

ಚಿಕ್ಕಬಳ್ಳಾಪುರ : ವಿವಿಧ ಇಲಾಖೆಯ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರ ಗುತ್ತಿಗೆ ನೌಕರರರಿಗೆ ಗುತ್ತಿಗೆ ಸಂಸ್ಥೆಗಳು ತಿಂಗಳಾನುಗಟ್ಟಲೇ ವೇತನ ನೀಡಿಲ್ಲ. ಇದರ ಅರಿವಿದ್ದರೂ ಅಧಿಕಾರಿಗಳು ಮೌನ ವಹಿಸಿರುವುದು ಸರಿಯಲ್ಲ ಎಂದು ಜಿಲ್ಲಾಪಂಚಾಯಿತಿ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ಜಿಪಂ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಒತ್ತಡ ಹೇರಿ, ಕೆಲಸ ಮಾಡಿಕೊಳ್ಳುವ ಅಧಿಕಾರಿಗಳೇ ಕಚೇರಿಯಲ್ಲಿನ ಸಿಬ್ಬಂದಿಗೆ 3 ತಿಂಗಳಿಂದ ವೇತನ ಸಿಗದಿದ್ದರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಹೊರ ಗುತ್ತಿಗೆ ನೌಕರರು ಹಲವರ ಬಳಿ ಅಳಲು ತೋಡಿಕೊಳ್ಳುತ್ತಿದ್ದು, ಜಿಲ್ಲಾ ಪಂಚಾಯಿತಿ ಮರ್ಯಾದೆ ಹರಾಜಾಗುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.
ಗುತ್ತಿಗೆ ಸಂಸ್ಥೆಗಳಿಗೆ ಸರ್ಕಾರದಿಂದ ಕಾಲಕಾಲಕ್ಕೆ ಹಣ ನೀಡಲಾಗುತ್ತದೆ. ಯಾವುದೇ ಕಾರಣಕ್ಕೂ ನೌಕರರ ವೇತನ ಬಾಕಿ ಉಳಿಸಿಕೊಳ್ಳುವಂತಿಲ್ಲ. ಆಯಾ ಇಲಾಖೆಯ ಅಧಿಕಾರಿಗಳೇ ಪ್ರತಿ ತಿಂಗಳು ಸಂಬಳ ಕೊಡಿಸಬೇಕು ಎಂದು ತಾಕೀತು ಮಾಡಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಜಿಲ್ಲೆಯಲ್ಲಿ 64 ಕೇಂದ್ರಗಳನ್ನು ಗುರುತಿಸಲಾಗಿದೆ. ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ನಾಗೇಶ್ ಸಭೆಗೆ ತಿಳಿಸಿದರು.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯಾತ್ಮಕ 311 ಗ್ರಾಮಗಳಿವೆ, 97 ಗ್ರಾಮಗಳಿಗೆ ಟ್ಯಾಂಕರ್ ಮತ್ತು 214 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಶಿವಕುಮಾರ್ ಮಾಹಿತಿ ನೀಡಿದರು.ಜಿಪಂ ಉಪಾಧ್ಯಕ್ಷೆ ಪಿ.ನಿರ್ಮಲಾ ಮುನಿರಾಜು, ಸಿಇಒ ಬಿ ೌಜೀಯಾ ತರನ್ನುಮ್, ಯೋಜನಾ ನಿರ್ದೇಶಕ ಕೆ.ಗಿರಿಜಾ ಶಂಕರ್ ಮತ್ತಿತರರು ಇದ್ದರು.
ಕೆಲಸ ಅಪೂರ್ಣ, ದಾಖಲೆಯಲ್ಲಿ ಪೂರ್ಣ: ಅರ್ಧಂಬರ್ಧ ಕೆಲಸಕ್ಕೂ ಅಧಿಕಾರಿಗಳು ದಾಖಲೆಗಳಲ್ಲಿ ಪೂರ್ಣಗೊಂಡ ವರದಿ ನೀಡುತ್ತಿರುವ ಮಾಹಿತಿ ಕೆಡಿಪಿ ಸಭೆಯಲ್ಲಿ ಬಹಿರಂಗಗೊಂಡಿತು. ಲಿಂಕ್ ಡಾಂಕ್ಯುಮೆಂಟ್‌ನಲ್ಲಿ ಬಿಡುಗಡೆಯಾದ 20 ಲಕ್ಷ ರೂ. ವೆಚ್ಚದಲ್ಲಿ ಕೈಗೊಂಡ ಚಿಂತಾಮಣಿ ಕಸಬಾ ಮತ್ತು ಮಂಡಿಕಲ್ ರೈತ ಸಂಪರ್ಕ ಕೇಂದ್ರದ ಕೆಲಸ ಪೂರ್ಣಗೊಂಡಿಲ್ಲ. ಆದರೆ ಕಾಮಗಾರಿ ನಿರ್ವಹಣೆ ಹೊತ್ತಿದ್ದ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಗೆ ಹಣ ನೀಡಲಾಗಿದೆ. ಈಗ ಎಲ್ಲ ಕೆಲಸ ಪೂರ್ಣಗೊಂಡಿರುವ ವರದಿ ಬಂದಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ಎಲ್.ರೂಪಾ ಗಮನ ಸೆಳೆದರು, ಇದಕ್ಕೂ ಮುನ್ನ ಕಾರ್ಯಪಾಲಕ ಅಭಿಯಂತ, ಕಾಮಗಾರಿ ಪೂರ್ಣಗೊಳಿಸಿರುವ ಬಗ್ಗೆ ವಾದಿಸಿದರೂ ಕೊನೆಗೆ ತಪ್ಪು ಒಪ್ಪಿಕೊಂಡರು.
ಮಂಜೂರಾದ ಹಣ ವ್ಯರ್ಥ : ಜಿಪಂ ಹಾಗೂ ತಾಪಂ ಮಟ್ಟದಲ್ಲಿ ಸರ್ಕಾರದ ಅನುದಾನ ವಾಪಸ್ಸಾಗಿರುವುದಕ್ಕೆ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು. ಜಿಪಂನ ವಾರ್ಷಿಕ ಬಜೆಟ್ 15 ಕೋಟಿ ರೂ. ಪೈಕಿ 1 ಕೋಟಿ ರೂ., ಜಿಲ್ಲೆಯ 6 ತಾಪಂಗಳಿಂದ ಸುಮಾರು ಒಂದೂವರೆ ಕೋಟಿ ರೂ. ಖರ್ಚಾಗದೇ ಸರ್ಕಾರಕ್ಕೆ ವಾಪಸಾಗಿದೆ. ಅನುದಾನ ಮಂಜೂರಾತಿಗೆ ಕಸರತ್ತು ನಡೆಸುತ್ತಿರುವುದರ ನಡುವೆ ಅಧಿಕಾರಿಗಳು ಸದ್ಬಳಕೆಯಲ್ಲಿ ನಿರ್ಲಕ್ಷೃ ತೋರುತ್ತಿದ್ದಾರೆ ಎಂದು ಸದಸ್ಯರು ಕಿಡಿಕಾರಿದರು.
ನಾನು ಪಿಡಿಒನಾ? ಸಿಇಒನಾ?: ಜನಪ್ರತಿನಿಧಿಗಳಿಗೆ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಮರ್ಪಕವಾಗಿ ಮಾಹಿತಿ ಸಿಗುತ್ತಿಲ್ಲ. ಕೆಲಸದ ಸ್ಥಳದಲ್ಲಿ ಅನುದಾನ ವೆಚ್ಚ, ಕೆಲಸದ ವ್ಯಾಪ್ತಿ ಸೇರಿ ಹಲವು ವಿಚಾರಗಳು ಸ್ಪಷ್ಟವಾಗಿ ತಿಳಿಯುವ ರೀತಿಯಲ್ಲಿ ನಾಮಲಕಗಳನ್ನೂ ಅಳವಡಿಸುತ್ತಿಲ್ಲ. ಇದಕ್ಕೆ ಅವಕಾಶ ನೀಡದಂತೆ ಸಂಬಂಧಪಟ್ಟ ಕಾರ್ಯಪಾಲಕ ಅಭಿಯಂತರಿಗೆ ಜಿಪಂ ಸಿಇಒ ಬಿ ೌಜೀಯಾ ತರನ್ನುಮ್ ಎಚ್ಚರಿಕೆ ನೀಡಿದರು, ಪ್ರತಿಕ್ರಿಯಿಸಿದ ಕೆಆರ್‌ಡಿಐಡಿಎಲ್ ಕಾರ್ಯಪಾಲಕ ಅಭಿಯಂತ ರವಿಶಂಕರ್, ವಾಟ್ಸ್‌ಆ್ಯ್ಗೆ ಚಿತ್ರಗಳನ್ನು ಕಳುಹಿಸುತ್ತಿರುವುದಾಗಿ ತಿಳಿಸಿದರು. ಉತ್ತರಕ್ಕೆ ಗರಂ ಆದ ತರನ್ನುಮ್, ನಾನು ಪಿಡಿಒನಾ? ಸಿಇಒನಾ ಎಂದು ಪ್ರಶ್ನಿಸಿದರು.