

ನಾಗಮಂಗಲ: ತಾಲೂಕಿನಲ್ಲಿ ಯಾವುದೇ ಮಧ್ಯವರ್ತಿಗಳಿಲ್ಲದೆ, ಒಂದು ನಯಾಪೈಸೆ ಲಂಚ ನೀಡದೆ ತಮ್ಮ ಕೆಲಸವನ್ನು ಜನರು ಮಾಡಿಸಿಕೊಳ್ಳಿ ಹಾಗೂ ಯಾವ ಅಧಿಕಾರಿಯ ಬಳಿಯೂ ತಮ್ಮ ಕೆಲಸಕ್ಕಾಗಿ ವಿನಂತಿ ಮಾಡುವ ಅವಶ್ಯಕತೆಯಿಲ್ಲವಾಗಿದ್ದು, ತಮ್ಮ ಕೆಲಸ ಮಾಡಿಸಿಕೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸಾರ್ವಜನಿಕರಿಗೆ ಕರೆ ನೀಡಿದರು.
ತಾಲೂಕಿನ ಕಾಳಿಂಗನಹಳ್ಳಿ, ಚುಂಚನಹಳ್ಳಿ ಹಾಗೂ ನೆಲ್ಲಿಗೆರೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಶನಿವಾರ ಜನಸಂಪರ್ಕ ಸಭೆ ನಡೆಸಿ ಮಾತನಾಡಿದರು.
ತಾಲೂಕಿನ ಜನತೆ ತಮ್ಮ ಕೆಲಸಕ್ಕಾಗಿ ಯಾವ ಅಧಿಕಾರಿಯ ಬಳಿ ಅಂಗಲಾಚುವ ಅವಶ್ಯಕತೆಯಿಲ್ಲ. ಅವರ ಕಚೇರಿಗೆ ದಿನನಿತ್ಯ ಅಲೆದು ಅವರಿಗೆ ಕೈಮುಗಿಯುವುದು ಬೇಡ. ನೀವು ಮತ ಹಾಕಿ ಗೆಲ್ಲಿಸಿ ಶಾಸಕನ್ನಾಗಿ ಮಾತ್ರ ಮಾಡಿರದೆ ಸರ್ಕಾರದ ಸಚಿವನನ್ನಾಗಿ ಮಾಡಿದ್ದೀರಿ. ಯಾವ ಅಧಿಕಾರಿ ಕೆಲಸ ಮಾಡಿಕೊಡದೆ ನಿರ್ಲಕ್ಷ್ಯ ಮಾಡುತ್ತಾರೋ ಅವರ ಬಗ್ಗೆ ಮೇಲಾಧಿಕಾರಿಯ ಗಮನಕ್ಕೆ ತನ್ನಿ, ಆದರೂ ತಮ್ಮ ಸಮಸ್ಯೆ ಬಗೆಹರಿಯದಿದ್ದರೆ ನನ್ನ ಕಚೇರಿಗೆ ತಿಳಿಸಿ ಕೆಲಸ ಮಾಡಿಕೊಡುತ್ತೇವೆ. ಅಧಿಕಾರಿಗಳು ಕಿರುಕುಳ ಕೊಡುತ್ತಿದ್ದರೆ ಇಂದೇ ಕೊನೆ. ನಾವು ಗೆಲ್ಲಿಸಿರುವ ಶಾಸಕರು ನಿಮ್ಮನ್ನು ಸುಮ್ಮನೆ ಬಿಡಲ್ಲ ಎಂದು ಮುಖಕ್ಕೆ ಹೇಳಿ, ಯಾರ ಬಳಿಯು ವಿನಂತಿ ಮಾಡಬೇಡಿ. ನೇರವಾಗಿ ಮಧ್ಯವರ್ತಿಯಿಲ್ಲದೆ ಅಧಿಕಾರಿಯ ಬಳಿ ಕೆಲಸ ಮಾಡಿಸಿಕೊಳ್ಳಿ. ಯಾರಿಗೂ ಒಂದು ನಯಾಪೈಸೆ ಲಂಚ ಕೊಡಬೇಡಿ ಎಂದು ಸಾರ್ವಜನಿಕರಿಗೆ ತಿಳಿಸಿದರು.
ಕಳೆದ 4 ತಿಂಗಳ ಹಿಂದೆ ಬಹಳ ಅಪೇಕ್ಷೆಯಿಟ್ಟು ರಾಜ್ಯದಲ್ಲಿ ಬದಲಾವಣೆಯ ತೀರ್ಮಾನ ಮಾಡಿ ಕಾಂಗ್ರೆಸ್ ಸರ್ಕಾರ ತಂದಿದ್ದೀರಿ. 1989ರ ನಂತರ ಹೆಚ್ಚು ಬಹುಮತ ಬಂದಿರುವ ಸರ್ಕಾರ ನಮ್ಮದಾಗಿದೆ. ರಾಜ್ಯದ ಸಚಿವನಾಗಿರುವ ಕಾರಣ ಗ್ರಾಮಗಳಿಗೆ ಭೇಟಿ ನೀಡಲು ಸಾಧ್ಯವಾಗಿಲ್ಲ. 123 ವರ್ಷದ ನಂತರ ಅತಿ ಕಡಿಮೆ ಮಳೆಯಾಗಿರುವುದು ಈ ವರ್ಷವಾಗಿದೆ. ಇಡೀ ರಾಷ್ಟ್ರದಲ್ಲಿ ಬರಗಾಲ ಆವರಿಸಿಕೊಂಡಿದೆ. 236 ತಾಲೂಕಿನಲ್ಲಿ 195 ತಾಲೂಕು ಒಂದೇ ಬಾರಿಗೆ ಬರಗಾಲ ಈ ಬಾರಿ ಘೋಷಣೆಯಾಗಿದೆ ಎಂದರು.
ತಾಲೂಕಿನ ಅಭಿವೃದ್ಧಿಗೆ ನಾನು ಶ್ರಮಿಸಲಿದ್ದು, ಆ ಮೂಲಕ ನೀವು ನೀಡಿರುವ ಮತಕ್ಕೆ ಫಲಶೃತಿ ನೀಡುತ್ತೇನೆ. ಸರ್ಕಾರ ಈಗಾಗಲೇ 4 ಗ್ಯಾರಂಟಿಗಳನ್ನು ಈಡೇರಿಸಿದೆ. ಯಾವುದೇ ಮಧ್ಯವರ್ತಿಗಳ ಸಹಕಾರವೇ ಇಲ್ಲದೆ ಸರ್ಕಾರದ 4 ಗ್ಯಾರಂಟಿಗಳು ಜನರಿಗೆ ನೇರವಾಗಿ ತಲುಪುತ್ತಿವೆ. ಸರ್ಕಾರ ಏನೇ ಸಂಕಷ್ಟದಲ್ಲಿದ್ದರೂ ಗ್ಯಾರಂಟಿಗಳು 5 ವರ್ಷ ಜಾರಿಯಲ್ಲಿರುತ್ತವೆ ಎಂದು ಅಭಯ ನೀಡಿದರು.
ಜನರ ಸಮಸ್ಯೆ ಆಲಿಸಿದ ಸಚಿವ: ಮೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 150ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು. ಎಲ್ಲ ಅರ್ಜಿಗಳನ್ನು ಸಚಿವ ಎನ್.ಚಲುವರಾಯಸ್ವಾಮಿ ಅರ್ಜಿದಾರರಿಂದ ನೇರವಾಗಿ ಸ್ವೀಕರಿಸಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಯ ಜತೆ ಚರ್ಚಿಸಿ ಇತ್ಯರ್ಥಪಡಿಸುವಂತೆ ಸೂಚಿಸಿದರು.
ಈ ಸಂದರ್ಭ ಪಡಿತರ ವಿತರಣೆ, ಖಾತೆ ಬದಲಾವಣೆ, ಅರಣ್ಯ ಇಲಾಖೆ ಸಮಸ್ಯೆ, ಕಂದಾಯ ಇಲಾಖೆ, ಪಂಚಾಯತ್ ರಾಜ್, ಕುಡಿಯುವ ನೀರು ಮತ್ತು ನೈರ್ಮಲ್ಯ, ಸ್ಮಶಾನ, ಜಮೀನು ಸರ್ವೆ ಸೇರಿದಂತೆ ಮುಂತಾದ ಸಮಸ್ಯೆಗಳು ಕೇಳಿಬಂದವು.
ಜಿ.ಪಂ. ಉಪಕಾರ್ಯದರ್ಶಿ ಆನಂದ್, ಉಪವಿಭಾಗಾಧಿಕಾರಿ ನಂದೀಶ್, ತಹಸೀಲ್ದಾರ್ ನಯಿಂ ಉನ್ನಿಸಾ, ತಾ.ಪಂ. ಇಒ ಚಂದ್ರಮೌಳಿ, ಎಸಿಎಫ್ ಶಿವರಾಂ, ಪಶುಸಂಗೋಪನೆ ಇಲಾಖೆಯ ಡಾ.ಕುಮಾರ್, ಸಿಪಿಐ ನಿರಂಜನ್, ಎಡಿಎಲ್‌ಆರ್ ಪ್ರಮೋದ್, ಮುಖಂಡರಾದ ಕೃಷ್ಣೇಗೌಡ, ರಾಜೇಶ್, ಚೇತನ್ ಸೇರಿದಂತೆ ಮತ್ತಿತರರಿದ್ದರು.