ಅಧಿಕಾರಿಗಳ ಮಿಂಚಿನ ಸಂಚಾರ

H4 DC Servey 7
Published on

ಹುಬ್ಬಳ್ಳಿ: ನಗರದ ಮಾರುಕಟ್ಟೆ ಪ್ರದೇಶಗಳಲ್ಲಿ ಗುರುವಾರ ಬೆಳ್ಳಂಬೆಳಗ್ಗೆ ಅಧಿಕಾರಿಗಳ ದಂಡು ಕಾಲ್ನಡಿಗೆಯಲ್ಲಿ ಸಂಚರಿಸಿತು. ಸ್ವತಃ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಪೊಲೀಸ್ ಆಯುಕ್ತ ಲಾಭೂರಾಮ ಹಾಗೂ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಅವರು ಜನತಾ ಬಜಾರ್, ದಾಜಿಬಾನಪೇಟೆ, ದುರ್ಗದ ಬೈಲ್, ಕೊಪ್ಪಿಕರ ರಸ್ತೆ ಮೊದಲಾದೆಡೆ ವಾಕಿಂಗ್ ಮಾಡಿದರು. ಪಾಲಿಕೆ ಹಾಗೂ ಪೊಲೀಸ್ ಇಲಾಖೆಯ ಕಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇವರ ಹಿಂದೆ ದೌಡಾಯಿಸಿದರು.

ಸುಗಮ ಸಂಚಾರ, ವಾಹನ ರ್ಪಾಂಗ್, ಫುಟ್​ಪಾತ್ ತೆರವು ಮುಂತಾದ ವಿಷಯಗಳ ಕುರಿತು ಸುಧಾರಣೆ ಮಾಡುವ ಮೂಲಕ ನಗರದ ಸೌಂದಯೀಕರಣ ಹೆಚ್ಚಿಸುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳ ನಿಟ್ಟಿನಲ್ಲಿ ಪೂರ್ವಭಾವಿ ಸಮೀಕ್ಷೆಗಾಗಿ ಈ ನಗರ ಪ್ರದಕ್ಷಿಣೆ ನಡೆಯಿತು.

ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬೆಳಗ್ಗೆ 9ರ ಸುಮಾರಿಗೆ ಈ ಅಧಿಕಾರಿಗಳು ಜಮಾಯಿಸಿದರು. ಅಲ್ಲಿಂದ ಫುಟ್​ಪಾತ್, ರ್ಪಾಂಗ್, ರಸ್ತೆ ಅಗಲ ಮುಂತಾದ ವಿಷಯಗಳನ್ನು ಪರಿಶೀಲಿಸುತ್ತ ಸಾಗಿದರು. ದಾಜಿಬಾನಪೇಟೆ ತುಳಜಾ ಭವಾನಿ ವೃತ್ತ, ಬೆಳಗಾಂ ಗಲ್ಲಿ, ದುರ್ಗದ ಬೈಲ್, ಬ್ರಾಡ ವೇ, ಕೊಪ್ಪಿಕರ ರಸ್ತೆ ಮಾರ್ಗವಾಗಿ ಸಾಗಿ ಲ್ಯಾಮಿಂಗ್ಟನ್ ರಸ್ತೆವರೆಗೆ ಪರಿಶೀಲನೆ ಕೈಗೊಂಡರು. ಫುಟ್​ಪಾತ್ ಮೇಲಿನ ಡಬ್ಬಾ ಅಂಗಡಿ ಇಟ್ಟುಕೊಂಡವರಿಗೆ ಅದನ್ನು ತೆರವುಗೊಳಿಸುವಂತೆ ಎಚ್ಚರಿಕೆ ನೀಡಿದರು. ಒತ್ತುವರಿಕಾರರಿಗೆ ನೋಟಿಸ್ ನೀಡುವಂತೆಯೂ ಜಿಲ್ಲಾಧಿಕಾರಿಗಳು ಮೌಖಿಕವಾಗಿ ಆದೇಶಿಸಿದರು. ಕೆಲ ಅಂಗಡಿಯವರು ಫುಟ್​ಪಾತ್ ಮೇಲೆ ತಮ್ಮ ಉತ್ಪನ್ನಗಳನ್ನು ಇಟ್ಟಿರುವುದನ್ನು ಕಂಡು ಗರಂ ಆದ ಜಿಲ್ಲಾಧಿಕಾರಿಗಳು ತಕ್ಷಣವೇ ತೆರವು ಮಾಡಿಸಿದರು. ಹಲವು ಕಡೆಗಳಲ್ಲಿ ಸಿಬ್ಬಂದಿಯಿಂದ ಟೇಪ್ ಹಿಡಿಸಿ ರಸ್ತೆಯ ಅಗಲವನ್ನು ಅಳತೆ ಮಾಡಿಸಿದರು.

ದಾಜಿಬಾನಪೇಟೆ, ದುರ್ಗದಬೈಲ್ ಸೇರಿದಂತೆ ಕೆಲ ರಸ್ತೆಗಳಲ್ಲಿ ಒನ್​ವೇ ಮಾಡುವ ಕುರಿತು ಪೊಲೀಸ್ ಕಮಿಷನರ್ ಲಾಭೂರಾಮ ಅವರು ರ್ಚಚಿಸಿದ್ದು ಗಮನ ಸೆಳೆಯಿತು. ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಆರ್.ಬಿ. ಬಸರಗಿ, ಎಸಿಪಿ ಎಂ.ಎಸ್. ಹೊಸಮನಿ, ಇನ್​ಸ್ಪೆಕ್ಟರ್​ಗಳಾದ ರವಿಚಂದ್ರ. ಡಿ.ಬಿ., ಆನಂದ ಒನಕುದ್ರೆ, ಎನ್.ಸಿ. ಕಾಡದೇವರ, ಎಂ.ವಿ. ಹೊಸಪೇಟ, ಪಿಎಸ್​ಐ ಎಸ್.ಎಸ್. ದೇಸಾಯಿ, ಪಾಲಿಕೆ ಆಹಾರ ನಿರೀಕ್ಷಕರು, ಪಾಲಿಕೆ ಅಧಿಕಾರಿ, ಸಿಬ್ಬಂದಿ ಮತ್ತಿತರರು ಇದ್ದರು.

ಅಗತ್ಯ ಇರುವಲ್ಲಿ ಭೂಸ್ವಾಧೀನ...ಕೊಪ್ಪಿಕರ ರಸ್ತೆ ವಿಸ್ತರಣೆ

ಫುಟ್​ಪಾತ್, ರಸ್ತೆ ಒತ್ತುವರಿ ತೆರವುಗೊಳಿಸುವ ಮೂಲಕ ಹಾಗೂ ಅಗತ್ಯ ಇರುವಲ್ಲಿ ಭೂಸ್ವಾಧೀನ ಮಾಡಿಕೊಂಡು ಕೊಪ್ಪಿಕರ ರಸ್ತೆಯನ್ನು 24 ಮೀಟರ್ ವಿಸ್ತರಣೆ ಮಾಡುವ ಬಗ್ಗೆ ಈ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಗಂಭೀರವಾಗಿ ರ್ಚಚಿಸಿದರು. ಈ ರಸ್ತೆ ಸರಿಯಾಗಿ ವಿಸ್ತರಿಸಿ, ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಅಗತ್ಯವಾದ ಬಿಗಿ ಕ್ರಮಗಳನ್ನು ಕೈಗೊಳ್ಳುವಂತೆ ಕೆಳ ಹಂತದ ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಿದರು.

ಅನಧಿಕೃತ ಚಾಟ್ಸ್ ಅಂಗಡಿಗಳ ತೆರವು

ಹುಬ್ಬಳ್ಳಿ ನಗರದ ದುರ್ಗದಬೈಲ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ದೀರ್ಘ ಕಾಲದಿಂದ ಸಾರ್ವಜನಿಕ ರಸ್ತೆಯ ಇಕ್ಕೆಲದಲ್ಲಿ ಅತಿಕ್ರಮಣ ಮಾಡಿಕೊಂಡು, ಅನಧಿಕೃತವಾಗಿ ಕಾಯಂ ಆಗಿದ್ದ ಗೂಡಂಗಡಿ ಮಾಲೀಕರಿಗೆ ಮಹಾನಗರ ಪಾಲಿಕೆಯವರು ಗುರುವಾರ ಬಿಸಿ ಮುಟ್ಟಿಸಿದರು.

ಪೊಲೀಸ್ ರಕ್ಷಣೆಯಲ್ಲಿ ಸ್ಥಳಕ್ಕೆ ತೆರಳಿದ ಅಧಿಕಾರಿಗಳು, ರಸ್ತೆ ಮತ್ತು ಪಾಲಿಕೆಯ ಜಾಗ ಅತಿಕ್ರಮಿಸಿಕೊಂಡವರಿಗೆ ತಕ್ಷಣ ಸ್ವಯಂ ತೆರವುಗೊಳಿಸಿಕೊಳ್ಳಲು ಸೂಚಿಸಿ ಸ್ವಲ್ಪ ಕಾಲಾವಕಾಶ ನೀಡಿದರು. ಕುರುಕಲು ತಿನಿಸುಗಳು ಸೇರಿ ವಿವಿಧ ವಸ್ತುಗಳನ್ನು ಮಾರಾಟ ಮಾಡುವ ಹೆಚ್ಚಿನವರು ತಾವಾಗಿಯೇ ಗೂಡಂಗಡಿಗಳನ್ನು ತಳ್ಳಿಕೊಂಡು, ಎತ್ತಿಕೊಂಡು ಹೋದರು. ಕೆಲವರು ಬಗ್ಗದಿದ್ದಾಗ ಪಾಲಿಕೆ ಅಧಿಕಾರಿಗಳು ತಾವೇ ಅಂಗಡಿಗಳನ್ನು ಎತ್ತಿಕೊಂಡು ಹೋಗುವುದಾಗಿ ಎಚ್ಚರಿಕೆ ನೀಡಿದರು. 20ರಷ್ಟು ಅತಿಕ್ರಮಣ ತೆರವುಗೊಳಿಸಲಾಯಿತು. ಕಾರ್ಯಾಚರಣೆ ಮುಂದುವರಿಯಲಿದೆ. ಈಗ ತೆರವಾಗಿರುವಲ್ಲಿ ಮತ್ತೆ ಅತಿಕ್ರಮಣ ಮಾಡದಂತೆ ಕಣ್ಗಾವಲು ಇಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಚಾರ ದಟ್ಟಣೆ ತಪ್ಪಿಸುವ ಸಲುವಾಗಿ ಗುರುವಾರ ಬೆಳಗ್ಗೆ ಜಿಲ್ಲಾಧಿಕಾರಿಯವರ ನೇತೃತ್ವದ ತಂಡ ದಾಜಿಬಾನ ಪೇಟೆ, ದುರ್ಗದಬೈಲ್, ಬ್ರಾಡವೇ ಸೇರಿ ಪ್ರಮುಖ ಮಾರುಕಟ್ಟೆ ಪ್ರದೇಶದಲ್ಲಿ ಪರಿಶೀಲನೆ ನಡೆಸಿತ್ತು. ಅತಿಕ್ರಮಣ ತೆರವಿನಿಂದ ಒಂದಿಷ್ಟು ದಟ್ಟಣೆ ತಪ್ಪಿಸಲು ತೀರ್ವನಿಸಿದ್ದರ ಪ್ರಕಾರ ಕ್ರಮ ಕೈಗೊಳ್ಳಲಾಯಿತು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net