸರ್ಕಾರಿ ಆಸ್ಪತ್ರೆಗಳಿಗೆ ಜನರು ಚಿಕಿತ್ಸೆಗೆ ಬರುತ್ತಿಲ್ಲವೆಂದರೆ ನಿಮ್ಮ ಬೇಜವಾಬ್ದಾರಿತನ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಕೂಡಲೇ ವ್ಯವಸ್ಥೆ ಸುಧಾರಿಸಿಕೊಳ್ಳಿ ಎಂದು ಎಚ್ಚರಿಕೆ ನೀಡಿದರು. ಉಪವಿಭಾಗಾಧಿಕಾರಿಗಳು ತಕ್ಷಣ ಖಾಸಗಿ ಆಸ್ಪತ್ರೆ ವೈದ್ಯರ ಸಭೆ ಕರೆದು ಬಡವರಿಗೆ ಸಾಧ್ಯವಾದಷ್ಟು ಕಡಿಮೆ ದರದಲ್ಲಿ ಸೇವೆ ನೀಡುವಂತೆ ಮನವಿ ಮಾಡಿಕೊಳ್ಳಿ. ಅವರಿಂದ ನೈಜ ವರದಿ ಪಡೆದುಕೊಳ್ಳಿ ಎಂದು ಸಚಿವರು ಸೂಚನೆ ನೀಡಿದರು.
ಪೊಲೀಸರಿಗೆ ಕಟ್ಟುನಿಟ್ಟಿನ ಆದೇಶ: ಪೊಲೀಸರು ಗಡಿಯಲ್ಲಿ ಕಟ್ಟೆಚ್ಚರ ವಹಿಸಬೇಕು. ಕಾಟಾಚಾರಕ್ಕೆ ಜನರನ್ನು ಹೈರಾಣ ಮಾಡಬಾರದು. ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಅಗತ್ಯ ಕ್ರಮ ಕೈಗೊಂಡು ಕರೊನಾ ನಿಯಂತ್ರಣಕ್ಕೆ ಎಲ್ಲ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ತಾಲೂಕಾಡಳಿತ, ಆರೋಗ್ಯ ಇಲಾಖೆ, ಪುರಸಭೆ, ಪೊಲೀಸ್ ಇಲಾಖೆಯ ಜವಾಬ್ದಾರಿ ಹೆಚ್ಚಿದೆ ಎಂದ ಅವರು, ಉಪವಿಭಾಗಾಧಿಕಾರಿಗಳು ಪ್ರತಿ ವಾರಕ್ಕೆ ಅಥಣಿಯಲ್ಲಿ ಎರಡು ಸಭೆ ನಡೆಸಲು ಸೂಚನೆ ನೀಡಿದರು.
ಗಡಿಗ್ರಾಮಗಳಿಗೆ ಮಹಾರಾಷ್ಟ್ರದಿಂದ ಜನರು ಬಾರದಂತೆ ಕಟ್ಟೆಚ್ಚರ ವಹಿಸಬೇಕೆಂದು ಪೊಲೀಸರಿಗೆ ಸೂಚಿಸಿದರು. ಡಿವೈಎಸ್‌ಪಿ ಎಸ್.ವಿ.ಗೀರಿಶ ಗಡಿಭಾಗದಲ್ಲಿ 9 ಚೆಕ್‌ಪೋಸ್ಟ್ ನಿರ್ಮಿಸಿರುವ ಕುರಿತು ಮಾಹಿತಿ ನೀಡಿದರು. ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಬಸಗೌಡ ಕಾಗೆ ಮಾತನಾಡಿದರು. ಚಿಕ್ಕೋಡಿ ಉಪವಿಭಾಗಾಧಿಕಾರಿ ಯುಕೇಶಕುಮಾರ, ತಹಸೀಲ್ದಾರ್ ದುಂಡಪ್ಪ ಕೋಮಾರ, ಡಿವೈಎಸ್‌ಪಿ ಎಸ್.ವಿ.ಗಿರೀಶ, ತಾಪಂ ಇಒ ರವಿ ಬಂಗಾರೆಪ್ಪನವರ, ಸಿಪಿಐ ಶಂಕರಗೌಡ ಬಸನಗೌಡರ, ಪುರಸಭೆ ಮುಖ್ಯಾಧಿಕಾರಿ ಎಂ.ಎಸ್.ಕವಲಾಪುರ, ಪ್ರವೀಣ ಪಾಟೀಲ ಮತ್ತಿತರರು ಇದ್ದರು.