ಅಧಿಕಾರಿಗಳಿಂದ ಪಡಿತರ ಹಂಚಿಕೆಗೆ ಗ್ರಾಮಸ್ಥರ ಧರಣಿ

Villagers protest against distribution of ration by officials
ಸಿಂದಗಿ ಪಟ್ಟಣದ ತಾಲೂಕು ಆಡಳಿತ ಸೌಧದ ತಹಸೀಲ್ದಾರ್ ಕೋಣೆ ಎದುರು ಹಂದಿಗನೂರ ಗ್ರಾಮಸ್ಥರು ಪಡಿತರ ಹಂಚಿಕೆಗೆ ಆಗ್ರಹಿಸಿ ಧರಣಿ ನಡೆಸಿದರು.
Published on

ಸಿಂದಗಿ: ತಾಲೂಕಿನ ಹಂದಿಗನೂರ ಗ್ರಾಮದ ಪಡಿತರ ಹಂಚಿಕೆದಾರ ಸಾಹೇಬಗೌಡ ಬಿರಾದಾರ ಅವರು ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ದೂರಿ ಕಂದಾಯ ಅಧಿಕಾರಿಗಳ ಮುಖಾಂತರ ಪಡಿತರ ಹಂಚಿಕೆ ಮಾಡುವಂತೆ ಆಗ್ರಹಿಸಿ ಮಂಗಳವಾರ ರಾತ್ರಿ ತಹಸೀಲ್ದಾರ್ ಕೋಣೆ ಎದುರು ಮಹಿಳೆಯರು ಹಾಗೂ ಪುರುಷರು ಧರಣಿ ನಡೆಸಿದರು.

ಗ್ರಾಮದ ಮಹಿಳೆ ರೇಣುಕಾ ತಳವಾರ ಮಾತನಾಡಿ, ಪಡಿತರ ತರಲು ಹೋದ ಬಹುತೇಕ ಮಹಿಳೆಯರಿಗೆ ಹಂಚಿಕೆದಾರ ಸಾಹೇಬಗೌಡ ಬಿರಾದಾರ ಏಕವಚನದಲ್ಲಿ ಮಾತನಾಡಿಸುವುದು, ಅಸಭ್ಯವಾಗಿ ಮಾತನಾಡುವುದು, ಅವಾಚ್ಯವಾಗಿ ನಿಂದಿಸುತ್ತಿದ್ದರು. ಮನೆಯಲ್ಲಿ ಹೆಣ ಬಿದ್ದರೂ ರೇಷನ್‌ಗೆ ಬನ್ನಿ ಎನ್ನುವುದು ಕೇಳಿ ಬೇಸತ್ತಿದ್ದೇವೆ. ದಿನವೂ ದುಡಿದು ತಿನ್ನುವ ನಮ್ಮಂಥವರಿಗೆ ನಾಳೆ ಬರ‌್ರಿ ಎನ್ನುತ್ತ ಪಡಿತರ ನೀಡದೇ ಸಾಗಹಾಕುವುದನ್ನು ಕಂಡು ಗ್ರಾಮಸ್ಥರೆಲ್ಲರೂ ರೋಸಿ ಹೋಗಿದ್ದೇವೆ ಎಂದರು.

ಅಸಭ್ಯ ಹಂಚಿಕೆದಾರನ ಬಳಿ ನಾವು ರೇಷನ್ ಪಡೆಯಲಾರೆವು. ಅವನೂ ಬೇಡ, ಹೊಸಬರೂ ಬೇಡ, ಅಧಿಕಾರಿಗಳೇ ಹಂಚಿಕೆ ಮಾಡಿದರೆ ಮಾತ್ರ ಪಡಿತರ ಪಡೆಯುತ್ತೇವೆ. ಅಧಿಕಾರಿಗಳು ಮುಂದಾಗಿ ಅಕ್ಕಿ ಮೂಟೆಯೊಂದಿಗೆ ಗ್ರಾಮಕ್ಕೆ ಬರುವುದಾದರೆ ಈಗಲೇ ಧರಣಿ ಕೈ ಬಿಡುತ್ತೇವೆ. ಅಕ್ಕಿಯೊಂದಿಗೆ ಊರು ಸೇರುವವರೆಗೂ ನಮ್ಮ ಹೋರಾಟ ಕೈಬಿಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾತ್ರಿ ತಹಸೀಲ್ದಾರ್ ಕಚೇರಿ ಎದುರೇ ಗ್ರಾಮಸ್ಥರು ಧರಣಿ ಕುಳಿತಿದ್ದಾರೆ.
ಹರ್ಷವರ್ಧನ ಪೂಜಾರಿ, ಕಂಠೀರವ ಹೊಸಮನಿ ಮಾತನಾಡಿ, ನೂರಾರು ಜನ ಗ್ರಾಮಸ್ಥರು ಪಡಿತರ ಹಂಚಿಕೆ ವಿಷಯವಾಗಿ ತಾವು ಎದುರಿಸುತ್ತಿರುವ ಸಮಸ್ಯೆ ಕುರಿತು ಮನವಿ ಸಲ್ಲಿಸಿದ್ದರು. ಆಗ ಅಧಿಕಾರಿಗಳು ಗ್ರಾಮಕ್ಕೆ ಬಂದು ತಮ್ಮ ಮೂಲಕವೇ ಪಡಿತರ ಹಂಚಿಕೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಅದರಂತೆ ಯಾವ ಕ್ರಮವೂ ವಹಿಸಿಲ್ಲ. ಗ್ರಾಮಕ್ಕೂ ಬಂದಿಲ್ಲ. ಗ್ರಾಮಸ್ಥರ ಮನವಿಗೆ ತಾರ್ಕಿಕ ಅಂತ್ಯವನ್ನು ತೋರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಸಾಹೇಬಗೌಡ ಅವರ ಮೇಲೆ ಅಕ್ರಮವಾಗಿ ಪಡಿತರ ಸಾಗಾಟದ ಕುರಿತು ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಆಹಾರ ಇಲಾಖೆಯ ಡಿಡಿ ಅವರ ಗಮನಕ್ಕೂ ತರಲಾಗಿತ್ತು. ಜಿಲ್ಲಾಧಿಕಾರಿಗಳು ಗ್ರಾಮದ ತಲಾಟಿಗೆ ಪಡಿತರ ಹಂಚಿಕೆ ಮಾಡುವಂತೆ ಆದೇಶ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಈ ಬಗ್ಗೆ ಗ್ರಾಮಸ್ಥರಿಗೆ ತಾಲೂಕು ಅಧಿಕಾರಿಗಳ ಅವರಿಂದ ಯಾವುದೇ ಮಾಹಿತಿ ಸಿಗುತ್ತಿಲ್ಲ. ಆದರೆ ಗ್ರಾಮಸ್ಥರೆಲ್ಲರೂ ಸೇರಿ ಹೊಸ ಪ್ರಾಧಿಕಾರ ಪಡೆದ ಸಂಘಕ್ಕೂ, ಹಳೇ ಸನ್ನದುದಾರರಿಬ್ಬರಿಗೂ ಹಂಚಿಕೆ ಕಾರ್ಯ ವಹಿಸದೇ, ಕಂದಾಯ ಅಧಿಕಾರಿಗಳೇ ಹಂಚಿಕೆ ಮಾಡಲಿ ಎಂದು ಆಗ್ರಹಿಸಿದರು.

ಮೂರು ತಿಂಗಳಿನ ಅಲೆದಾಟಕ್ಕೆ ಬೇಸತ್ತ ಧರಣಿ ನಿರತ ಗ್ರಾಮಸ್ಥರು, ಮಧ್ಯಾಹ್ನ 4 ಗಂಟೆಯಿಂದಲೂ ಪ್ರತಿಭಟನೆ ನಡೆಸುತ್ತ ರಾತ್ರಿ ತಹಸೀಲ್ದಾರ್ ಕಚೇರಿ ಆವರಣದಲ್ಲಿಯೇ ಮೊಕ್ಕಾಂ ಹೂಡಿ, ತಮ್ಮ ಬೇಡಿಕೆಗೆ ಅಧಿಕಾರಿಗಳು ಸ್ಪಂಧಿಸುವವರೆಗೂ ರಾತ್ರಿಯಿಡಿ ತಮ್ಮ ಹೋರಾಟ ನಿಲ್ಲಿಸಲಾರೆವು ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.

ಅನಿತಾ ಡಾಂಗಿ, ಪಾರ್ವತಿ ಡಾಂಗಿ, ರೇಖಾ ಗುಡದಿನ್ನಿ, ಬಸವರಾಜ ಕುಂಬಾರ, ಭೀಮರಾಯ ಡಾಂಗಿ, ನಿಂಗಪ್ಪ ಮ್ಯಾಕೇರಿ, ಪರಶುರಾಮ ಡಾಂಗಿ, ವಿಠ್ಠಲ ಬಳಬಟ್ಟಿ, ನಿಂಗಪ್ಪ ಡಾಂಗಿ, ಅನೀಲ ಚಿಮ್ಮಲಗಿ, ಶರಣಪ್ಪ ಅಗಸರ, ಮುತ್ತಪ್ಪ ಕೋರವಾರ, ಅಶೋಕ ಚಿಂಚೂರ, ಅರವಿಂದ ಬಿರಾದಾರ, ಶರತ್ ಪಟ್ಟಣಶೆಟ್ಟಿ, ಗುರುಪಾದ ಚೋರಗಸ್ತಿ ಸೇರಿದಂತೆ ನೂರಾರು ಗ್ರಾಮಸ್ಥರಿದ್ದರು. ಸ್ಥಳದಲ್ಲಿ ಸಿಪಿಐ ಡಿ.ಹುಲಗಪ್ಪ, ಠಾಣಾಧಿಕಾರಿ ಭೀಮಪ್ಪ ರಬಕವಿ, ಅಪರಾಧ ವಿಭಾಗದ ಪಿಎಸ್‌ಐ ಅಂಗಡಿ ಮನವೊಲಿಕೆ ಯತ್ನ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net