

ಲಕ್ಷ್ಮೇಶ್ವರ: ಸಮೀಪದ ಗೋವನಾಳ ಗ್ರಾಮದ 3.36 ಎಕರೆ ಕೆರೆ ಜಾಗದ ದಾಖಲೆ ಅಂಜುಮನ್ ಎ ಇಸ್ಲಾಂ ಸೊಸೈಟಿ ವಕ್ಪ್ ಮಂಡಳಿ ಹೆಸರಿಗೆ ಬದಲಾವಣೆಯಾಗಿದ್ದನ್ನು ತಿದ್ದುಪಡಿ ಮಾಡಿಸುವ ಗ್ರಾಮಸ್ಥರ ಒತ್ತಾಯದ ಹಿನ್ನೆಲೆಯಲ್ಲಿ ಸೋಮವಾರ ಉಪತಹಸೀಲ್ದಾರ್ ಎಂ.ಜಿ. ದಾಸಪ್ಪನವರ ಉಪಸ್ಥಿತಿಯಲ್ಲಿ ಸಂಧಾನ ಸಭೆ ಜರುಗಿತು.
ಕೆರೆಯ ಜಾಗ ವಕ್ಪ್ ಮಂಡಳಿಗೆ ಬದಲಾವಣೆಯಾದ ಬಗ್ಗೆ ಸುದ್ದಿ ಹರಡುತ್ತಿದ್ದಂತೆ ಭಾನುವಾರ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ವಣವಾಗಿತ್ತು. ಗ್ರಾಪಂ ಚುನಾವಣೆ ಬಹಿಷ್ಕಾರದ ಎಚ್ಚರಿಕೆ ಹಿನ್ನೆಲೆ ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಮತ್ತು ಪೊಲೀಸರ ಮಧ್ಯಸ್ಥಿಕೆಯಲ್ಲಿ ಪರಿಸ್ಥಿತಿ ಶಾಂತವಾಗಿತ್ತು.
ಆದರೆ, ಸೋಮವಾರವೂ ಪರಿಸ್ಥಿತಿ ಮತ್ತೇ ಬಿಗಡಾಯಿಸುವುದನ್ನು ಅರಿತ ಗ್ರಾಮಸ್ಥರು ಕಂದಾಯ, ಪೊಲೀಸ್ ಮತ್ತು ಗ್ರಾಪಂ ಅಧಿಕಾರಿಗಳನ್ನೊಳಗೊಂಡ ಸಭೆ ಏರ್ಪಡಿಲಾಗಿತ್ತು.
ಸಭೆಯಲ್ಲಿ ಭರಮಣ್ಣ ರೊಟ್ಟಿಗವಾಡ, ಶೇಖರಗೌಡ ಕೊರಡೂರ ಮತ್ತಿತರರು ಮಾತನಾಡಿ, ಇಷ್ಟು ದೊಡ್ಡ ಪ್ರಮಾಣದ ಕೆರೆಯ ಜಾಗದ ದಾಖಲೆ ಗ್ರಾಮಸ್ಥರಿಗೆ ಗೊತ್ತಿಲ್ಲದಂತೆ ಹೇಗೆ ಹೆಸರು ಬದಲಾವಣೆಯಾಗಿದೆ. ಬದಲಾವಣೆ ಮಾಡಿಸುವ ಮೊದಲು ಹಿರಿಯರ ಗಮನಕ್ಕೆ ತರಬೇಕಿತ್ತು. ಇದರಿಂದಾಗಿ ಗ್ರಾಮದಲ್ಲಿ ಅಶಾಂತಿ ವಾತಾವರಣ ನಿರ್ವಣವಾಗುವ ಮತ್ತು ಸೌಹಾರ್ಧತೆಗೆ ಧಕ್ಕೆ ಬರಲಿದೆ. ಆದ್ದರಿಂದ ಮುಸ್ಲಿಮರು ಒಮ್ಮತದಿಂದ ಈ ಮೊದಲಿನಂತೆ ಸಾರ್ವಜನಿಕ ಕೆರೆ ಎಂದು ಖಾತೆ ಬದಲಾವಣೆಗೆ ಸಹಕಾರ ನೀಡಬೇಕು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮದ ಹುಸೇನಸಾಬ್ ದೊಡ್ಡಮನಿ, ದಿವಾನ್ಸಾಬ್ ಮಸೂತಿ, ಈ ಹಿಂದೆ ಪ್ರಾರ್ಥನಾ ಮಂದಿರಕ್ಕೆ ಬಿಟ್ಟುಕೊಟ್ಟ ಕೆರೆ ಪ್ರದೇಶದ ಸ್ವಲ್ಪ ಜಾಗವನ್ನು ಮಾತ್ರ ಅಂಜುಮನ್ ಎ ಇಸ್ಲಾಂ ಸೊಸೈಟಿ ದಾಖಲೆ ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸಿದೆ. ಆದರೆ, ಈಗ 3.36 ಎಕರೆ ಜಮೀನಿನ ಖಾತೆ ಬದಲಾಗಿರುವುದರಲ್ಲಿ ತಮ್ಮದೇನೂ ಪಾತ್ರವಿಲ್ಲ. ಖಾತೆ ಬದಲಾವಣೆಗೆ ಸಹಕಾರ ನೀಡುತ್ತೇವೆ ಎಂದರು.
ಉಪತಹಸೀಲ್ದಾರ್ ದಾಸಪ್ಪನವರ ಮಾತನಾಡಿ, ಸರ್ಕಾರದ ಮಟ್ಟದಲ್ಲಿ ಕೆರೆಯ ಜಾಗದ ದಾಖಲೆ ಬದಲಾವಣೆಯಾಗಿದ್ದರೂ ಹಿಂದು-ಮುಸ್ಲಿಂ ಹಿರಿಯರು ಒಮ್ಮತದ ನಿರ್ಣಯ ಕೈಗೊಂಡು ಮೊದಲಿದ್ದಂತೆ ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದರೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಮಸ್ಯೆ ಪರಿಹರಿಸಬಹುದಾಗಿದೆ. ಯಾರೂ ತಪ್ಪು ನಿರ್ಧಾರಗಳನ್ನು ಮಾಡದೆ ಶಾಂತ ಮತ್ತು ಕಾನೂನು ಬದ್ಧವಾಗಿ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು. ಚುನಾವಣೆಗೂ ಇದಕ್ಕೂ ಸಂಬಂಧ ಕಲ್ಪಿಸದೆ ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದರು.
ಸಿಪಿಐ ವಿಕಾಸ ಲಮಾಣಿ, ಪಿಎಸ್ಐ ಶಿವಯೋಗಿ ಲೋಹಾರ, ಪಿ.ಎಂ. ಬಡಿಗೇರ, ಪಿಡಿಒ ಬಿ.ಟಿ. ಅಮ್ಮನವರ, ನಾಗರಾಜ ದೊಡ್ಡಮನಿ, ಚಂದ್ರು ತಳವಾರ, ಮಂಜುನಾಥ ಕೆಂಚನಗೌಡ್ರ, ಗೌಡಪ್ಪಗೌಡ ಸಣ್ಣಗೌಡ್ರ, ಚಂದ್ರಗೌಡ ಕರಿಗೌಡರ, ಬಿ.ಎನ್. ಬಡಿಗೇರ, ಮಾರುತಿ ಬಾರಕೇರ, ಮಲ್ಲೇಶ ಬಂಡಿವಡ್ಡರ, ಹುಸೇನಸಾಬ್ ದೊಡ್ಡಮನಿ, ದಿವಾನ್ಸಾಬ್ ಮಸೂತಿ, ಅಲ್ಲಿಸಾಬ್ ಅಗಸಿಮನಿ, ಮುದಕಣ್ಣ ಹುಲ್ಲೂರ, ಬಾಬುಸಾಬ್ ದೊಡ್ಡಮನಿ, ಚಿನ್ನಪ್ಪ ಕೊರಕನವರ, ನಿಂಗನಗೌಡ್ರ ಪೊಲೀಸ್ಪಾಟೀಲ, ಮಂಜುನಾಥ ಕಟ್ಟಿಮನಿ ಇತರರಿದ್ದರು. ಪಿಎಸ್ಐಗಳಾದ ಶಿವಯೋಗಿ ಲೋಹಾರ, ಪಿ.ಎಂ. ಬಡಿಗೇರ ಇದ್ದರು.
EndFragment