

ರೋಣ: ತಾಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಮರ್ಪಕ ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಶಾಸಕ ಕಳಕಪ್ಪ ಬಂಡಿ ಅವರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಬುಧವಾರ ಜರುಗಿತು.
ಪಟ್ಟಣದ ತಾಪಂ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಗದಗ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಕೊಟ್ರೇಶ ವಿಭೂತಿ ಅವರಿಗೆ ‘ನಿಮ್ಮ ವ್ಯಾಪ್ತಿಯಲ್ಲಿ ಬರುವ ಶಾಲಾ ಮಕ್ಕಳ ಬಿಸಿಯೂಟಕ್ಕೆ ಬಳಸುವ ತೊಗರಿಬೇಳೆಯ ಗುಣಮಟ್ಟ ಹೇಗಿದೆ?’ ಎಂದು ಪ್ರಶ್ನಿಸಿದರು. ಪ್ರತಿಕ್ರಿಯಿಸಿದ ಕೊಟ್ರೇಶ ವಿಭೂತಿ, ‘ಬಹಳ ಚೆನ್ನಾಗಿದೆ’ ಎಂದರು. ಇದರಿಂದ ಅಸಮಾಧಾನಗೊಂಡ ಶಾಸಕರು, ‘ಆಯ್ತು ನಡೀರಿ, ನಿಮ್ಮ ಮಾಹಿತಿ ಎಷ್ಟು ಸಮರ್ಪಕವಾಗಿದೆ ಎನ್ನುವುದನ್ನು ನೋಡೇ ಬಿಡೋಣ. ಖುದ್ದು ನಾನೇ ಶಾಲೆಗಳಿಗೆ ಭೇಟಿ ನೀಡಿ ಬಿಸಿಯೂಟಕ್ಕೆ ಬಳಕೆಯಾಗುವ ತೊಗರಿ ಬೇಳೆಯನ್ನು ಪರಿಶೀಲಿಸಿದ್ದೇನೆ. ಅತ್ಯಂತ ಕಳೆಪೆಯಾಗಿರುವುದರಿಂದ ಅವುಗಳ ಪೂರೈಕೆಯನ್ನು ತಡೆ ಹಿಡಿಯುವಂತೆ ಮೇಲಾಧಿಕಾರಿಗಳಿಗೆ ತಿಳಿಸಿದ್ದೇನೆ’ ಎಂದರು.
ಅಕ್ರಮಕ್ಕೆ ಕುಮ್ಮಕ್ಕು?: ಗ್ರಾಮೀಣ ಭಾಗದ ಚಹಾ, ಬೀಡಿ, ಕಿರಾಣಿ ಅಂಗಡಿಗಳಲ್ಲೂ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎನ್ನುವ ದೂರುಗಳು ಕೇಳಿ ಬರುತ್ತಿವೆ. ನೀವೇನು ಮಾಡುತ್ತಿದ್ದೀರಿ? ಟಾರ್ಗೆಟ್ ಮುಟ್ಟುವ ಉದ್ದೇಶದಿಂದ ನೀವೇ ಇಂತಹ ಅಕ್ರಮಕ್ಕೆ ಕುಮ್ಮಕ್ಕು ನೀಡಿದ್ದೀರಾ? ಎಂದು ಶಾಸಕರು ಅಬಕಾರಿ ಇಲಾಖೆಯ ಎಎಸ್ಐ ಎಸ್.ಬಿ. ನಾಯಕ ಅವರ ವಿರುದ್ಧ ಕೆಂಡಾಮಂಡಲರಾದರು. ಅಲ್ಲದೆ, ಅಕ್ರಮಕ್ಕೆ ಕಡಿವಾಣ ಹಾಕುವಂತೆ ಸೂಚಿಸಿದರು. ಸಭೆಯಲ್ಲಿ ರೋಣ ತಾಪಂ ಇಒ ಸಂತೋಷ ಪಾಟೀಲ, ಗದಗ ತಾಪಂ ಇಒ ಡಾ. ಎಂ.ಎಸ್. ಜಿಣಗಾ, ತಾಪಂ ವ್ಯವಸ್ಥಾಪಕ ಸಿ.ಎಸ್ ನೀಲಗುಂದ ಇತರರಿದ್ದರು.
70 ಸಾವಿರ ಜನರಿಗೆ ಮಾಸಾಶನ!: ರೋಣ ಉಪ ತಹಸೀಲ್ದಾರ್ ಜೆ.ಟಿ. ಕೊಪ್ಪದ ಅವರು ಸಭೆಗೆ ಮಾಹಿತಿ ನೀಡಿ, ರೋಣ ತಾಲೂಕಿನಲ್ಲಿ ಸುಮಾರು 70 ಸಾವಿರ ಜನರು ಸರ್ಕಾರದ ವಿವಿಧ ರೀತಿಯ ಮಾಸಾಶನಗಳನ್ನು ಪಡೆಯುತ್ತಿದ್ದಾರೆ ಎಂದಾಗ ಶಾಸಕರು ಕೆಲಹೊತ್ತು ದಂಗಾದರು. ‘ಏನ್ರೀ ರೋಣ ಮತಕ್ಷೇತ್ರದ ಒಟ್ಟಾರೆ ಜನಸಂಖ್ಯೆಯ ಶೇ.50 ರಷ್ಟು ಜನರು ಮಾಸಾಶನ ತೆಗೆದುಕೊಳ್ಳಲು ಸಾಧ್ಯವೇ?’ ಎಂದರು. ಆಗ, ಪಕ್ಕದಲ್ಲಿದ್ದ ಗಜೇಂದ್ರಗಡ ತಹಸೀಲ್ದಾರ್ ರಜನಿಕಾಂತ ಕೆಂಗೇರಿ ಉತ್ತರಿಸಿ, ‘ಇವರು ನೀಡಿದ ಮಾಹಿತಿ ತಪ್ಪಿರಬಹುದು. ಏಕೆಂದರೆ ಗಜೇಂದ್ರಗಡ ತಾಲೂಕಿನಲ್ಲಿ ಕೇವಲ 20 ಸಾವಿರ ಜನರು ಮಾಸಾಶನ ಪಡೆಯುತ್ತಿದ್ದಾರೆ’ ಎಂದರು.
ಗ್ರಾಮೀಣ ಭಾಗದಲ್ಲಿ ಚಿರತೆ ಕಾಟ: ಹೆಸ್ಕಾಂ ಇಂಜಿನಿಯರ್ ಜೆ.ಟಿ. ರಾಜೂರ ಅವರು ಸಭೆಗೆ ಮಾಹಿತಿ ನೀಡುತ್ತಿರುವಾಗ ಮಧ್ಯಪ್ರವೇಶಿಸಿದ ಶಾಸಕ ಕಳಕಪ್ಪ ಬಂಡಿ ಅವರು, ‘ನಾಗೇಂದ್ರಗಡ, ನೆಲ್ಲೂರ, ಪ್ಯಾಟಿ ಗ್ರಾಮಗಳ ಸುತ್ತ ಚಿರತೆ ಹಾವಳಿ ಇರುವುದರಿಂದ ರಾತ್ರಿ ವೇಳೆ ರೈತರು ತಮ್ಮ ಜಮೀನಿನಲ್ಲಿ ಬೆಳೆಗೆ ನೀರು ಹಾಯಿಸಲು ಹೋದರೆ ಸಮಸ್ಯೆಯಾಗುತ್ತದೆ. ಹೀಗಾಗಿ ರೈತರು ಜಮೀನುಗಳಿಗೆ ನೀರು ಹಾಯಿಸಲು ಅನುಕೂಲವಾಗುವಂತೆ ಹಗಲು ಹೊತ್ತು ಪೂರ್ತಿ ವಿದ್ಯುತ್ ಪೂರೈಸಬೇಕು’ ಎಂದು ಸೂಚಿಸಿದರು. ಅರಣ್ಯಾಧಿಕಾರಿ ಅನ್ವರ್ ಕೊಲ್ಹಾರ ಪ್ರತಿಕ್ರಿಯಿಸಿ, ‘ಚಿರತೆ ಹಾವಳಿ ಇರುವ ನಾಗೇಂದ್ರಗಡ, ನೆಲ್ಲೂರ, ಪ್ಯಾಟಿ ಗ್ರಾಮಗಳ ಸುತ್ತ ಬೋನುಗಳನ್ನು ಇಡಲಾಗಿದೆ. ಅಲ್ಲದೆ. ಅಲ್ಲಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು ತಾಲೂಕು ಮಟ್ಟದ ಅರಣ್ಯ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಿ ಅಹೋರಾತ್ರಿ ಗಸ್ತು ತಿರಗಲಾಗುತ್ತಿದೆ’ ಎಂದರು.