ಅಧಿಕಾರಿಗಳ ಮೇಲೆ ಸುಳ್ಳು ಆರೋಪ ಬೇಡ: ಎಚ್.ಡಿ. ರೇವಣ್ಣ ಹೇಳಿಕೆಗೆ ಸಂಸದ ಶ್ರೇಯಸ್ ಪಟೇಲ್ ತಿರುಗೇಟು

2
Published on

ಹಾಸನ: ನಾನು ಶತ್ರುಗಳಿಗೂ ಯಾವ ತೊಂದರೆ ಕೊಡುವುದಿಲ್ಲ. ರಾಜಕೀಯ ಇಂದು ಇದ್ದರೇ ನಾಳೆ ಹೋಗುವುದು. ಚುನಾವಣೆ ಬಂದಾಗ ರಾಜಕೀಯ ಮಾಡೋಣ. ಯಾರಾದರೂ ಅಧಿಕಾರಿಗಳು ತಪ್ಪು ಮಾಡಿದಾಗ ಮೇಲಾಧಿಕಾರಿಗಳಿಗೆ ದೂರು ನೀಡುವ ಕೆಲಸ ಮಾಡಬೇಕೆ ಹೊರತು ಸುಳ್ಳು ಆರೋಪ ಮಾಡುವುದು ಬೇಡ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಹೇಳಿಕೆಗೆ ಸಂಸದ ಶ್ರೇಯಸ್ ಎಂ. ಪಟೇಲ್ ತಿರುಗೇಟು ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ವಿಪಕ್ಷ ನಾಯಕರು ಹೇಳುವಷ್ಟು ಹದಗೆಟ್ಟಿಲ್ಲ. ಉತ್ತಮವಾಗಿಯೇ ಇದೆ. ಎಲ್ಲ ಜನಪ್ರತಿನಿಧಿಗಳು ಸರ್ಕಾರದ ಅಂಗ, ಸರ್ಕಾರದ ಅಧಿಕಾರಿಗಳಿಂದ ಕೆಲಸ ತೆಗೆದುಕೊಳ್ಳಬೇಕು. ಅದನ್ನು ಬಿಟ್ಟು ದಾಖಲೆ ಇಲ್ಲದೆ ಸುಖಾಸುಮ್ಮನೆ ಆರೋಪ ಮಾಡಬಾರದು. ನಾನು ಸಂಸದನಾಗಿ, ಕಾಂಗ್ರೆಸ್ ಪಕ್ಷದ ಪ್ರತಿನಿಧಿಯಾಗಿ ಹೇಳುವುದಾದರೆ ಹಾಸನ ಜಿಲ್ಲೆಯ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ. ಹಿಂದಿನ ದಿನಗಳಿಗೆ ಹೋಲಿಸಿದರೆ ಕೊಲೆ ಪ್ರಕರಣಗಳ ಸಂಖ್ಯೆ ಕಡಿಮೆ ಆಗಿದೆ. ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಸ್ವತಂತ್ರರು. ಇದಕ್ಕಾಗಿ ಹೋರಾಟ ಮಾಡುವುದು ಅವರಿಗೆ ಬಿಟ್ಟ ವಿಚಾರ. ಆದರೆ ರೇವಣ್ಣ ಅವರು ಸರ್ಕಾರದ ಬಗ್ಗೆ ಲಘುವಾಗಿ ಮಾತನಾಡುವುದು ಖಂಡನೀಯ ಎಂದರು.

ಏನಾದರೂ ಅಕ್ರಮ ದಂಧೆ, ಗಾಂಜಾ, ಇಸ್ಪೀಟ್ ಆಡುತ್ತಿದ್ದರೆ ಕ್ರಮ ಆಗಬೇಕು ಎಂಬುದು ನನ್ನದು ಕೂಡ ಒತ್ತಾಯವಾಗಿದೆ. ನಾವೆಲ್ಲ ಜನಪ್ರತಿನಿಧಿಗಳು, ಪರಸ್ಪರ ಆರೋಪ- ಪ್ರತ್ಯಾರೋಪ ಮಾಡುವ ಬದಲು ಅಭಿವೃದ್ಧಿಗೆ ಸಹಕಾರ ಕೊಡೋಣ. ಜನರಿಗೆ ತಪ್ಪು ಸಂದೇಶ ಹೋಗುವುದು ಬೇಡ. ಸರ್ಕಾರಿ ಕಾರ್ಯಕ್ರಮದಲ್ಲಿ ಸರ್ಕಾರದ ವಿರುದ್ಧ ಮಾತನಾಡಬಾರದು. ಅವರ ಮೇಲೆ ಗೌರವ ಇದೆ. ನನಗೆ ವಯಸ್ಸಾಗಿರುವಷ್ಟು ಅವರು ಶಾಸಕರಾಗಿ ಕೆಲಸ ಮಾಡಿದ್ದಾರೆ. ಇಂಥವರು ಯೋಚಿಸಿ ಮಾತನಾಡಬೇಕು. ಸುಮ್ಮನೆ ಆರೋಪ ಮಾಡಬಾರದು. ನಮಗೂ ಜವಾಬ್ದಾರಿ ಇದೆ. ಜಿಲ್ಲೆಯ ಅಭಿವೃದ್ಧಿಗೆ ಬೇಕಾಗುವ ಅನುದಾನವನ್ನು ಸರ್ಕಾರದ ಕಡೆಯಿಂದ ತರುವ ಪ್ರಯತ್ನ ಮಾಡುತ್ತಿದ್ದೇವೆ. ಇದು ಮುಂದುವರಿಯಲಿದೆ ಎಂದು ರಾಜ್ಯ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅವರಿಗೆ ಕಣ್ಣು ಆಪರೇಶನ್ ಆಗಿದ್ದು, ವಿಶ್ರಾಂತಿಯಲ್ಲಿ ಇದ್ದಾರೆ. ಅಲ್ಲೆ ಇದ್ದರೂ ನಮ್ಮ ಬಳಿ ಮಾಹಿತಿ ಪಡೆದು ಅಲ್ಲಿಂದಲೇ ಎಲ್ಲ ಸ್ಪಂದನೆ ಕೊಡುತ್ತಿದ್ದಾರೆ ಹೊರತು ಜಿಲ್ಲೆಯನ್ನು ಕಡೆಗಣಿಸಿಲ್ಲ. ಜಿಲ್ಲೆಯ ಬಗ್ಗೆ ಅವರ ಅಭಿವೃದ್ಧಿ ಯೋಚನೆಗಳು ನಿರಂತರವಾಗಿದೆ ಎಂದರು.

ಹಾಸನ ಜಿಲ್ಲೆಯಲ್ಲಿ ಮೆಕ್ಕೆಜೋಳಕ್ಕೆ ಬಿಳಿ ನುಸಿರೋಗ ತಗುಲಿರುವ ಬಗ್ಗೆ ಸಾರ್ವಜನಿಕರು, ರೈತರಿಗೆ ಅರಿವು ಮೂಡಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಸಂಬಂಧ ಶೀಘ್ರ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು. ರಾಜ್ಯದ ಕೃಷಿ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಶೇ.50 ರಷ್ಟು ಔಷಧವನ್ನು ಜಿಲ್ಲಾದ್ಯಂತ ವಿತರಣೆ ಮಾಡಲು ಸೂಚಿಸಲಾಗಿದೆ. ವರ್ಷಕ್ಕೊಂದು ಬೆಳೆ ಬೆಳೆಯುವ ಬಗ್ಗೆ ಮಾಹಿತಿ ಕೊಡಬೇಕು. ಫಸಲ್ ಭಿಮಾ ಯೋಜನೆಯಡಿ ನೋಂದಣಿ ಬಗ್ಗೆಯೂ ಅರಿವು ಮೂಡಿಸಬೇಕು. ನುಸಿರೋಗಕ್ಕೆ ಕಳಪೆ ಬಿತ್ತನೆ ಬೀಜ ಕಾರಣವೇ ಎಂಬ ಬಗ್ಗೆ ಜಿಕೆವಿಕೆಗೆ ಸ್ಯಾಂಪಲ್ ಕಳಿಸಿದ್ದು, ಎರಡು ದಿನದಲ್ಲಿ ವರದಿ ಬರಲಿದೆ. ನಂತರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ಮಾಧ್ಯಮ ವಕ್ತಾರ ದೇವರಾಜೇಗೌಡ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್, ಮುಖಂಡರಾದ ಖಯ್ಯುಂ, ಆರಿಫ್, ರಿಜ್ವಾನ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net