

ಕಲಬುರಗಿ: ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆ ಮಾಡಿ ಪೌಷ್ಟಿಕ ಕರ್ನಾಟಕ ನಮ್ಮ ಗುರಿಯಾಗಿದ್ದು, ಆ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ. ಪಿ. ರಾಜಾ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ರಾಷ್ಟ್ರೀಯ ಪೋಷಣ ಅಭಿಯಾನ ಯೋಜನೆಯಡಿಯಲ್ಲಿ ಪೋಷಣ ಮಾಸಾಚರಣೆ ಸೆಪ್ಟೆಂಬರ್-2020 ಕಾರ್ಯಕ್ರಮ ಬುಧವಾರ ಉದ್ಘಾಟಿಸಿ ಮಾತನಾಡಿದರು.
ಆರು ವರ್ಷದೊಳಗಿನ ಮಕ್ಕಳನ್ನು ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಠಿಕಾಂಶಯುಕ್ತ ಆಹಾರ ಒದಗಿಸಲಾಗುತ್ತಿದೆ. ಜಿಲ್ಲೆಯಾದ್ಯಂತ ಪ್ರತಿ ತಾಲೂಕಿನಲ್ಲಿ ಎನ್ಆರ್ಸಿ ಕೇಂದ್ರಗಳಲ್ಲಿದ್ದು, ಅಲ್ಲಿ ಉತ್ತಮ ಮಕ್ಕಳ ತಜ್ಞರು ಕಾರ್ಯನಿರ್ವಹಿಸುತ್ತಿರುವುದರಿಂದ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಸೂಕ್ತ ಸಮಯಕ್ಕೆ ದಾಖಲಿಸಿ ಚಿಕಿತ್ಸೆ ನೀಡಬೇಕು. ಅಪೌಷ್ಟಿಕತೆ ನಿವಾರಿಸುವಲ್ಲಿ ಕಳೆದೆರಡು ವರ್ಷಗಳಲ್ಲಿ ಉತ್ತಮ ಪ್ರಗತಿ ಸಾಧಿಸಲಾಗಿದ್ದು, ಇದನ್ನು ಮುಂದುವರಿಸಬೇಕಾಗಿದೆ. ಅಪೌಷ್ಟಿಕತೆ ಹೋಗಲಾಡಿಸುವಲ್ಲಿ ಕೈ ತೋಟದ ವ್ಯವಸ್ಥೆ ಹೆಚ್ಚಿನ ರೀತಿಯಲ್ಲಿ ಆಗಬೇಕು ಎಂದು ಅಭಿಪ್ರಾಯಪಟ್ಟರು.
ಸಾರ್ವಜನಿಕ ಶಿಕ್ಷಣ ಇಲಾಖೆ ವಿಷಯ ನಿರೀಕ್ಷಕ ಹೃಷಿಕೇಶ್ ದಂತಕಾಳೆ ಮಾತನಾಡಿ, ಅಪೌಷ್ಟಿಕತೆಯಿಂದ ಬಳಲುವ ಮಕ್ಕಳು ಮಾನಸಿಕ ಮತ್ತು ದೈಹಿಕವಾಗಿ ತೊಂದರೆ ಅನುಭವಿಸುತ್ತಾರೆ. ಪೌಷ್ಟಿಕಾಂಶ ಲಭಿಸಬೇಕಾದರೆ ಮಗು ಹುಟ್ಟುವುದಕ್ಕಿಂತ ಮೊದಲು ತಾಯಿಯ ಗರ್ಭದಲ್ಲಿಯೇ ಪೌಷ್ಟಿಕಾಂಶ ಸಿಗಬೇಕು. ಅಂದಾಗ ಮಾತ್ರ ತಾಯಿ-ಮಗು ಆರೋಗ್ಯದಿಂದ ಇರಲು ಸಾಧ್ಯ. ಅಪೌಷ್ಟಿಕತೆ ಕುರಿತು ಪ್ರೌಢ ಶಾಲೆಗಳಲ್ಲಿ 26ರಂದು ಪ್ರಬಂಧ ಸ್ಪರ್ಧೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಪೌಷ್ಟಿಕ ಕರ್ನಾಟಕ ಅಭಿಯಾನದ ಭಿತ್ತಿ ಪತ್ರಗಳನ್ನು ಗಣ್ಯರು ಬಿಡುಗಡೆ ಮಾಡಿದರು. ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಜಿ. ಎಸ್. ಗುಣಾರಿ ಸ್ವಾಗತಿಸಿದರು. ಸಿಡಿಪಿಓ ಪ್ರೇಮಾ ವಂದಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ-ಸಿಬ್ಬಂದಿ ಇದ್ದರು.
0-6 ವರ್ಷದ ಮಕ್ಕಳಿಗೆ ಆಗಾಗ ಕಾಣುವ ರೋಗಗಳಿಗೆ ಸೂಕ್ತ ಚಿಕಿತ್ಸೆ, ಚುಚ್ಚು ಮದ್ದು ನೀಡಬೇಕು. ಮಕ್ಕಳು ಅಪೌಷ್ಟಿಕತೆಯಿಂದ ಕಂಡುಬಂದಲ್ಲಿ ಎನ್ಆರ್ಸಿಗಳಿಗೆ ಕಳುಹಿಸಿ ಸಮಯಕ್ಕೆ ಸರಿಯಾದ ಚಿಕಿತ್ಸೆ ನೀಡಿದಲ್ಲಿ ಮಕ್ಕಳ ಬೆಳವಣಿಗೆಯಲ್ಲಿ ಕುಂಠಿತ ತಡೆಯಬಹುದಾಗಿದೆ.
ಡಾ.ರಾಜಶೇಖರ ಮಾಲಿ,
ಡಿಎಚ್ಒ ಕಲಬುರಗಿ.