ಅಧಿಕಾರಿಗಳ ವಿರುದ್ಧ ರೈತರು ಗರಂ, ಪಹಣಿಯಲ್ಲಿ ರಾಗಿ ಬೆಳೆ ನಮೂದಿಸುವ ನಿಯಮಕ್ಕೆ ವಿರೋಧ

7 DBP 5 Raitha
Published on

ದೊಡ್ಡಬಳ್ಳಾಪುರ: ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ವಿಚಾರ ನಗರದ ಎಪಿಎಂಸಿ ಆವರಣದ ಖರೀದಿ ಕೇಂದ್ರದ ಬಳಿ ಮಂಗಳವಾರ ರೈತರು ಮತ್ತು ಅಧಿಕಾರಿಗಳ ನಡುವೆ ಜಟಾಪಟಿಗೆ ಕಾರಣವಾಗಿತ್ತು.

ಪಹಣಿಯಲ್ಲಿ ರಾಗಿ ಎಂದು ನಮೋಸಿದ್ದರೆ ಮಾತ್ರ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸಲಾಗುವುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಬಹುತೇಕ ರೈತರ ಪಹಣಿಯಲ್ಲಿ ರಾಗಿ ಬೆಳೆ ಎಂದು ನಮೋದಾಗಿಲ್ಲ. ಆದರೆ ವಾಸ್ತವದಲ್ಲಿ ನಾವು ರಾಗಿ ಬೆಳೆದಿದ್ದೇವೆ. ಪಹಣಿಯಲ್ಲಿ ಬೆಳೆ ನಮೋದು ಮಾಡುವ ಕೆಲಸ ಕಂದಾಯ ಇಲಾಖೆ ಅಧಿಕಾರಿಗಳದ್ದು. ರಾಗಿ ಖರೀದಿಸುವುದನ್ನು ತಪ್ಪಿಸಲು ಸರ್ಕಾರ ಹತ್ತಾರು ರೀತಿಯ ಕುಂಟು ನೆಪ ಹೇಳುತ್ತಿರುವುದು ಖಂಡನೀಯ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.

ರೈತ ಶಕ್ತಿ ರಾಜ್ಯ ಘಟಕದ ಅಧ್ಯಕ್ಷ ಹೊನ್ನಾಘಟ್ಟ ಮಹೇಶ್ ಮಾತನಾಡಿ, ಈ ವರ್ಷ ರಾಗಿ ಬೆಳೆ ಉತ್ತಮವಾಗಿ ಇಳುವರಿ ಬಂದಿದೆ.

ಹೇಗಾದರು ಮಾಡಿ ರೈತರನ್ನು ದಾರಿ ತಪ್ಪಿಸಲು ರಾಗಿ ಖರೀದಿಗೆ ಹತ್ತಾರು ರೀತಿಯ ಕಾನೂನು ರೂಪಿಸಿದ್ದಾರೆ. ಸಮರ್ಪಕವಾಗಿ ಕೆಲಸ ಮಾಡದ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ರಾಗಿ ಖರೀದಿಗೆ ಈ ಹಿಂದೆ ಗ್ರಾಮ ಲೆಕ್ಕಾಧಿಕಾರಿಗಳಿಂದ ಬೆಳೆ ದೃಢೀಕರಣ ಪತ್ರ ಪಡೆದು ಕೊಡಲಾಗುತಿತ್ತು. ಇದೇ ನಿಯಮವನ್ನು ಈಗಲು ಅನುಸರಿಸಬೇಕು ಎಂದು ಒತ್ತಾಯಿಸಿದರು.

ರೈತರನ್ನು ಸಮಾಧಾನ ಪಡಿಸಲು ಯತ್ನಿಸಿದ ರಾಜ್ಯ ಆಹಾರ ಮತ್ತು ನಾಗರಿಕರ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕ ಸತೀಶ್‌ಬಾಬು ಅವರನ್ನು ತರಾಟೆ ತೆಗೆದುಕೊಂಡ ರೈತರು ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

ಅಧಿಕಾರಿಗಳ ಭರವಸೆಯಿಂದ ತೃಪ್ತರಾಗದ ರೈತರು ಖರೀದಿ ಕೇಂದ್ರದ ಮುಂದೆಯೇ ಅಡುಗೆ ತಯಾರಿ ಮಾಡಿ ಧರಣಿ ಮುಂದುವರಿಸಿದರು. ಎಚ್ಚೆತ್ತ ಅಧಿಕಾರಿಗಳು ಜಿಲ್ಲಾಧಿಕಾರಿ ಹಾಗೂ ಆಹಾರ ನಿಗಮದ ಹಿರಿಯ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿ ಎರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸಿ ರಾಗಿ ಖರೀದಿಗೆ ನಿಯಮ ಸರಳೀಕರಣ ಮಾಡಲಾಗುವುದು ಎಂದು ಕಾಲಾವಕಾಶ ಕೋರಿದರು ನಂತರ ಸಂಜೆಯ ವೇಳೆಗೆ ಪ್ರತಿಭಟನೆ ಹಿಂಪಡೆದ ರೈತರು ಎರಡು ದಿನಗಳ ಕಾಲಾವಕಾಶ ನೀಡಿದರು.

ತಹಸೀಲ್ದಾರ್ ಟಿ.ಎಸ್.ಶಿವರಾಜ್, ತಾಪಂ ಅಧ್ಯಕ್ಷ ಡಿ.ಸಿ.ಶಶಿಧರ್, ಸಹಾಯ ಕೃಷಿ ನಿರ್ದೇಶಕ ಸಿ.ನಾರಾಯಣಸ್ವಾಮಿ ಇದ್ದರು.

ಹೆಸರೇಳಲು ಇಚ್ಚಿಸದ ಅಧಿಕಾರಿ ಮಾಹಿತಿಯ: ರಾಗಿ ಖರೀದಿ ಪ್ರಕ್ರಿಯೆ ಕೇಂದ್ರ ಸರ್ಕಾರ ರಚಿಸಿರುವ ಪ್ರೂಟ್ಸ್ ಆ್ಯಪ್‌ನಲ್ಲಿ ನೋಂದಣಿ ಸಂಖ್ಯೆ ಪಡೆದಿರುವರಿಗೆ ಮಾತ್ರ ಅವಕಾಶ ವಿದ್ದು, ನೋಂದಣಿ ಸಂಖ್ಯೆ ದಾಖಲಾಗದ ರೈತರಿಂದ ಖರೀದಿಸಲು ಸಾಧ್ಯವಿಲ್ಲ. ಈಗ ಆ್ಯಪ್‌ನಲ್ಲಿ ನೋಂದಣಿ ಸಂಖ್ಯೆ ದಾಖಲಿಸಿದ ವೇಳೆ ಬೆಳೆ ತಾಳೆಯಾಗುತಿಲ್ಲ. ಆದರೆ ಕೃಷಿ ಅಧಿಕಾರಿಗಳಿಗೆ ಅಥವಾ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಇದರ ಮಾಹಿತಿ ಇಲ್ಲವಾಗಿದ್ದು, ಪ್ರಸ್ತುತ ಯಾವುದೇ ಪರ್ಯಾಯ ಮಾರ್ಗದಿಂದ ರಾಗಿ ಖರೀದಿಸಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ರಚಿಸಿರುವ ಆ್ಯಪ್‌ಆದ ಕಾರಣ ಎಡಿಟ್ ಅವಕಾಶ ಇಲ್ಲ. ಸರ್ಕಾರಮಟ್ಟದ ಹಿರಿಯ ಅಧಿಕಾರಿಗಳು ಮಧ್ಯ ಪ್ರವೇಶಿಸಿದರೆ ಮಾತ್ರ ಸಮಸ್ಯೆ ಬಗೆ ಹರಿಯಬಹುದಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಸದ್ಯಕ್ಕೆ ಮುಕ್ತ ಮಾರುಕಟ್ಟೆಯಲ್ಲಿ ರಾಗಿ ಬೆಳೆ ಪ್ರತಿ ಕ್ವಿಂಟಾಲ್‌ಗೆ 2,450 ರೂ. ಇದೆ. ರಾಜ್ಯ ಸರ್ಕಾರ ಬೆಂಬಲ ಬೆಲೆಯಲ್ಲಿ 3,150 ರೂ.ಗಳಿಗೆ ಖರೀದಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net